ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇನಲ್ಲಿ ₹1.41 ಲಕ್ಷ ಕೋಟಿ ಜಿಎಸ್‌ಟಿ ವರಮಾನ ಸಂಗ್ರಹ

Last Updated 1 ಜೂನ್ 2022, 14:37 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ಮೇ ತಿಂಗಳಿನಲ್ಲಿ ₹ 1.41 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. 2021ರ ಮೇನಲ್ಲಿ ಸಂಗ್ರಹ ಆಗಿದ್ದ ಮೊತ್ತಕ್ಕೆ ಹೋಲಿಸಿದರೆ ಈ ಬಾರಿ ಶೇ 44ರಷ್ಟು ಹೆಚ್ಚಳ ಆಗಿದೆ. 2021ರ ಮೇನಲ್ಲಿ ₹ 97,821 ಕೋಟಿ ವರಮಾನ ಸಂಗ್ರಹ ಆಗಿತ್ತು.

ಆದರೆ, 2022ರ ಏಪ್ರಿಲ್‌ನಲ್ಲಿ ₹ 1.68 ಲಕ್ಷ ಕೋಟಿಯಷ್ಟು ದಾಖಲೆಯ ತೆರಿಗೆ ವರಮಾನ ಸಂಗ್ರಹ ಆಗಿತ್ತು. ಇದಕ್ಕೆ ಹೋಲಿಸಿದರೆ ಮೇನಲ್ಲಿ ₹ 27 ಸಾವಿರ ಕೋಟಿ ಕಡಿಮೆ ಸಂಗ್ರಹ ಆಗಿದೆ. ಹೀಗಿದ್ದರೂ ಜಿಎಸ್‌ಟಿ ವ್ಯವಸ್ಥೆಯು ಜಾರಿಗೆ ಬಂದಾಗಿನಿಂದ ಈವರೆಗೆ ಸಂಗ್ರಹ ಆಗಿರುವ ನಾಲ್ಕನೇ ಗರಿಷ್ಠ ಮೊತ್ತ ಇದಾಗಿದೆ.

2022ರ ಮೇನಲ್ಲಿ ಸಂಗ್ರಹ ಆಗಿರುವ ಒಟ್ಟಾರೆ ಮೊತ್ತದಲ್ಲಿ ಸಿಜಿಎಸ್‌ಟಿ ₹ 25,036 ಕೋಟಿ, ಸಿಜಿಎಸ್‌ಟಿ ₹ 32,001 ಕೋಟಿ, ಐಜಿಎಸ್‌ಟಿ ₹ 73,345 ಕೋಟಿ ಹಾಗೂ ಸೆಸ್‌ ₹ 10,502 ಕೋಟಿ ಸೇರಿಕೊಂಡಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಮೇ ತಿಂಗಳಿನಲ್ಲಿ ಆಗುವ ವರಮಾನ ಸಂಗ್ರಹವು ಹೊಸ ಹಣಕಾಸು ವರ್ಷದ ಏಪ್ರಿಲ್‌ ತಿಂಗಳಲ್ಲಿ ಸಲ್ಲಿಕೆ ಆಗಿರುವ ರಿಟರ್ನ್ಸ್‌ಗೆ ಸಂಬಂಧಿಸಿದ್ದಾಗಿರುತ್ತದೆ. ಆದರೆ, ಏಪ್ರಿಲ್‌ನಲ್ಲಿ ಸಂಗ್ರಹ ಆಗುವ ವರಮಾನವು ಹಣಕಾಸು ವರ್ಷದ ಕೊನೆಯ ತಿಂಗಳಾದ ಮಾರ್ಚ್‌ಗೆ ಸಂಬಂಧಿಸಿದ್ದಾಗಿರುತ್ತದೆ. ಹೀಗಾಗಿ ಯಾವಾಗಲೂ ಮೇನಲ್ಲಿ ಸಂಗ್ರಹ ಆಗುವ ಮೊತ್ತವು ಏಪ್ರಿಲ್‌ಗಿಂತಲೂ ಕಡಿಮೆ ಇರುತ್ತದೆ ಎಂದು ಹೇಳಿದೆ.

ಏಪ್ರಿಲ್‌ನಲ್ಲಿ 7.4 ಕೋಟಿ ಇ–ವೇ ಬಿಲ್‌ ಸೃಷ್ಟಿ ಆಗಿದೆ. ಮಾರ್ಚ್‌ನಲ್ಲಿ ಸೃಷ್ಟಿ ಆಗಿದ್ದ 7.7 ಕೋಟಿ ಇ–ವೇ ಬಿಲ್‌ಗೆ ಹೋಲಿಸಿದರೆ ಶೇ 4ರಷ್ಟು ಕಡಿಮೆ ಆಗಿದೆ.

‘ಜಿಎಸ್‌ಟಿ ಸಂಗ್ರಹವು ಮೂರು ತಿಂಗಳಿನಲ್ಲಿ ₹ 1.4 ಲಕ್ಷ ಕೋಟಿಯನ್ನು ದಾಟಿರುವುದು ಆರ್ಥಿಕ ಬೆಳವಣಿಗೆಯನ್ನು ಸೂಚಿಸುತ್ತಿದೆ’ ಎಂದು ಡೆಲಾಯ್ಟ್‌ ಇಂಡಿಯಾದ ಪಾಲುದಾರ ಎಂ.ಎಸ್‌. ಮಣಿ ಅಭಿಪ್ರಾಯಪಟ್ಟಿದ್ದಾರೆ.

‘ತಿಂಗಳ ಜಿಎಸ್‌ಟಿ ಸಂಗ್ರಹವು ₹ 1.5 ಲಕ್ಷ ಕೋಟಿ ದಾಟಬೇಕು ಎನ್ನುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಗುರಿ ತಲುಪಲು ಬೇಕಾದ ವೇದಿಕೆ ಸಿದ್ಧವಾಗಿರುವಂತೆ ಕಾಣುತ್ತಿದೆ’ ಎಂದು ಟ್ಯಾಕ್ಸ್‌ ಕನೆಕ್ಟ್‌ ಅಡ್ವೈಸರಿ ಪಾಲುದಾರ ವಿವೇಕ್‌ ಜಲನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT