ಶನಿವಾರ, ಆಗಸ್ಟ್ 24, 2019
22 °C
ಇದೇ 25ಕ್ಕೆ ಜಿಎಸ್‌ಟಿ ಮಂಡಳಿ ಸಭೆ

ಇವಿ: ತೆರಿಗೆ ಕಡಿತ ನಿರೀಕ್ಷೆ

Published:
Updated:
Prajavani

ನವದೆಹಲಿ (ಪಿಟಿಐ): ಜಿಎಸ್‌ಟಿ ಮಂಡಳಿಯು ಇದೇ 25ರಂದು ಸಭೆ ಸೇರಲಿದ್ದು, ವಿದ್ಯುತ್ ಚಾಲಿತ ವಾಹನ
ಗಳ (ಇವಿ) ಮೇಲಿನ ತೆರಿಗೆ ತಗ್ಗಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಂಡಳಿಯ ಈ 36ನೇ ಸಭೆಯು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಯಲಿದೆ.  ಇ–ವಾಹನಗಳ ಮೇಲೆ ಸದ್ಯಕ್ಕೆ ಶೇ 12ರಷ್ಟು ತೆರಿಗೆ ಇದೆ. ಅದನ್ನು ಶೇ 5ಕ್ಕೆ ಇಳಿಸುವಂತೆ ಮನವಿ ಮಾಡುವುದಾಗಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ತಿಳಿಸಿತ್ತು.  

ವಿದ್ಯುತ್‌ ವಾಹನಗಳಿಗೆ ವಿನಾಯ್ತಿ, ಎಲೆಕ್ಟ್ರಿಕ್‌ ಚಾರ್ಜರ್ಸ್‌ ಮತ್ತು ವಿದ್ಯುತ್ ವಾಹನಗಳನ್ನು ಬಾಡಿಗೆಗೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಶಿಫಾರಸುಗಳನ್ನು ನೀಡುವಂತೆ ಅಧಿಕಾರಿಗಳ ಸಮಿತಿಗೆ ಸೂಚನೆ ನೀಡಲಾಗಿತ್ತು. ಸಮಿತಿಯು ಗುರುವಾರದ ಸಭೆಯಲ್ಲಿ ಈ ಶಿಫಾರಸುಗಳನ್ನು ಮಂಡಳಿಯ ಮುಂದಿಡಲಿದೆ. 

ಸೌರ ವಿದ್ಯುತ್ ಉತ್ಪಾದನಾ ವ್ಯವಸ್ಥೆ ಮತ್ತು ಟರ್ಬೈನ್‌ ಯೋಜನೆಗಳಲ್ಲಿ ಇರುವ ಸರಕು ಮತ್ತು ಸೇವೆಗಳ ಮೌಲ್ಯ ನಿಗದಿ ಮಾಡುವ ಸಾಧ್ಯತೆಯೂ ಇದೆ ಎಂದು ತಿಳಿಸಿದ್ದಾರೆ.

ಸೌರ ವಿದ್ಯುತ್ ಯೋಜನೆಗಳಲ್ಲಿ ಗುತ್ತಿಗೆ ಮೌಲ್ಯದ  ಶೇ 70ರಷ್ಟು ಸರಕು ಎಂದು ಪರಿಗಣಿಸಿ ಅದಕ್ಕೆ ಶೇ 5ರ ತೆರಿಗೆ ಹಾಗೂ ಇನ್ನುಳಿದ ಶೇ 30ರಷ್ಟನ್ನು ಸೇವೆಗಳು ಎಂದು ಪರಿಗಣಿಸಿ ಶೇ 18ರಷ್ಟು ತೆರಿಗೆ ವಿಧಿಸುವುದಾಗಿ ಕೇಂದ್ರ ಸರ್ಕಾರ ಪ್ರಸ್ತಾಪ ಸಲ್ಲಿಸಿತ್ತು.

ಇದಕ್ಕೆ ಉದ್ಯಮ ವಲಯ ಆಕ್ಷೇಪ ವ್ಯಕ್ತಪಡಿಸಿದ್ದು, ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಹೀಗಾಗಿ ತೆರಿಗೆ ದರ ಮರುಪರಿಶೀಲನೆ ನಡೆಸುವಂತೆ ಜಿಎಸ್‌ಟಿ ಮಂಡಳಿಗೆ ಕೋರ್ಟ್‌ ಸೂಚನೆ ನೀಡಿದೆ. 

Post Comments (+)