ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಕಾರ್ ವಿಮೆ ಸರಿ ಇದೆಯೇ?

Last Updated 6 ಮಾರ್ಚ್ 2019, 11:37 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ನಡೆದ ಏರ್ ಶೋ ವೇಳೆ ಸುಮಾರು 300 ಕಾರುಗಳು ಬೆಂಕಿಗೆ ಆಹುತಿಯಾದ ನಂತರದಲ್ಲಿ ಕಾರ್ ಮಾಲೀಕರಲ್ಲಿ ಒಂದು ರೀತಿಯ ಭಯ ಆವರಿಸಿಕೊಂಡಿದೆ. ನಮ್ಮ ಕಾರಿಗೂ ಹೀಗಾದ್ರೆ ಏನು ಗತಿ. ಕಾರಿನ ಇನ್ಶೂರೆನ್ಸ್ ಸರಿ ಇದೆಯಾ ಎಂದು ಅನೇಕರು ದಾಖಲೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಈ ವೇಳೆಯಲ್ಲಿ ಸೂಕ್ತ ಕಾರ್ ವಿಮೆ ಆಯ್ಕೆಯಲ್ಲಿ ಬಹಳ ಮುಖ್ಯವಾಗಿರುವ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (ಐಡಿವಿ–ಘೋಷಿತ ವಿಮೆ ಮೊತ್ತ) ಮತ್ತು ವಾಲೆಂಟರಿ ಡಿಡಕ್ಷನ್‌ಗಳ (ಸ್ವಯಂ ಪ್ರೇರಿತ ಕಡಿತ) ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (ಐಡಿವಿ) ಕಡಿಮೆ ಮಾಡಿಕೊಳ್ಳಬೇಡಿ: ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (ಐಡಿವಿ) ಅಂದರೆ ನಿಮ್ಮ ಕಾರು
ನಿರ್ದಿಷ್ಟ ವರ್ಷದಲ್ಲಿ ಹೊಂದಿರುವ ಗರಿಷ್ಠ ವಿಮಾ ಮೊತ್ತ.

ಕಾರು ಹಳೆಯದಾದಂತೆ ವರ್ಷದಿಂದ ವರ್ಷಕ್ಕೆ ಕಾರಿನ ‘ಐಡಿವಿ’ ಕಡಿಮೆಯಾಗುತ್ತಾ ಹೋಗುತ್ತದೆ. ಕಳ್ಳತನ, ಅಗ್ನಿ ಅವಘಡ ಅಥವಾ ಇನ್ಯಾವುದೇ ರೀತಿಯ ಸಂಪೂರ್ಣ ನಷ್ಟ ನಿಮ್ಮ ಕಾರಿಗೆ ಉಂಟಾದಾಗ ‘ಐಡಿವಿ’ಯಲ್ಲಿ ಘೋಷಿಸಿರುವ ಮೊತ್ತವನ್ನು ಇನ್ಶೂರೆನ್ಸ್ ಕಂಪನಿ ಪರಿಹಾರ ರೂಪದಲ್ಲಿ ನೀಡುತ್ತದೆ. ಕಾರಿಗೆ ಎಷ್ಟು ‘ಐಡಿವಿ’ ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವ ಆಧಾರದ ಮೇಲೆ ಇನ್ಸೂರೆನ್ಸ್ ಪ್ರೀಮಿಯಂ
ನಿಗದಿಯಾಗುತ್ತದೆ.

ಹೆಚ್ಚು ‘ಐಡಿವಿ’ ಆಯ್ಕೆ ಮಾಡಿಕೊಂಡರೆ ಹೆಚ್ಚು ಪ್ರೀಮಿಯಂ ಕಟ್ಟಬೇಕಾಗುತ್ತದೆ. ಹಾಗೆಯೇ ಕಡಿಮೆ ‘ಐಡಿವಿ’ ಆಯ್ಕೆ ಮಾಡಿದರೆ ಪ್ರೀಮಿಯಂ ಮೊತ್ತ ತಗ್ಗುತ್ತದೆ. ಆದರೆ, ಒಂದು ಮಾತನ್ನು ನೆನಪಿನಲ್ಲಿಡಿ. ‘ಐಡಿವಿ’ಯ ಗರಿಷ್ಠ ಲಭ್ಯತೆಗೆ ನೀವು ಇನ್ಶೂರೆನ್ಸ್ ಪಡೆದುಕೊಳ್ಳುವುದು ಸೂಕ್ತ ಆಯ್ಕೆ ಆಗಿರುತ್ತದೆ. ಇಲ್ಲದಿದ್ದರೆ ಕಾರು ಕಳ್ಳತನ ಅಥವಾ ಬೆಂಕಿಗೆ ಆಹುತಿಯಾದಾಗ ಕಡಿಮೆ ‘ಐಡಿವಿ’ ಹೊಂದಿದ್ದರೆ ದೊಡ್ಡ ಮೊತ್ತದ ನಷ್ಟವನ್ನು ನೀವೇ ಹೊರಬೇಕಾಗುತ್ತದೆ.

ಪಟ್ಟಿಯಲ್ಲಿನ ಉದಾಹರಣೆಯಂತೆ 2015 ರಲ್ಲಿ ಖರೀದಿಸಿರುವ ಸ್ವಿಫ್ಟ್ ಕಾರಿಗೆ ಗರಿಷ್ಠ ₹ 3.38 ಲಕ್ಷದ ಐಡಿವಿ ಅಥವಾ ಕನಿಷ್ಠ
₹ 2.34 ಲಕ್ಷದ ಐಡಿವಿ ನೀಡಲು ಇನ್ಶೂರೆನ್ಸ್ ಕಂಪನಿ ತಯಾರಿದೆ.

ಈ ಸಂದರ್ಭದಲ್ಲಿ ಪ್ರೀಮಿಯಂ ಕಡಿಮೆ ಮಾಡಿಕೊಳ್ಳಲು ಗ್ರಾಹಕ ₹ 2.34 ಲಕ್ಷದ ಐಡಿವಿ ಆಯ್ಕೆ ಮಾಡಿಕೊಂಡು ಇನ್ಶೂರೆನ್ಸ್ ಪಡೆದುಕೊಳ್ಳುತ್ತಾನೆ ಎಂದಿಟ್ಟುಕೊಳ್ಳಿ. ಒಂದೊಮ್ಮೆ ಈಗ ಆತನ ಕಾರು ಕಳ್ಳತನ ಅಥವಾ ಅಗ್ನಿ ಅವಘಡಕ್ಕೆ ತುತ್ತಾದಲ್ಲಿ ಐಡಿವಿ ಪ್ರಕಾರ ₹ 2.34 ಲಕ್ಷ ಮಾತ್ರ ಪರಿಹಾರ ರೂಪದಲ್ಲಿ ಸಿಗುತ್ತದೆ. ಅಂದರೆ ಪ್ರೀಮಿಯಂ ಮೇಲೆ ಕೇವಲ ₹ 1 ಸಾವಿರ ಉಳಿಸಲು ಹೋದರೆ ಬರೋಬ್ಬರಿ ₹ 1 ಲಕ್ಷ ನಷ್ಟದ ಹೊರೆ ಬೀಳುತ್ತದೆ.

ವಾಲೆಂಟರಿ ಡಿಡಕ್ಷನ್ ಬಗ್ಗೆ ಎಚ್ಚರವಹಿಸಿ: ವಾಲೆಂಟರಿ ಡಿಡಕ್ಷನ್ ಅಂದರೆ ಇನ್ಶೂರೆನ್ಸ್ ಕ್ಲೇಮ್ ಸಂದರ್ಭದಲ್ಲಿ ಸ್ವಯಂ ಪ್ರೇರಿತರಾಗಿ ಹೆಚ್ಚುವರಿ ನಷ್ಟ ಭರಿಸಲು ಒಪ್ಪಿಗೆ ಸೂಚಿಸಿ ಪ್ರೀಮಿಯಂನಲ್ಲಿ ರಿಯಾಯ್ತಿ ಪಡೆದುಕೊಳ್ಳುವುದು.

ಉದಾಹರಣೆಗೆ ನೀವು ₹ 30 ಸಾವಿರ ಇನ್ಶೂರೆನ್ಸ್ ಕ್ಲೇಮ್ ಪಡೆಯಲು ಮುಂದಾಗುತ್ತೀರಿ ಎಂದಿಟ್ಟುಕೊಳ್ಳೋಣ. ಆಗ ₹ 10 ಸಾವಿರ ವಾಲೆಂಟರಿ ಡಿಡಕ್ಷನ್‌ಗೆ ನೀವು ಇನ್ಶೂರೆನ್ಸ್ ಮಾಡಿಸುವ ಸಂದರ್ಭದಲ್ಲಿ ಪೂರ್ವಾನುಮತಿ ನೀಡಿದ್ದರೆ ಕೇವಲ 20 ಸಾವಿರವನ್ನು
ಮಾತ್ರ ಇನ್ಶೂರೆನ್ಸ್ ಕಂಪನಿ ನೀಡುತ್ತದೆ. ಇನ್ನುಳಿದ ₹ 10 ಸಾವಿರವನ್ನು ನಿಮ್ಮ ಜೇಬಿನಿಂದಭರಿಸಬೇಕಾಗುತ್ತದೆ. ಹೀಗಾಗಿ ಎಚ್ಚರವಹಿಸಿ, ಕೇವಲ ಪ್ರೀಮಿಯಂ ಕಡಿಮೆ ಮಾಡಿಕೊಳ್ಳುವ ಸಲುವಾಗಿ ವಾಲೆಂಟರಿ ಡಿಡಕ್ಷನ್ ಆಯ್ಕೆ ಮಾಡಿಕೊಳ್ಳಬೇಡಿ.

ಪೇಟೆಯ ಮೇಲೆ ಉದ್ವಿಗ್ನತೆ ಪರಿಣಾಮ

ಗಡಿಯಲ್ಲಿ ಭಾರತ- ಪಾಕ್ ನಡುವಣ ಉದ್ವಿಗ್ನತೆ ಮಧ್ಯೆ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಅಲ್ಪಗಳಿಕೆ ಕಂಡಿವೆ. ವಾರಾಂತ್ಯಕ್ಕೆ ಸೆನ್ಸೆಕ್ಸ್ ಶೇ 0.54 ರಷ್ಟು (35,063) ಏರಿಕೆ ದಾಖಲಿಸಿದ್ದರೆ, ನಿಫ್ಟಿ ಶೇ 0.67 ರಷ್ಟು (10,863) ಪ್ರಗತಿ ಸಾಧಿಸಿದೆ.

ಅಮೆರಿಕ ಮತ್ತು ಚೀನಾ ನಡುವಣ ವ್ಯಾಪಾರ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಗೋಚರಿಸಿದ ಪರಿಣಾಮ ವಾರದ ಆರಂಭದಲ್ಲಿ ಸೂಚ್ಯಂಕಗಳು ಸಕಾರಾತ್ಮಕವಾಗಿ ಕಂಡರೂ ನಂತರದಲ್ಲಿ ಉಂಟಾದ ಭಾರತ- ಪಾಕ್ ಬಿಕ್ಕಟ್ಟಿನಿಂದ ಮಾರುಕಟ್ಟೆಯಲ್ಲಿ ಹಿಂಜರಿಕೆ ಕಂಡುಬಂತು.

ಪ್ರಮುಖ ಕಂಪನಿಗಳ ಏರಿಕೆ- ಇಳಿಕೆ: ಜೀ ಎಂಟರ್‌ಟೇನ್ಮೆಂಟ್ ಈ ವಾರ ಶೇ 8.8 ರಷ್ಟು ಏರಿಕೆ ದಾಖಲಿಸುವ ಮೂಲಕ ನಿಫ್ಟಿಯ ಮಾಧ್ಯಮ ವಲಯದ ಶೇ 6.3 ರಷ್ಟು ಪ್ರಗತಿಗೆ ಕಾರಣವಾಗಿದೆ. ಉಳಿದಂತೆ ಕೋಲ್ ಇಂಡಿಯಾ (ಶೇ 8.4) , ಐಒಸಿ (ಶೇ 7.9), ಅಲ್ಟ್ರಾಟೆಕ್ ಸಿಮೆಂಟ್ (ಶೇ 7.4), ಯೆಸ್ ಬ್ಯಾಂಕ್ (ಶೇ 6.9) ಸುಧಾರಣೆ ಕಂಡು ಮೊದಲ ಐದು ಸ್ಥಾನದಲ್ಲಿವೆ.

ಭಾರ್ತಿ ಇನ್ಫ್ರಾಟೆಲ್ ನಿಫ್ಟಿಯಲ್ಲಿ ಈ ವಾರ ಶೇ 6.6 ರಷ್ಟು ಕುಸಿದಿದೆ. ಅದಾನಿ ಪೋರ್ಟ್ಸ್, ಐಷರ್ ಮೋಟರ್ಸ್, ಭಾರ್ತಿ ಏರ್‌ಟೆಲ್ ಮತ್ತು ಹಿಂದೂಸ್ಥಾನ್ ಯುನಿ ಲಿವರ್ ಶೇ 2 ರಿಂದ ಶೇ 6 ರ ನಡುವೆ ಕುಸಿತ ದಾಖಲಿಸಿವೆ.

ಮಿಡ್ ಕ್ಯಾಪ್‌ಗಳಲ್ಲಿ, ಅದಾನಿ ಪವರ್ ಶೇ 21 ರಷ್ಟು ಏರಿಕೆ ಕಂಡಿದೆ. ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಷೇರುಗಳು ಶೇ 7.5 ರಷ್ಟು ಕುಸಿದು ಮಿಡ್ ಕ್ಯಾಪ್ ಪಟ್ಟಿಯಲ್ಲಿ ಹಿನ್ನಡೆ ಅನುಭವಿಸಿದೆ.

ಬಂಡವಾಳ ಸಂಗ್ರಹ: ಏರ್‌ಟೆಲ್, ಷೇರುಗಳು ಮತ್ತು ಬಾಂಡ್‌ಗಳ ಮೂಲಕ ₹ 32,000 ಕೋಟಿ ಬಂಡವಾಳ ಸಂಗ್ರಹಕ್ಕೆ ಮುಂದಾಗಿದೆ. ಇತ್ತೀಚೆಗೆ ನಡೆದ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಮುನ್ನೋಟ: ಆಗಸ್ಟ್ 2018 ರಲ್ಲಿ ಸೆನ್ಸೆಕ್ಸ್ 38,989 ಅಂಶಗಳ ದಾಖಲೆಯ ಏರಿಕೆ ಕಂಡ ಬಳಿಕ ಶೇ 8 ರಷ್ಟು ಕುಸಿದಿದೆ. ಈ ವರ್ಷವೇ ಶೇ 0.3 ರಷ್ಟು ಇಳಿಕೆ ದಾಖಲಿಸಿದೆ. ಚುನಾವಣೆ ಫಲಿತಾಂಶದವರೆಗೂ ಈ ರೀತಿಯ ಅನಿಶ್ಚಿತತೆ ಇದ್ದೇ ಇರಲಿದೆ.

ಈ ವಾರವೇ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಲ್ಲಿ ಹೂಡಿಕೆದಾರರಿದ್ದಾರೆ. ಮತ್ತೊಂದೆಡೆ ಭಾರತ-ಪಾಕ್ ನಡುವೆ ಬಿಕ್ಕಟ್ಟು ಶಮನವಾಗಿ ಶಾಂತಿ ನೆಲೆಸುವ ಸಾಧ್ಯತೆಯಿದೆ ಎನ್ನುವ ಕಾರಣದಿಂದ ಕಳೆದ ಶುಕ್ರವಾರದ ವಹಿವಾಟಿನಲ್ಲಿ ಸೂಚ್ಯಂಕಗಳು ಸಕಾರಾತ್ಮಕವಾಗಿ ಕಂಡಿವೆ. ಆದರೆ ಉದ್ನಿಗ್ನ ಪರಿಸ್ಥಿತಿ ಮರುಕಳಿಸಿದರೆ ಷೇರುಪೇಟೆಯ ಮೇಲೆ ಅದು ಮತ್ತೆ ನಕಾರಾತ್ಮಕ ಪರಿಣಾಮ ಉಂಟುಮಾಡಲಿದೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT