ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚಳ ನಿರೀಕ್ಷೆ

7
ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ

ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚಳ ನಿರೀಕ್ಷೆ

Published:
Updated:

ನವದೆಹಲಿ: ‘2019–20ನೇ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಸಂಗ್ರಹ ಶೇ 18ರಷ್ಟು ಪ್ರಗತಿ ಸಾಧಿಸುವ ಅಂದಾಜು ಮಾಡಲಾಗಿದೆ’ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್ ಭೂಷಣ್‌ ಪಾಂಡೆ ಹೇಳಿದ್ದಾರೆ.

‘2018ರ ನವೆಂಬರ್‌ನಿಂದ 2019ರ ಜನವರಿವರೆಗೆ ಜಿಎಸ್‌ಟಿ ಸಂಗ್ರಹದಲ್ಲಿ ಆಗಿರುವ ಹೆಚ್ಚಳದ ಆಧಾರದ ಮೇಲೆ ಈ ಅಂದಾಜು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

‘2017–18ರಲ್ಲಿ ತಿಂಗಳ ಸರಾಸರಿ ಸಂಗ್ರಹ ₹ 89 ಸಾವಿರ ಕೋಟಿ ಇತ್ತು. ಇದು 2018–19ರಲ್ಲಿ ₹ 97 ಸಾವಿರ ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ವರಮಾನ ಸಂಗ್ರಹ ಏರುಗತಿಯಲ್ಲಿಯೇ ಸಾಗಿದೆ. 2017–18ರ ನವೆಂಬರ್‌, ಡಿಸೆಂಬರ್‌ ಮತ್ತು ಜನವರಿ ತಿಂಗಳ ವರಮಾನವನ್ನು 2018–19ರ ಸಾಲಿನ ಈ ಮೂರು ತಿಂಗಳಿಗೆ ಹೋಲಿಸಿದರೆ ಶೇ 14ರಷ್ಟು ಏರಿಕೆಯಾಗಿದೆ.

‘ಒಂದೂವರೆ ವರ್ಷದಲ್ಲಿ ಸರಕುಗಳ ತೆರಿಗೆ ದರ ಕಡಿತ, ರಿಟರ್ನ್ಸ್‌ ಸಲ್ಲಿಕೆ ಸರಳಗೊಳಿಸಿರುವುದು ಸೇರಿದಂತೆ ತೆರಿಗೆ ವ್ಯವಸ್ಥೆಯಲ್ಲಿ ಹಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

₹ 1.02 ಲಕ್ಷ ಕೋಟಿ ಸಂಗ್ರಹ

ಜನವರಿಯಲ್ಲಿ ₹ 1.02 ಲಕ್ಷ ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದೆ. ಇದು ಏಪ್ರಿಲ್ ನಂತರ ಸಂಗ್ರಹವಾಗಿರುವ ಅತಿ ಹೆಚ್ಚಿನ ಮೊತ್ತವಾಗಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

2018ರ ಡಿಸೆಂಬರ್‌ನಲ್ಲಿ ಸಂಗ್ರಹವಾಗಿದ್ದ ₹ 94,725 ಕೋಟಿಗಿಂತಲೂ ಇದು ಹೆಚ್ಚಿಗೆ ಇದೆ. 2018ರ ಜನವರಿಯಲ್ಲಿ ಸಂಗ್ರಹವಾಗಿದ್ದ ₹ 89,825 ಕೋಟಿಗೆ ಹೋಲಿಸಿದರೆ ಸಂಗ್ರಹದಲ್ಲಿ ಶೇ 14ರಷ್ಟು ಏರಿಕೆಯಾಗಿದೆ.

ಡಿಸೆಂಬರ್‌ ತಿಂಗಳ ಮಾರಾಟದ ರಿಟರ್ನ್ಸ್‌ ಜಿಎಸ್‌ಟಿಆರ್‌–3ಬಿ ಸಲ್ಲಿಕೆ ಜನವರಿ 31ರವರೆಗೆ 73.3 ಲಕ್ಷದಷ್ಟಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂರನೇ ಬಾರಿಗೆ ಜಿಎಸ್‌ಟಿ ಸಂಗ್ರಹ ₹ 1 ಲಕ್ಷ ಕೋಟಿ ತಲುಪಿದೆ. ಏಪ್ರಿಲ್‌, ಅಕ್ಟೋಬರ್‌ನಲ್ಲಿಯೂ ₹ 1 ಲಕ್ಷ ಕೋಟಿಯನ್ನು ದಾಟಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !