ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸ್ತ್ರೀಯ ಕನ್ನಡ ಕೇಂದ್ರಕ್ಕೆ ಹಿಂದಿ ಫಲಕ

Last Updated 20 ಫೆಬ್ರುವರಿ 2018, 5:51 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾ ನಿಲಯಕ್ಕೆ ಸ್ಥಳಾಂತರಗೊಂಡ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಶಂಕುಸ್ಥಾಪನಾ ಫಲಕವನ್ನು ಹಿಂದಿಯಲ್ಲಿ ಹಾಕಿರುವುದಕ್ಕೆ ಮೈಸೂರಿನ ಸಾಹಿತಿಗಳಿಂದ ವಿರೋಧ ವ್ಯಕ್ತವಾಗಿದೆ.

ಶಂಕುಸ್ಥಾಪನೆಯ ಎರಡು ಫಲಕಗಳನ್ನು ಅಳವಡಿಸಲಾಗಿದ್ದು, ಕನ್ನಡ ಹಾಗೂ ಹಿಂದಿಯಲ್ಲಿ ಮಾತ್ರವೇ ಇದೆ. ಇಂಗ್ಲಿಷನ್ನು ಕೈಬಿಡಲಾಗಿದೆ. ಶಾಸ್ತ್ರೀಯ ಭಾಷಾ ಕೇಂದ್ರವನ್ನು ರಚಿಸಿರುವುದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಪ್ರಚಾರ ನೀಡುವುದಕ್ಕಾಗಿದ್ದು, ಇಂಗ್ಲಿಷಿನ ಕೊರತೆಯಿಂದ ಆಶಯಕ್ಕೆ ಹಿನ್ನಡೆಯಾಗುತ್ತದೆ ಎಂದು ಸಾಹಿತಿಗಳು ಅಭಿಪ್ರಾಯಪಟ್ಟಿದ್ದಾರೆ.

ತ್ರಿಭಾಷಾ ಸೂತ್ರ ಬೇಕು: ಭಾರತದಲ್ಲಿ ತ್ರಿಭಾಷಾ ಸೂತ್ರ ಪಾಲನೆಯಲ್ಲಿದೆ. ಹಾಗಾಗಿ, ಇಂಗ್ಲಿಷಿನಲ್ಲಿ ಫಲಕ ಬೇಕಿತ್ತು ಎಂದು ಸಾಹಿತಿ ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು. ‘ಹಿಂದಿಯ ಬಗ್ಗೆ ದ್ವೇಷ ಬೇಡ. ಆದರೆ, ಇಂಗ್ಲಿಷಿನ ಹೇರಿಕೆಯ ಕೆಲಸವನ್ನು ಹಿಂದಿ ಮಾಡಬಾರದು. ಆ ಆತಂಕ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಇದೆ. ಹಾಗಾಗಿ, ಮೂರೂ ಭಾಷೆಗಳಲ್ಲಿ ಫಲಕಗಳು ಇರಬೇಕು’ ಎಂದು ಅಭಿಪ್ರಾಯಪಟ್ಟರು.

ಹೇರಿಕೆಯ ತಂತ್ರ: ‘ಹಿಂದಿ ಫಲಕವನ್ನು ಹಾಕಿರುವುದು ಕೇಂದ್ರದ ಹೇರಿಕೆಯ ತಂತ್ರವಷ್ಟೇ. ಇದಕ್ಕೆ ಅವಕಾಶ ಮಾಡಿಕೊಡಕೂಡದು. ನಮಗೆ ಗೊತ್ತಿಲ್ಲದಂತೆಯೇ ಕನ್ನಡದ ಕೇಂದ್ರದ ಮೂಲಕ ಹಿಂದಿಗೆ ಪ್ರಚಾರ ನೀಡುವ ಉದ್ದೇಶವಿಲ್ಲಿದೆ. ನ್ಯಾಯಯುತ ವಾಗಿದ್ದರೆ ಇಂಗ್ಲಿಷಿನಲ್ಲೂ ಫಲಕ ಇರಬೇಕಿತ್ತು. ಕನ್ನಡಿಗರು ಪ್ರತಿಭಟಿಸುವುದಿಲ್ಲ ಎಂದಿದ್ದರೆ ಫಲಕ ಕನ್ನಡದಲ್ಲೂ ಹಾಕುತ್ತಿರಲಿಲ್ಲ’ ಎಂದು ಪ್ರಕಾಶಕ ಪ್ರೊ.ಬಿ.ಎನ್.ಶ್ರೀರಾಮ ಪ್ರತಿಕ್ರಿಯಿಸಿದರು.

ಸಾಹಿತಿ ಮಳಲಿ ವಸಂತಕುಮಾರ್ ಪ್ರತಿಕ್ರಿಯಿಸಿ, ‘ಕನ್ನಡ ಹಾಗೂ ಹಿಂದಿ ಎರಡಕ್ಕೂ ಸಮಾನ ಸ್ಥಾನ ನೀಡಲಾಗಿದೆ. ಕನ್ನಡವನ್ನು ಗೌಣ ಮಾಡಿಲ್ಲ. ಹಾಗಾಗಿ, ಇದರಲ್ಲೇನೂ ಅಪಾಯ ಕಾಣದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT