ಶುಕ್ರವಾರ, ಅಕ್ಟೋಬರ್ 22, 2021
29 °C

ಐದು ತಿಂಗಳ ಗರಿಷ್ಠ ಮಟ್ಟಕ್ಕೆ ಜಿಎಸ್‌ಟಿ ಸಂಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ದೇಶದಲ್ಲಿ ಸತತ ಮೂರನೆಯ ತಿಂಗಳಿನಲ್ಲಿಯೂ ₹ 1 ಲಕ್ಷ ಕೋಟಿಗಿಂತ ಹೆಚ್ಚಾಗಿದೆ. ಸೆಪ್ಟೆಂಬರ್‌ನಲ್ಲಿ ಒಟ್ಟು ₹ 1.17 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ ಆಗಿದೆ. ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ವರಮಾನ ಹೆಚ್ಚಿನ ಮಟ್ಟದಲ್ಲಿ ಇರಲಿದೆ ಎಂಬ ನಿರೀಕ್ಷೆಯನ್ನು ಇದು ಮೂಡಿಸಿದೆ.

2020ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಆಗಿದ್ದ ಜಿಎಸ್‌ಟಿ ಸಂಗ್ರಹ ₹ 95,480 ಕೋಟಿ. 2019ರ ಸೆಪ್ಟೆಂಬರ್‌ನಲ್ಲಿ ₹ 91,916 ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಈ ಬಾರಿ ಆಗಿರುವ ಸಂಗ್ರಹವು ಹಿಂದಿನ ಎರಡು ವರ್ಷಗಳಲ್ಲಿನ ಸಂಗ್ರಹಕ್ಕಿಂತ ಹೆಚ್ಚು. ಇದು, ಏಪ್ರಿಲ್‌ ನಂತರದಲ್ಲಿ ಆಗಿರುವ ಅತಿಹೆಚ್ಚಿನ ಸಂಗ್ರಹ ಕೂಡ ಹೌದು. ಏಪ್ರಿಲ್‌ನಲ್ಲಿ ₹ 1.41 ಲಕ್ಷ ಕೋಟಿ ಸಂಗ್ರಹವಾಗಿತ್ತು. 

ಸೆಪ್ಟೆಂಬರ್‌ ತಿಂಗಳ ಜಿಎಸ್‌ಟಿ ವರಮಾನದಲ್ಲಿ ಕೇಂದ್ರ ಜಿಎಸ್‌ಟಿ ಪಾಲು ₹ 20,578 ಕೋಟಿ, ರಾಜ್ಯ ಜಿಎಸ್‌ಟಿ ಪಾಲು ₹ 26,767 ಕೋಟಿ, ಸಮಗ್ರ ಜಿಎಸ್‌ಟಿ ಪಾಲು ₹ 60,911 ಕೋಟಿ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಸೆಸ್‌ ಮೂಲಕ ಸಂಗ್ರಹವಾಗಿರುವ ಮೊತ್ತ ₹ 8,754 ಕೋಟಿ.

ಹಿಂದಿನ ವರ್ಷದ ಸೆಪ್ಟೆಂಬರ್‌ ಮಟ್ಟಕ್ಕೆ ಹೋಲಿಸಿದರೆ ಉತ್ಪನ್ನಗಳ ಆಮದಿನಿಂದ ದೊರೆತ ವರಮಾನವು ಈ ಬಾರಿಯ ಸೆಪ್ಟೆಂಬರ್‌ನಲ್ಲಿ ಶೇ 30ರಷ್ಟು, ದೇಶಿ ವಹಿವಾಟಿನಿಂದ ಬಂದ ವರಮಾನವು ಶೇ 20ರಷ್ಟು ಹೆಚ್ಚು. ‘ಅರ್ಥ ವ್ಯವಸ್ಥೆಯು ತ್ವರಿತವಾಗಿ ಚೇತರಿಕೆ ಕಾಣುತ್ತಿದೆ ಎಂಬುದನ್ನು ಜಿಎಸ್‌ಟಿ ಸಂಗ್ರಹವು ತೋರಿಸುತ್ತಿದೆ. ಆರ್ಥಿಕ ಬೆಳವಣಿಗೆಯ ಜೊತೆಯಲ್ಲೇ ತೆರಿಗೆ ವಂಚಿಸುವವರ ವಿರುದ್ಧ ತೆಗೆದುಕೊಂಡ ಕ್ರಮಗಳು ಕೂಡ ಜಿಎಸ್‌ಟಿ ಸಂಗ್ರಹ ಹೆಚ್ಚುವುದಕ್ಕೆ ಕಾರಣ’ ಎಂದು ಸಚಿವಾಲಯ ಹೇಳಿದೆ.

‘ಹಬ್ಬಗಳ ಋತು ಬಂದಿರುವ ಕಾರಣ ಜಿಎಸ್‌ಟಿ ಸಂಗ್ರಹವು ಇನ್ನಷ್ಟು ಹೆಚ್ಚಾಗಬಹುದು’ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಎಸ್‌ಟಿ ಸಂಗ್ರಹ: ತಿಂಗಳ ವಿವರ
ತಿಂಗಳು; ಮೊತ್ತ
ಏಪ್ರಿಲ್‌;
₹ 1.41 ಲಕ್ಷ ಕೋಟಿ
ಮೇ; ₹ 1.02 ಲಕ್ಷ ಕೋಟಿ
ಜೂನ್‌; ₹ 92,849 ಕೋಟಿ
ಜುಲೈ; ₹ 1.16 ಲಕ್ಷ ಕೋಟಿ
ಆಗಸ್ಟ್‌; ₹ 1.12 ಲಕ್ಷ ಕೋಟಿ
ಸೆಪ್ಟೆಂಬರ್‌: ₹ 1.17 ಲಕ್ಷ ಕೋಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು