ಶುಕ್ರವಾರ, ಡಿಸೆಂಬರ್ 6, 2019
20 °C

ಚಿನ್ನದ ಬೇಟೆಯೋ, ಷೇರುಪೇಟೆಯೋ?

Published:
Updated:
Prajavani

ಚಿನ್ನ ಖರೀದಿಸುವುದೋ ಇಲ್ಲ, ಷೇರುಪೇಟೆಯಲ್ಲಿ ಹಣ ತೊಡಗಿಸುವುದೋ ಹೀಗೊಂದು ಪ್ರಶ್ನೆ ಪ್ರತಿಯೊಬ್ಬ ಹೂಡಿಕೆದಾರರನ್ನು ಕಾಡುತ್ತಿರುತ್ತದೆ. ಷೇರು ಮಾರುಕಟ್ಟೆಯಲ್ಲಿ ದುಡ್ಡು ಹಾಕುವುದು ಜೂಜಾಟದಂತೆ ಎಂದು ಕೆಲವರು ಅಭಿಪ್ರಾಯಪಟ್ಟರೆ, ಮತ್ತೊಂದಿಷ್ಟು ಮಂದಿ ಷೇರುಪೇಟೆಯಿಂದ ಮಾತ್ರ ಹಣ ಬೆಳೆಸಲು ಸಾಧ್ಯ ಎನ್ನುತ್ತಾರೆ. ಈ ಪರ ವಿರೋಧದ ಚರ್ಚೆಯ ಮಧ್ಯೆ ವಾಸ್ತವದ ನೆಲೆಗಟ್ಟಿನಲ್ಲಿ ಈ ಎರಡೂ ಸಂದರ್ಭಗಳನ್ನು ವಿಶ್ಲೇಷಣೆ ಮಾಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

‘ಚಿನ್ನಾ ಬೇಡ ಕಣೆ ‘ಚಿನ್ನ’, ಷೇರುಪೇಟೆಯಲ್ಲಿ ಹಣ ತೊಡಗಿಸಿ ಹೆಚ್ಚು ಲಾಭ ಮಾಡೋಣ ಎಂದು ಪತಿರಾಯರು ಹೇಳಿದರೂ ಪತ್ನಿಯರು ಅದನ್ನು ಒಪ್ಪಲು ತಯಾರಿರುವುದಿಲ್ಲ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಗಾಳಿಯಲ್ಲಿ ಗುಂಡು ಹೊಡೆದಂತೆ, ಹಣಕ್ಕೆ ಅಲ್ಲಿ ಭದ್ರತೆಯಿಲ್ಲ ಎನ್ನುವುದು ಚಿನ್ನದ ಪರ ಇರುವವರ ಮುಖ್ಯ ತಕರಾರು. ಆದರೆ, ಈ ಎರಡೂ ವಿಚಾರಗಳು ಅರ್ಧಸತ್ಯ ಎನ್ನುವುದನ್ನು ನಾವು ಅರಿತುಕೊಳ್ಳಬೇಕು.

ನೀವು ಹಣವನ್ನು ಹೂಡಿಕೆ ಮಾಡಬೇಕು ಎಂದು ತೀರ್ಮಾನಿಸಿದ ಕೂಡಲೇ ಅದರಿಂದ ಸಿಗುವ ಉತ್ಪತ್ತಿ ಏನು ಎನ್ನುವುದನ್ನು ಪರಿಗಣಿಸಬೇಕು. ಈ ಲೆಕ್ಕಾಚಾರದಲ್ಲಿ ನೋಡುವುದಾದರೆ ಬಹುತೇಕ ಸಂದರ್ಭಗಳಲ್ಲಿ ಷೇರುಪೇಟೆಯು ಚಿನ್ನದ ಹೂಡಿಕೆಗಿಂತ ಹೆಚ್ಚು ಲಾಭ ತಂದುಕೊಟ್ಟಿದೆ. ಉದಾಹರಣೆಗೆ 2012 ರಿಂದ 2017 ರ ವರೆಗಿನ ಅವಧಿಯನ್ನು ತೆಗೆದುಕೊಂಡರೆ ಷೇರು ಮಾರುಕಟ್ಟೆ ಶೇ 11 ರಷ್ಟು ಪ್ರಗತಿ ಸಾಧಿಸಿದೆ.

ಅಂದರೆ ನೀವು ಹೂಡಿಕೆ ಮಾಡಿರುವ ₹1 ಲಕ್ಷ ಐದು ವರ್ಷಗಳ ಅವಧಿಯಲ್ಲಿ ₹ 1 ಲಕ್ಷದ 60 ಸಾವಿರ ಆಗಿದೆ. ಇದೇ ಅವಧಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿರುವವರು ₹ 1 ಲಕ್ಷಕ್ಕೆ ₹ 5 ಸಾವಿರ ಕಳೆದುಕೊಂಡಿದ್ದಾರೆ. ಹಾಗೆಂದ ಮಾತ್ರಕ್ಕೆ ಚಿನ್ನದಲ್ಲಿ ಹೂಡಿಕೆ ಮಾಡಿದರೆ ನಷ್ಟವಾಗುತ್ತದೆ ಎಂದಲ್ಲ. ಚಿನ್ನದ ಮೇಲೆ ಈವರೆಗೆ ಸಿಕ್ಕಿರುವ ಒಟ್ಟಾರೆ ಲಾಭ ಶೇ 8 ರಿಂದ ಶೇ 11 ರಷ್ಟಿದೆ. ಆದರೆ ಇದನ್ನು ಪರಿಗಣಿಸಿಯೂ ಎಲ್ಲಾ ಸಮಯದಲ್ಲೂ ಷೇರುಪೇಟೆ, ಚಿನ್ನದ ಮೇಲಿನ ಹೂಡಿಕೆಗಿಂತ ಹೆಚ್ಚಿನ ಲಾಭ ನೀಡಿದೆ.

ಚಿನ್ನದ ಮೇಲೆ ಹಣ ಹೂಡಿಕೆ ಮಾಡಿದಾಗ ಅದರ ಬೆಲೆ ಇನ್ನಷ್ಟು ಜಾಸ್ತಿಯಾದಾಗ ಮಾತ್ರ ನಿಮಗೆ ಲಾಭ ಸಿಗುತ್ತದೆ. ಬಡ್ಡಿ, ಬಾಡಿಗೆ ಅಥವಾ ಇನ್ಯಾವುದೇ ರೀತಿಯ ತಕ್ಷಣದ ಉತ್ಪತ್ತಿ ಇರುವುದಿಲ್ಲ. ಜತೆಗೆ ಆಭರಣವನ್ನು ಖರೀದಿಸಿ ಅಂಗಡಿಯಿಂದ ಹೊರಗೆ ಕಾಲಿಟ್ಟ ಕೂಡಲೇ ನೀವು ಖರೀದಿಸಿರುವ ಚಿನ್ನ ಮೇಕಿಂಗ್ ಚಾರ್ಜಸ್ ಆಧಾರದಲ್ಲಿ ಶೇ 20 ರಿಂದ ಶೇ 25 ರಷ್ಟು ಮೌಲ್ಯ ಕಳೆದುಕೊಳ್ಳುತ್ತದೆ. ಆದರೆ, ಷೇರುಗಳಲ್ಲಿ ಅಥವಾ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ತೊಡಗಿಸಿದಾಗ ಕಾಲಕಾಲಕ್ಕೆ ಬಡ್ಡಿ, ಲಾಭಾಂಶ ಸಿಗುತ್ತದೆ.

ಹೀಗೆ ತುಲನೆ ಮಾಡಿ ನೋಡಿದಾಗ ನಿಮಗೆ ₹ 100 ಹೂಡಿಕೆ ಮಾಡುವ ಶಕ್ತಿ ಇದೆ ಎಂದರೆ ₹10 ರಿಂದ ₹ 15 ಮಾತ್ರ ಚಿನ್ನಕ್ಕೆ ತೊಡಗಿಸಬೇಕು. ಇನ್ನುಳಿದ ಹಣವನ್ನು ಷೇರು, ಮ್ಯೂಚುವಲ್ ಫಂಡ್, ಪಿಪಿಎಫ್ ಸೇರಿ ವಿವಿಧ ಹಣಕಾಸು ಉತ್ಪನ್ನಗಳಲ್ಲಿ ಹೂಡಬಹುದು.

ಚಿನ್ನದ ಮೇಲಿನ ಹೂಡಿಕೆಗೆ ಹಣದುಬ್ಬರ ಮೆಟ್ಟಿನಿಲ್ಲುವ ಶಕ್ತಿಯಿದೆ. ಆದರೆ, ಚಿನ್ನ ಖರೀದಿಸುವ ನೆಪದಲ್ಲಿ ಆಭರಣಗಳನ್ನು ಖರೀದಿಸಿದರೆ ನಷ್ಟವೇ ಹೆಚ್ಚು. ಗೋಲ್ಡ್ ಬಿಸ್ಕಿಟ್ ಅಥವಾ ನಾಣ್ಯದ ರೂಪದಲ್ಲಿ ಅದನ್ನು ಖರೀದಿಸಿದರೂ ನಿರ್ವಹಣೆ ವೆಚ್ಚ ಜಾಸ್ತಿ. ಹೀಗಾಗಿ ಚಿನ್ನದಲ್ಲಿ ಹೂಡಿಕೆ ಮಾಡಲೇಬೇಕು ಎನ್ನುವವರು ಈಗಿನ ಸನ್ನಿವೇಶದಲ್ಲಿ ಸರ್ಕಾರದ ಸಾವರಿನ್ ಬಾಂಡ್‌ಗಳಲ್ಲಿ ತೊಡಗಿಸಬಹುದು. ಸಾವರಿನ್ ಗೋಲ್ಡ್ ಬಾಂಡ್‌ಗಳಲ್ಲಿ ತೊಡಗಿಸಿದರೆ ಶೇ 2.5 ರಷ್ಟು ಬಡ್ಡಿ ಸಿಗುತ್ತದೆ. ಜತೆಗೆ ಚಿನ್ನದ ದರ ಹೆಚ್ಚಾದಾಗ ಅದನ್ನು ನೀವು ಮಾರಾಟ ಮಾಡಲು ಕೂಡ ಅವಕಾಶವಿದೆ.

ಪೇಟೆಯಲ್ಲಿ ಎಲ್ಲವೂ ತ್ವರಿತ, ಹರಿತ!
‘ನಿಮ್ಮ ಗುರಿ 10 ವರ್ಷದೆಡೆ ಇರಬೇಕೇ ವಿನಾ 10 ನಿಮಿಷದೆಡೆಯಲ್ಲ. ನೀವು ಖರೀದಿಸಿದ ಷೇರನ್ನು 10 ವರ್ಷಗಳಾದರೂ ಹಿಡಿದಿಟ್ಟುಕೊಳ್ಳುವ ತಾಳ್ಮೆ ನಿಮಗಿಲ್ಲದಿದ್ದರೆ ಷೇರುಪೇಟೆಗೆ ಹೆಜ್ಜೆ ಇಡಬೇಡಿ’ – ಇದು ವಾರನ್ ಬಫೆಟ್ ಖಚಿತ ನುಡಿ. ಹೌದು ಪೇಟೆಯಲ್ಲಿ ತ್ವರಿತ ಬದಲಾವಣೆಗಳಾಗುವುದು ಸರ್ವೇ ಸಾಮಾನ್ಯ. ಈ ವಿದ್ಯಮಾನಗಳಿಗೆ ಬೆದರಿ ಏನೋ ಆಗಿ ಹೋಯ್ತು ಎನ್ನುವ ರೀತಿ ಹೂಡಿಕೆದಾರರು ಚಿಂತೆ ಮಾಡುವುದರಲ್ಲಿ ಅರ್ಥವಿಲ್ಲ.

ಇತ್ತೀಚಿನ ಬೆಳವಣಿಗೆಯನ್ನೇ ತೆಗೆದುಕೊಳ್ಳಿ, ಜನವರಿ ಮೂರನೇ ವಾರದಲ್ಲಿ ಸೆನ್ಸೆಕ್ಸ್ 36,387 ಅಂಶಗಳ ಏರಿಕೆ ದಾಖಲಿಸಿತು. ಫೆಬ್ರುವರಿ ಮೊದಲ ವಾರದಲ್ಲಿ ಬಜೆಟ್ ಘೋಷಣೆ ಮತ್ತು ಬಡ್ಡಿ ದರ ಕಡಿತದ ಪರಿಣಾಮ ಅದು ಮತ್ತಷ್ಟು ಸುಧಾರಿಸಿ 36,469 ಅಂಶಗಳಿಗೆ ಜಿಗಿಯಿತು. ಆದರೆ, ಈಗ 7 ದಿನಗಳ ನಿರಂತರ ಹಿನ್ನಡೆ ಕಂಡು ವಾರಾಂತ್ಯಕ್ಕೆ ಸೆನ್ಸೆಕ್ಸ್ 35,808 ಅಂಶಗಳಿಗೆ ಕುಸಿದಿದೆ. ಅಂದರೆ ಕೇವಲ ವಾರದ ಅವಧಿಯಲ್ಲಿ ಸೆನ್ಸೆಕ್ಸ್ 661 ಅಂಶಗಳ ಹಿನ್ನಡೆ ಅನುಭವಿಸಿದೆ. ಅಕ್ಟೋಬರ್ 28, 2018 ರ ಬಳಿಕ ವಾರದ ಅವಧಿಯಲ್ಲಿ ಉಂಟಾಗಿರುವ ಅತಿ ದೊಡ್ಡ ಕುಸಿತ ಇದಾಗಿದೆ.

ತ್ರೈಮಾಸಿಕ ಅವಧಿಯಲ್ಲಿ ಕಂಪನಿಗಳ ಸೀಮಿತ ಸಾಧನೆ, ಅಮೆರಿಕ- ಚೀನಾ ವ್ಯಾಪಾರ ಬಿಕ್ಕಟ್ಟು, ತೈಲ ಬೆಲೆ ಏರಿಳಿತ, ಪುಲ್ವಾಮಾದಲ್ಲಿ ಉಗ್ರರ ದಾಳಿ ಸೇರಿ ಹಲವು ಸಂಗತಿಗಳು ಕಳೆದ ವಾರ ಮಾರುಕಟ್ಟೆ ಮೇಲೆ ಪ್ರಭಾವ ಬೀರಿವೆ. ಜಾಗತಿಕ ವಿದ್ಯಮಾನಗಳಿಗಿಂತ ದೇಶೀಯ ವಿದ್ಯಮಾನಗಳಿಂದಲೇ ಪೇಟೆ ಹೆಚ್ಚು ನಕಾರಾತ್ಮಕವಾಗಿದೆ.

ಮುನ್ನೋಟ: ಕಂಪನಿಗಳ ತ್ರೈಮಾಸಿಕ ಫಲಿಂತಾಂಶಗಳ ಮಂಡನೆ ಅವಧಿ ಬಹುತೇಕ ಪೂರ್ಣಗೊಂಡಿದೆ. ಫೆಬ್ರವರಿ 21 ರಂದು ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ ಸಭೆಯ ನಿರ್ಣಯಗಳು ಹೊರಬೀಳಲಿದ್ದು ಜಾಗತಿಕ ಮಾರುಕಟ್ಟೆಯ ಮೇಲೆ ಅದು ಪ್ರಭಾವ ಬೀರುವ ಸಾಧ್ಯತೆಯಿದೆ.

ಹೂಡಿಕೆದಾರರಿಗೆ ಲೋಕಾಸಭಾ ಚುನಾವಣೆ ನಿರ್ಣಾಯಕ ಅಂಶ. ಹೀಗಾಗಿ ಫಲಿತಾಂಶದ ಬಳಿಕವಷ್ಟೇ ಮಾರುಕಟ್ಟೆಯಲ್ಲಿ ಸ್ಥಿರತೆ ನಿರೀಕ್ಷಿಸಬಹುದಾಗಿದೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಉಪಾಧ್ಯಕ್ಷ)

ಪ್ರತಿಕ್ರಿಯಿಸಿ (+)