ಗುರುವಾರ , ಆಗಸ್ಟ್ 13, 2020
23 °C
ಸರಕು ಮತ್ತು ಸೇವಾ ತೆರಿಗೆಯ ಸಚಿವರುಗಳ ಸಮಿತಿ ಸಭೆ ಇಂದು

ಎಂಎಸ್‌ಎಂಇ ವಿನಾಯ್ತಿ ಮಿತಿ ಹೆಚ್ಚಳ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಸಚಿವರುಗಳ ಎರಡು ಸಮಿತಿ ಭಾನುವಾರ ಸಭೆ ಸೇರಲಿದ್ದು, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ವಿನಾಯ್ತಿ ಮಿತಿ ಹೆಚ್ಚಳ ಹಾಗೂ ವಿಪತ್ತು ತೆರಿಗೆ ವಿಧಿಸುವ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾಪ್‌ ಶುಕ್ಲಾ ಅವರ ನೇತೃತ್ವದ ಆರು ಸದಸ್ಯರ ಸಚಿವರ ತಂಡ, ಜಿಎಸ್‌ಟಿಯಿಂದ ವಲಯ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಲಿದೆ. ವಿನಾಯ್ತಿ ಮಿತಿಯನ್ನು ಹೆಚ್ಚಿಸುವ ಇರುವ ಅವಕಾಶದ ಬಗ್ಗೆಯೂ ಚರ್ಚೆ ನಡೆಸಲಿದೆ.

ಸದ್ಯಕ್ಕೆ ವಾರ್ಷಿಕ ₹ 20 ಲಕ್ಷದಷ್ಟು ವಹಿವಾಟು ನಡೆಸುವ ಎಂಎಸ್‌ಎಂಇ ವಲಯದ ವಹಿವಾಟುದಾರರಿಗೆ ಜಿಎಸ್‌ಟಿಯಿಂದ ವಿನಾಯ್ತಿ ನೀಡಲಾಗಿದೆ. ಈ ಮಿತಿಯನ್ನು₹ 75 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ನೇತೃತ್ವದಲ್ಲಿ 2017ರ ಆಗಸ್ಟ್‌ನಲ್ಲಿ ಸಚಿವರ ಸಮಿತಿಯೊಂದನ್ನು
ರಚಿಸಲಾಗಿದೆ.

ಈ ಸಮಿತಿಯು ವಿಪತ್ತು ತೆರಿಗೆ ವಿಧಿಸಲು ಇರುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಲಿದೆ. 

ಭಾರಿ ಮಳೆ, ಪ್ರವಾಹ, ಭೂಕಂಪ, ಚಂಡಮಾರುತದಂತಹ ನೈಸರ್ಗಿಕ ಪ್ರಕೋಪಗಳಿಗೆ ಸಿಲುಕಿ ಅಗಾಧ ಪ್ರಮಾಣದ ಆಸ್ತಿಪಾಸ್ತಿ ನಷ್ಟಕ್ಕೆ ಗುರಿಯಾಗುವ ರಾಜ್ಯಗಳ ನೆರವಿಗೆ ಸಂಪನ್ಮೂಲ ಸಂಗ್ರಹಿಸಲು ‘ವಿಪತ್ತು ತೆರಿಗೆ’ ವಿಧಿಸುವ ಸಾಧ್ಯತೆಯನ್ನು ಈ ಸಮಿತಿ ಪರಿಶೀಲಿಸಲಿದೆ.

10ಕ್ಕೆ ಜಿಎಸ್‌ಟಿ ಮಂಡಳಿ ಸಭೆ: ಎರಡೂ ಸಮಿತಿಗಳು ಕೈಗೊಳ್ಳುವ ನಿರ್ಧಾರಗಳನ್ನು ಇದೇ 10ರಂದು ನಡೆಯಲಿರುವ ಸಭೆಯಲ್ಲಿ ಜಿಎಸ್‌ಟಿ ಮಂಡಳಿ ಅಂತಿಮ ತೀರ್ಮಾನಕ್ಕೆ ಬರಲಿದೆ.

ನಿರ್ಮಾಣ ಹಂತದಲ್ಲಿ ಇರುವ ಫ್ಲ್ಯಾಟ್‌ ಮತ್ತು ಮನೆಗಳ ಜಿಎಸ್‌ಟಿ ದರವನ್ನು ಶೇ 12 ರಿಂದ ಶೇ 5ಕ್ಕೆ ತಗ್ಗಿಸುವ ಬಗ್ಗೆ ಚರ್ಚೆ ನಡೆಸಲಿದೆ. ಜತೆಗೆ, ಎಲ್ಲಾ ಸಣ್ಣ ಪೂರೈಕೆದಾರರಿಗೂ ಕಂಪೋಸಿಷನ್‌ ಸ್ಕೀಮ್‌ ನೀಡುವ ಹಾಗೂ ಲಾಟರಿಗಳಿಗೆ ಏಕರೂಪದ ಜಿಎಸ್‌ಟಿ ದರ ನಿಗದಿ ಮಾಡುವ ಬಗ್ಗೆ ಮಂಡಳಿ ಪರಿಗಣಿಸಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು