ಜಿಎಸ್‌ಟಿ ಸಂಗ್ರಹ ಹೆಚ್ಚಳ

7

ಜಿಎಸ್‌ಟಿ ಸಂಗ್ರಹ ಹೆಚ್ಚಳ

Published:
Updated:

ನವದೆಹಲಿ: ಜುಲೈ ತಿಂಗಳ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು ₹ 96,483 ಕೋಟಿಗಳಿಗೆ ತಲುಪಿದೆ.

ತೆರಿಗೆ ತಪ್ಪಿಸುವ ಪ್ರವೃತ್ತಿಗೆ ಕಡಿವಾಣ ಹಾಕುವ ‘ಇ–ವೇ ಬಿಲ್‌’ ಜಾರಿಗೆ ತಂದ ನಂತರ ವರಮಾನ ಸಂಗ್ರಹದಲ್ಲಿ ಸುಧಾರಣೆ ಕಂಡುಬಂದಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ಆದರೆ, 2018–19ನೇ ಸಾಲಿನ ಬಜೆಟ್‌ನಲ್ಲಿ ನಿಗದಿಪಡಿಸಿದ ತಿಂಗಳ ಸರಾಸರಿ ಸಂಗ್ರಹವು ಈಗಲೂ ಕಡಿಮೆ ಮಟ್ಟದಲ್ಲಿಯೇ ಇದೆ.  ಜೂನ್‌ ತಿಂಗಳ ತೆರಿಗೆ ಸಂಗ್ರಹವು ₹ 95,610 ಕೋಟಿಗಳಷ್ಟಿತ್ತು. 

88 ಸರಕುಗಳ ಮೇಲಿನ ದರ ಕಡಿತದ ಕಾರಣಕ್ಕೆ ಮುಂಬರುವ ದಿನಗಳಲ್ಲಿ ವರಮಾನ ಸಂಗ್ರಹವು ಕಡಿಮೆಯಾಗುವ ಸಾಧ್ಯತೆ ಇದೆ. ಪ್ರತಿ ತಿಂಗಳೂ ₹ 1 ಸಾವಿರ ಕೋಟಿಗಳಷ್ಟು ವರಮಾನ ಖೋತಾ ಬೀಳಲಿದೆ ಎಂದು ಪರಿಣತರು ಅಂದಾಜಿಸಿದ್ದಾರೆ.

ರಿಟರ್ನ್ಸ್‌ ಹೆಚ್ಚಳ: ಮಾರಾಟ ರಿಟರ್ನ್ಸ್‌ಗಳ ಸಂಖ್ಯೆಯು ಈಗ (ಜಿಎಸ್‌ಟಿಆರ್‌ 3ಬಿ) 66 ಲಕ್ಷಕ್ಕೆ ತಲುಪಿದೆ. ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬಂದ ನಂತರದ ದಿನಗಳಲ್ಲಿನ ಗರಿಷ್ಠ ಸಂಖ್ಯೆ ಇದಾಗಿದೆ. ಜೂನ್‌ ತಿಂಗಳಲ್ಲಿ 64.69 ಲಕ್ಷದಷ್ಟು ಇಂತಹ ರಿಟರ್ನ್ಸ್‌ಗಳನ್ನು ಸಲ್ಲಿಸಲಾಗಿತ್ತು.

ಕೇಂದ್ರೀಯ ಜಿಎಸ್‌ಟಿ ₹ 15,877 ಕೋಟಿ, ರಾಜ್ಯ ಜಿಎಸ್‌ಟಿ  ₹ 22,293 ಕೋಟಿ, ಸಮಗ್ರ ಜಿಎಸ್‌ಟಿ ₹ 49,951 ಕೋಟಿ ಮತ್ತು ಸೆಸ್‌ ರೂಪದಲ್ಲಿ
₹ 8,362 ಕೋಟಿ ಸಂಗ್ರಹವಾಗಿದೆ. ಜಿಎಸ್‌ಟಿ ಮಂಡಳಿಯು ಇತ್ತೀಚೆಗೆ 88 ಸರಕುಗಳ ಮೇಲಿನ ದರ ಕಡಿತದ ಪರಿಣಾಮವು ಇದರಲ್ಲಿ ಪ್ರತಿಫಲನಗೊಂಡಿಲ್ಲ. ಜುಲೈ ತಿಂಗಳ ಈ  ತೆರಿಗೆ ಸಂಗ್ರಹವು ನಿರೀಕ್ಷಿತ ಮಟ್ಟದಲ್ಲಿಯೇ ಇದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ರಾಜ್ಯಗಳ ಪರಿಹಾರ: ಏಪ್ರಿಲ್‌ – ಮೇ ತಿಂಗಳಲ್ಲಿ ರಾಜ್ಯಗಳಿಗೆ ಪರಿಹಾರ ರೂಪದಲ್ಲಿ ₹ 3,899 ಕೋಟಿ ಬಿಡುಗಡೆ ಮಾಡಲಾಗಿದೆ.

₹ 201 ಕೋಟಿ ತೆರಿಗೆ ವಂಚನೆ

₹ 201 ಕೋಟಿಗಳಷ್ಟು ಜಿಎಸ್‌ಟಿ ವಂಚಿಸಿದ ಆರೋಪದ ಮೇಲೆ ದೆಹಲಿಯ ಇಬ್ಬರು ಉದ್ಯಮಿಗಳನ್ನು ಬಂಧಿಸಲಾಗಿದೆ.

ಸರಕುಗಳನ್ನು ಪೂರೈಸದೆ  ಹೂಡುವಳಿ ತೆರಿಗೆ ಜಮೆಯ (ಐಟಿಸಿ) ನಕಲಿ ಬೆಲೆಪಟ್ಟಿ ನೀಡಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ. ತೆರಿಗೆ ವಂಚನೆ ಉದ್ದೇಶದ ಹಲವಾರು ನಕಲಿ ಸಂಸ್ಥೆಗಳು ಅಸ್ತಿತ್ವದಲ್ಲಿ ಇವೆ ಎಂದು ಜಿಎಸ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !