‘ಜಾಬ್‌ ವರ್ಕ್ಸ್‌ ಜಿಎಸ್‌ಟಿ ವಿನಾಯ್ತಿ’

7
ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಪ್ರಸ್ತಾವ: ಆಯುಕ್ತರ ಭರವಸೆ

‘ಜಾಬ್‌ ವರ್ಕ್ಸ್‌ ಜಿಎಸ್‌ಟಿ ವಿನಾಯ್ತಿ’

Published:
Updated:
Deccan Herald

ಬೆಂಗಳೂರು: ಜಾಬ್‌ ವರ್ಕ್ಸ್‌ ವಿಭಾಗವನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಯಿಂದ ವಿನಾಯ್ತಿ ಅಥವಾ ಶೇ 5 ವ್ಯಾಪ್ತಿಗೆ ತರುವ ಬಗ್ಗೆ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಪ್ರಸ್ತಾವ ಮಂಡಿಸುವುದಾಗಿ ರಾಜ್ಯ ವಾಣಿಜ್ಯ ತೆರಿಗೆಗಳ ಆಯುಕ್ತ ಎಂ.ಎಸ್‌.ಶ್ರೀಕರ ಭರವಸೆ ನೀಡಿದ್ದಾರೆ.

‘ಜಿಎಸ್‌ಟಿ ಒಂದು ವರ್ಷದ ಬಳಿಕ’ ವಿಷಯದ ಕುರಿತು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಬುಧವಾರ ಏರ್ಪಡಿಸಿದ್ದ ವಿಚಾರಸಂಕಿರಣದಲ್ಲಿ ಅವರು ಸಣ್ಣ ಉದ್ದಿಮೆದಾರರ ಬೇಡಿಕೆಗೆ ಸ್ಪಂದಿಸಿದರು.

‘ಜಾಬ್‌ ವರ್ಕ್ಸ್‌ ಮತ್ತು ಸ್ಟೇಷನರಿ ವಿಭಾಗವನ್ನು ಶೇ 18 ರ ವ್ಯಾಪ್ತಿಗೆ ಸೇರಿಸಲಾಗಿದೆ. ಈ ಹಿಂದಿನ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ವಿಧಿಸುತ್ತಿರಲಿಲ್ಲ. ಈಗ ತೆರಿಗೆ ವಿಧಿಸಿರುವುದರಿಂದ ಬೃಹತ್ ಘಟಕಗಳಿಗೆ ಸೇವೆ ನೀಡುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ’ ಎಂದು ಕಾಸಿಯಾ ಅಧ್ಯಕ್ಷ ಬಸವರಾಜ ಎಸ್‌. ಜವಳಿ ತಿಳಿಸಿದರು.

ಅತಿ ಸಂಕೀರ್ಣ ತಂತ್ರಜ್ಞಾನ: ‘ಜಿಎಸ್‌ಟಿ ವಿಶ್ವದ ಅತಿ ದೊಡ್ಡ ಮತ್ತು ಸಂಕೀರ್ಣ ತಂತ್ರಜ್ಞಾನ. 1 ಕೋಟಿ ಡೀಲರ್‌ಗಳು ನೋಂದಣಿ ಮಾಡಿಸಿದ್ದಾರೆ. ಆಸ್ಟ್ರೇಲಿಯಾ, ಮಲೇಷ್ಯಾದಂತಹ ದೇಶಗಳಲ್ಲಿ ಜಿಎಸ್‌ಟಿ ವ್ಯವಸ್ಥೆ ಒಂದು ಹದಕ್ಕೆ ಬರಬೇಕಾದರೆ ಹಲವು ವರ್ಷಗಳೇ ಬೇಕಾದವು. ಆದರೆ, ನಮ್ಮಲ್ಲಿ ಜುಲೈ ಕೊನೆಯ ವೇಳೆಗೆ ಶೇ 97 ರಷ್ಟು ಡೀಲರ್‌ಗಳು ತೆರಿಗೆ ಪಾವತಿ ಮಾಡಿದ್ದಾರೆ’ ಎಂದು ಆಯುಕ್ತ ಶ್ರೀಕರ ತಿಳಿಸಿದರು.

‘ಜಿಎಸ್‌ಟಿ ತಂತ್ರಜ್ಞಾನ ಪರಿಪೂರ್ಣವಿದೆ ಎಂದು ಹೇಳುವುದಿಲ್ಲ. ಪಾವತಿದಾರರಿಗೆ ಆಗುತ್ತಿರುವ ತೊಂದರೆಗಳು ಮತ್ತು ಸಮಸ್ಯೆಗಳನ್ನು ಪರಿಗಣಿಸಿ ಅವುಗಳನ್ನು ಸರಿಪಡಿಸಲಾಗುತ್ತಿದೆ. ಪಾವತಿ ವಿಧಾನವನ್ನು ಹೆಚ್ಚು ಹೆಚ್ಚು ಸರಳಗೊಳಿಸಲಾಗುತ್ತಿದೆ.

‘ವಾಣಿಜ್ಯೋದ್ಯಮಿಗಳು ಕೊಂಚ ಮುಂಚಿತವಾಗಿಯೇ ಪಾವತಿ ಮಾಡಿದರೆ ವೆಬ್‌ಸೈಟ್‌ ಹ್ಯಾಂಗ್‌ ಅಥವಾ ಕ್ರ್ಯಾಷ್‌ ಆಗುವುದನ್ನು ತಪ್ಪಿಸಬಹುದು. ಕೊನೆಯಲ್ಲಿ ಪಾವತಿ ಮಾಡಲು ಹೊರಟಾಗ ಇಂತಹ ಅಪಾಯಗಳು ಇರುತ್ತವೆ’ ಎಂದರು.

ವಕೀಲ ಎಸ್‌.ಸಿದ್ಧಾರ್ಥ ಭಟ್‌ ಮಾತನಾಡಿ, ‘ಜಿಎಸ್‌ಟಿ ಕಾನೂನಿನಲ್ಲಿ ಸ್ಪಷ್ಟತೆಯ ಕೊರತೆ ಇದೆ. ಉದ್ದಿಮೆದಾರರಿಗೂ ಇದರ ಅರಿವು ಇಲ್ಲ’ ಎಂದು ಹೇಳಿದರು.

ತೆರಿಗೆ ಸಲಹೆಗಾರ ಎಚ್‌.ಆರ್‌. ಪ್ರಭಾಕರ್ ಮಾತನಾಡಿ, ‘ದೇಶದಲ್ಲಿ ಜಿಎಸ್‌ಟಿ ಸಂಗ್ರಹವು ₹ 1 ಲಕ್ಷ ಕೋಟಿ ದಾಟುವ ಹಂತ ತಲುಪಿದೆ. ಎಲ್ಲ ವಾಣಿಜ್ಯೋದ್ಯಮಿಗಳು ಪ್ರಾಮಾಣಿಕವಾಗಿ ಪಾವತಿ ಮಾಡಿದರೆ ಸರ್ಕಾರಕ್ಕೆ ಆದಾಯ ಗಣನೀಯವಾಗಿ ಏರಿಕೆ ಆಗುವುದರಲ್ಲಿ ಸಂದೇಹವಿಲ್ಲ’ ಎಂದು ಹೇಳಿದರು.

 

 

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !