ಸ್ಥಿರತೆಯತ್ತ ಜಿಎಸ್‌ಟಿ ವ್ಯವಸ್ಥೆ

7
ತಾಂತ್ರಿಕ ಸಮಸ್ಯೆ ನಿವಾರಣೆ, ಜನಸಾಮಾನ್ಯರಿಗೆ ಅರಿವು ಅಗತ್ಯ

ಸ್ಥಿರತೆಯತ್ತ ಜಿಎಸ್‌ಟಿ ವ್ಯವಸ್ಥೆ

Published:
Updated:

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ಇಡೀ ದೇಶಕ್ಕೆ ಒಂದು ಹೊಸ ವ್ಯವಸ್ಥೆಯಾಗಿರುವುದರಿಂದ ಕೆಲವು ಸಮಸ್ಯೆಗಳು ಇದ್ದೇ ಇರುತ್ತವೆ. ಹಲವಾರು ಅಡಚಣೆಗಳ ಹೊರತಾಗಿಯೂ ಈ ಕ್ರಾಂತಿಕಾರಿ ವ್ಯವಸ್ಥೆ ಒಂದು ವರ್ಷ ಪೂರೈಸಿದ್ದು, ಸ್ಥಿರತೆಯೆಡೆಗೆ ಸಾಗುತ್ತಿದೆ ಎಂದು ವರ್ತಕರು, ಉದ್ಯಮಿಗಳು ಮತ್ತು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏಕರೂಪದ ತೆರಿಗೆ ವ್ಯವಸ್ಥೆಯನ್ನು 2017ರ ಜುಲೈ 1 ರಂದು ದೇಶದಾದ್ಯಂತ ಜಾರಿಗೊಳಿಸಲಾಯಿತು. ತೆರಿಗೆ ಪಾವತಿದಾರರ ವ್ಯಾಪ್ತಿ ಹೆಚ್ಚಿಸುವುದು, ತೆರಿಗೆ ವಂಚನೆ ತಡೆಯುವುದು ಇದರ ಮೂಲ ಉದ್ದೇಶವಾಗಿದೆ. 2017–18ರಲ್ಲಿ ಜಿಎಸ್‌ಟಿಯಿಂದ ಒಟ್ಟು ₹ 9.40 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರ ಜಿಎಸ್‌ಟಿ, ರಾಜ್ಯ ಜಿಎಸ್‌ಟಿ, ಸಮಗ್ರ ಜಿಎಸ್‌ಟಿ ಹಾಗೂ ಸೆಸ್‌ ಸೇರ್ಪಡೆಗೊಂಡಿದೆ.

‘ಹೊಸ ತೆರಿಗೆ ವ್ಯವಸ್ಥೆಗೆ ರಾಜ್ಯದಲ್ಲಿ ವಹಿವಾಟುದಾರರ ಒಟ್ಟಾರೆ ಸ್ಪಂದನೆ ಪರವಾಗಿಲ್ಲ ಎನ್ನುವ ಮಟ್ಟದಲ್ಲಿದೆ. ಹೊಸ ವ್ಯವಸ್ಥೆ ಸಂಪೂರ್ಣವಾಗಿ ವ್ಯವಸ್ಥಿತ ರೂಪ ಪಡೆದುಕೊಳ್ಳಲು ನಾಲ್ಕೈದು ವರ್ಷ ತೆಗೆದುಕೊಳ್ಳಲಿದೆ’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಜಿಎಸ್‌ಟಿ ಸಮಿತಿ ಅಧ್ಯಕ್ಷ ಬಿ.ಟಿ. ಮನೋಹರ್‌ ಹೇಳಿದ್ದಾರೆ.

‘ಇದೊಂದು ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಆಗಿದೆ. ಹೀಗಾಗಿ ಕೇಳಿದಾಕ್ಷಣ ಎಲ್ಲವನ್ನೂ ನೀಡಲು ಸಾಧ್ಯವಿಲ್ಲ. ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ ಕೇಂದ್ರದಿಂದ ಹೆಚ್ಚಿನ ನೆರವು ದೊರೆತಲ್ಲಿ ಒಟ್ಟಾರೆ ವ್ಯವಸ್ಥೆ ಸ್ಥಿರವಾಗುವುದರಲ್ಲಿ ಅನುಮಾನವೇ ಇಲ್ಲ.  ಸರ್ಕಾರಕ್ಕೆ, ತೆರಿಗೆದಾತರಿಗೆ ಆರಂಭದಲ್ಲಿ ವ್ಯವಸ್ಥೆಯನ್ನು ಅರ್ಥೈಸಿಕೊಂಡು ಸ್ಪಂದಿಸಲು ನಾಲ್ಕೈದು ತಿಂಗಳು ಹಿಡಿದಿತ್ತು. ಜಿಎಸ್‌ಟಿ ಮಂಡಳಿಯು, ತೆರಿಗೆ ದರ, ನಿಯಮ ಸರಳೀಕರಣಕ್ಕೆ ಸಂಬಂಧಿಸಿದಂತೆ ಹಲವಾರು ಬದಲಾವಣೆಗಳನ್ನು ತಂದಿದೆ. ತೆರಿಗೆ ಸಂಗ್ರಹದಲ್ಲಿ ರಾಜ್ಯ ಸರ್ಕಾರಕ್ಕೆ ಆಗಿರುವ ವರಮಾನ ಕಡಿಮೆ ನಷ್ಟಕ್ಕೆ ಕೇಂದ್ರದಿಂದ ಪರಿಹಾರದ ನೆರವೂ ಒದಗಿ ಬಂದಿದೆ’ ಎಂದು ಹೇಳಿದ್ದಾರೆ.

ಸಮಸ್ಯೆಗಳು ಬಗೆಹರಿಯಬೇಕಾಗಿದೆ: ‘ತೆರಿಗೆ ಹಂತದಲ್ಲಿ ಬದಲಾವಣೆ, ರಿಯಾಯ್ತಿ, ಮರುಪಾವತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇನ್ನೂ ಪರಿಹಾರ ಕಂಡುಕೊಳ್ಳಬೇಕಾಗಿದೆ’ ಎನ್ನುವುದು ಅವರ ನಿರೀಕ್ಷೆಯಾಗಿದೆ.

‘ತೆರಿಗೆದಾತರಿಗೆ ಯಾವ ರೀತಿಯ ಅರ್ಜಿ ನಮೂನೆ ಬೇಕು ಎನ್ನುವ ಬಗ್ಗೆ ಜಿಎಸ್‌ಟಿಎನ್‌ನಿಂದ ವಿಚಾರ ವಿನಿಮಯ ನಡೆದೇ ಇಲ್ಲ. ಕರ್ನಾಟಕದಲ್ಲಿ ಸರ್ಕಾರ ಮತ್ತು ಎಫ್‌ಕೆಸಿಸಿಐ ಸಹಯೋಗದಲ್ಲಿ  ಜಿಎಸ್‌ಟಿ ಬಗ್ಗೆ ವಿಚಾರ ವಿನಿಮಯ ನಡೆಯುತ್ತಿದೆ. ದೇಶದಾದ್ಯಂತ ಇಂತಹ ಸಂವಾದ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಹೊಸ ರಿಟರ್ನ್‌ ನಮೂನೆಗಳನ್ನು ಬಳಕೆಗೆ ತರುವ ಮೊದಲು ವರ್ತಕರಿಂದ ಸಲಹೆ ಪಡೆಯಬೇಕಾಗಿದೆ.

ಮರುಪಾವತಿ: ‘ಉದ್ಯಮಿಗಳು ನಿರ್ದಿಷ್ಟ ಮೊತ್ತದ ತೆರಿಗೆ ಪಾವತಿಸಿ ಕಚ್ಚಾ ಪದಾರ್ಥ ಖರೀದಿಸಿರುತ್ತಾರೆ. ತಯಾರಾದ ಸರಕಿಗೆ ಶೇ 5 ಅಥವಾ ಶೇ 12 ರಷ್ಟು ತೆರಿಗೆ ಇರುತ್ತದೆ. ಇವೆರಡರ ನಡುವಣ ವ್ಯತ್ಯಾಸದ ಮೊತ್ತವು ಸರಕುಗಳ ತಯಾರಕರಿಗೆ ಹಿಂದಕ್ಕೆ ಬರಬೇಕು. ಆ ಮೊತ್ತವನ್ನು ಬಳಸಿಕೊಂಡರೆ ಉತ್ಪಾದನಾ ಚಟುವಟಿಕೆ ಹೆಚ್ಚಿಸಲು ಅನುಕೂಲ ಆಗುತ್ತದೆ. ಇಲ್ಲಿ ವಿಳಂಬ ಆಗುತ್ತಿದೆ. ದೇಶದಾದ್ಯಂತ ಈ ಸಮಸ್ಯೆ ಇದೆ. ಇದರಿಂದ ಸಣ್ಣ ಉದ್ಯಮಗಳಿಗೆ ಬಂಡವಾಳದ ಸಮಸ್ಯೆ ಎದುರಾಗುತ್ತಿದೆ. ಇದು ನಿವಾರಣೆಯಾಗಬೇಕಾಗಿದೆ.

‘ಜಿಎಸ್‌ಟಿಗೂ ಮುನ್ನ ವರ್ತಕರಲ್ಲಿ ಇದ್ದ ದಾಸ್ತಾನಿನ ಮೇಲೆ ‘ವ್ಯಾಟ್‌’ ಪಾವತಿಸಲಾಗಿತ್ತು. ಜಿಎಸ್‌ಟಿಗೆ ವಲಸೆ ಬಂದ ಬಳಿಕ ಅದನ್ನು ರಿಟರ್ನ್‌ನಲ್ಲಿ ತುಂಬಿ ಪಡೆಯಬೇಕಿತ್ತು. ಇದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಬೆಂಬಲ ಇಲ್ಲದೇ ಇರುವುದರಿಂದ ವಿಳಂಬಕ್ಕೆ ಕಾರಣವಾಗಿದೆ. ಇದು ಆದಷ್ಟು ಬೇಗ ಇತ್ಯರ್ಥವಾಗಬೇಕಿದೆ’ ಎಂದು ಹೇಳಿದ್ದಾರೆ.

ಅರಿವು ಮೂಡಿಸಬೇಕಾಗಿದೆ: ಹೊಸ ವ್ಯವಸ್ಥೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯ ಇದೆ. ಹಿಂದಿನ ತೆರಿಗೆ ಪದ್ಧತಿಯಲ್ಲಿ ಎಕ್ಸೈಸ್ ಸುಂಕ ಮರೆಮಾಚಿದ ಸ್ಥಿತಿಯಲ್ಲಿತ್ತು. ಈಗ ಎಲ್ಲವೂ ಪಾರದರ್ಶಕವಾಗಿದೆ. ಕೇಂದ್ರ ಮತ್ತು ರಾಜ್ಯಗಳಿಗೆ ತೆರಬೇಕಾದ ತೆರಿಗೆ ಬಗ್ಗೆ ಬಿಲ್‌ನಲ್ಲಿ ಸ್ಪಷ್ಟವಾಗಿ ನಮೂದಾಗಿರುತ್ತದೆ. 

‘ಹೊಸ ವ್ಯವಸ್ಥೆಯ ಬದಲಾವಣೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯಗಳು ಜತೆಗೂಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಬರೀ ಜಾಹೀರಾತು ನೀಡುವುದಷ್ಟೇ ಅಲ್ಲ, ವಿಶೇಷ ಕಾರ್ಯಕ್ರಮಗಳೂ ಅಗತ್ಯ’ ಎಂದು ಅವರು ತಿಳಿಸಿದ್ದಾರೆ.

ಎರಡು ವರ್ಷ ಬೇಕು: ‘ಇದೊಂದು ಸಂಪೂರ್ಣವಾಗಿ ಹೊಸ ವ್ಯವಸ್ಥೆ. ಸರ್ಕಾರ, ತೆರಿಗೆ ಅಧಿಕಾರಿಗಳು, ವರ್ತಕರು, ಗ್ರಾಹಕರು ಎಲ್ಲರಿಗೂ ಹೊಸ ಅನುಭವ. ವ್ಯವಸ್ಥೆ ಸುಸ್ಥಿತಿಗೆ ಬರಲು ಎರಡು ವರ್ಷ ಬೇಕಾಗುತ್ತದೆ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಆರ್‌. ಶಿವಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

‘ಅನುಭವದ ಕೊರತೆ, ತಾಂತ್ರಿಕ ಸಮಸ್ಯೆಗಳಿಂದಾಗಿ ಜಿಎಸ್‌ಟಿ ಹಲವು ಗೊಂದಲಗಳಿಂದ ಕೂಡಿದೆ. ಸರ್ಕಾರದ ಅಧಿಸೂಚನೆಗಳು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಇವೆ. ಸರಕುಗಳ ಮೇಲಿನ ತೆರಿಗೆ ಬದಲಾವಣೆಗೆ ಸಂಬಂಧಿಸಿದಂತೆ ಮಾರಾಟಗಾರ ಮತ್ತು ಖರೀದಿದಾರರಿಗೆ ಸ್ಪಷ್ಟತೆ ಸಿಗುತ್ತಿಲ್ಲ. ಅಧಿಸೂಚನೆ ಸ್ಪಷ್ಟವಾಗಿ ಇಲ್ಲ. ತೆರಿಗೆ ಅಧಿಕಾರಿಗಳೇ ಗೊಂದಲದಲ್ಲಿದ್ದಾರೆ. 

‘ಸರಕುಗಳನ್ನು ತೆರಿಗೆ ಹಂತಗಳಲ್ಲಿ ವಿಭಜಿಸುವಾಗ ಆ ಸರಕುಗಳ ಬಳಕೆಯ ಅಗತ್ಯ ಮತ್ತು ಅನಿವಾರ್ಯತೆ ಪರಿಗಣಿಸಬೇಕು. ಜಿಎಸ್‌ಟಿ ಜಾರಿಗೆ ಬಂದ ಬಳಿಕ ಕ್ರಮೇಣ ಕೆಲವು ಸರಕುಗಳ ತೆರಿಗೆ ದರ ತಗ್ಗಿಸಲಾಗಿದೆ. ಹೀಗಿದ್ದರೂ ಅನೇಕ ಸರಕುಗಳ ತೆರಿಗೆ ದರ ಕಡಿತ ವಾಸ್ತವದಲ್ಲಿ ಜಾರಿಯಾಗಿಲ್ಲ. ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಇವೆಲ್ಲವೂ ಬಗೆಹರಿಸಬೇಕಾಗಿದೆ. ತೆರಿಗೆ ಹಂತದಲ್ಲಿ ಸ್ಪಷ್ಟನೆ ಬರದೇ ಇರುವುದರಿಂದ ವಹಿವಾಟು ನಷ್ಟವಾಗುತ್ತಿದೆ.

‘ದುಡಿಯುವ ಬಂಡವಾಳ ಇಲ್ಲದೇ ಹೋದರೆ ತಯಾರಿಕಾ ಸಾಮರ್ಥ್ಯ ಕಡಿಮೆ ಆಗುತ್ತದೆ. ಅದು ರಾಜ್ಯ, ದೇಶದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ’ ಎಂದು ಅವರು ವಿವರಿಸಿದ್ದಾರೆ.

ಯಶಸ್ವಿ ಜಾರಿ: ‘ಕೆಲವೊಂದು ತಾಂತ್ರಿಕ ಸಮಸ್ಯೆಗಳಿದ್ದರೂ ಒಟ್ಟಾರೆಯಾಗಿ ಒಂದು ವರ್ಷದ ಅವಧಿಯಲ್ಲಿ ಜಿಎಸ್‌ಟಿ ವ್ಯವಸ್ಥೆಯು ಯಶಸ್ವಿಯಾಗಿ ಜಾರಿಯಾಗಿದೆ’ ಎಂದು ಬಿಸಿಐಸಿನ ಪರೋಕ್ಷ ತೆರಿಗೆ ತಜ್ಞರ ಸಮಿತಿ ಅಧ್ಯಕ್ಷ ಪಿ.ವಿ. ಶ್ರೀನಿವಾಸನ್‌ ಹೇಳಿದ್ದಾರೆ.

‘ಆಧುನಿಕ ತಂತ್ರಜ್ಞಾನ ಆಧರಿಸಿದ ಮಹತ್ತರ ಬದಲಾವಣೆ ಇದಾಗಿದೆ. ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬರುತ್ತಿದೆ. ತೆರಿಗೆದಾರರ ಸಂಖ್ಯೆ ಹೆಚ್ಚಿಸಬೇಕು ಎನ್ನುವುದು ಜಿಎಸ್‌ಟಿ ಜಾರಿಯ ಮೂಲ ಉದ್ದೇಶವಾಗಿತ್ತು. ಅದು ಸಾಧ್ಯವಾಗಿದೆ ಎನ್ನುವುದು ಹೆಮ್ಮೆಯ ಸಂಗತಿ. ಸ್ಥಿರತೆಯೆಡೆಗೆ ಮರಳಲು ಇನ್ನೂ ಸ್ವಲ್ಪ ಸಮಯ ಹಿಡಿಯಲಿದೆ. ಕೆಲವೇ ತಿಂಗಳುಗಳಲ್ಲಿ ಇನ್‌ಪುಟ್‌ ಕ್ರೆಡಿಟ್‌, ಮರುಪಾವತಿ ಸಮಸ್ಯೆಗಳು ಬಗೆಹರಿಯುವ ವಿಶ್ವಾಸವಿದೆ’ ಎಂದಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !