ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರವದ ಬದುಕಿಗೆ ಆರೋಗ್ಯ ವಿಮೆ

Last Updated 18 ಡಿಸೆಂಬರ್ 2018, 19:31 IST
ಅಕ್ಷರ ಗಾತ್ರ

ಆರೋಗ್ಯ ಎನ್ನುವುದು ಮನುಷ್ಯನ ಅತಿ ದೊಡ್ಡ ಸಂಪತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಹಳೆಯ ಮಾತು. ಜೀವನದ ಸಂಧ್ಯಾಕಾಲದಲ್ಲೂಒತ್ತಡ ರಹಿತ ಬದುಕು ಸಾಗಿಸಬೇಕಾದರೆ ಆರೋಗ್ಯ ವಿಮೆ ಮಾಡಿಸುವುದು ಇಂದಿನ ಅಗತ್ಯ ಮತ್ತು ಅನಿವಾರ್ಯವಾಗಿದೆ.

ಆರೋಗ್ಯ ವಿಮೆಯು ಕಾಯಿಲೆಗಳಿಗೆ ಚಿಕಿತ್ಸೆ ಕೊಡಿಸಲು ನೆರವಾಗುವ ಸಾಧನ, ಜೀವನಕ್ಕೊಂದು ಭದ್ರತೆಯಷ್ಟೇ ಅಲ್ಲ, ಜೀವನಪರ್ಯಂತ ದುಡಿದು ಸಂಪಾದಿಸಿದ ಹಣವನ್ನು ರಕ್ಷಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಸಾಧನವೂ ಹೌದು. ಉಳಿತಾಯದ ಹಣವೆಲ್ಲವೂ ಜೀವನದ ಕೊನೆಯ ದಿನಗಳಲ್ಲಿ ಔಷಧಕ್ಕಾಗಿಯೇ ವ್ಯಯವಾಗಬಾರದಲ್ಲವೇ?

ಜೀವನಶೈಲಿಯಿಂದ ಬರುವ ಕಾಯಿಲೆಗಳ ಪ್ರಮಾಣವು ಕಳೆದೊಂದು ದಶಕದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದ್ದರಿಂದ,ಮಧ್ಯ ವಯಸ್ಸಿಗೆ ಬಂದಾಗ ಆರೋಗ್ಯ ವಿಮೆ ಮಾಡಿಸಿದರೆ ಸಾಕು ಎಂಬ ತೀರ್ಮಾನಕ್ಕೆ ಯಾರೂ ಬರುವಂತಿಲ್ಲ. ವ್ಯಾಯಾಮ ರಹಿತ, ಒತ್ತಡದಿಂದ ಕೂಡಿದ ಜೀವನಶೈಲಿ, ವಿಪರೀತವಾದ ಜಂಕ್‌ ಫುಡ್‌ ಬಳಕೆಯಿಂದಾಗಿ ಯುವಕರು ಸಹಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್‌, ಮಧುಮೇಹ ಮುಂತಾದ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಒಂದು ಒಳ್ಳೆಯ ಆರೋಗ್ಯ ವಿಮೆ ಮಾಡಿಸುವುದರಿಂದ ಅಗತ್ಯ ಸಂದರ್ಭದಲ್ಲಿ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಸಹಾಯವಾಗುವುದಷ್ಟೇ ಅಲ್ಲ, ಎಲ್ಲೇ ಹೋದರೂ ಗುಣಮಟ್ಟದ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ಆಘಾತವು ಯಾವುದೇ ಸಂದರ್ಭದಲ್ಲಿ ಬಂದು ಎರಗಬಹುದು . ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ಆರೋಗ್ಯ ವಿಮೆ ಮಾಡಿಸಿದರೆ ಆಘಾತಗಳನ್ನು ಎದುರಿಸುವ ಶಕ್ತಿ ದೊರೆಯುತ್ತದೆ. ಜೊತೆಗೆ ದೀರ್ಘಾವಧಿಯಲ್ಲಿ ಹಣದ ಉಳಿತಾಯವೂ ಸಾಧ್ಯವಾಗುತ್ತದೆ.

ಆರೋಗ್ಯ ವಿಮೆಯ ಗರಿಷ್ಠ ಲಾಭ ಪಡೆಯಬೇಕೆಂದರೆ ಸಣ್ಣ ವಯಸ್ಸಿನಲ್ಲೇ ವಿಮೆ ಮಾಡಿಸುವುದು ಸೂಕ್ತ. ವಿಮಾ ಕ್ಷೇತ್ರದ ತಜ್ಞರ ಪ್ರಕಾರ ವ್ಯಕ್ತಿಯು 30ವರ್ಷ ವಯಸ್ಸಿಗೆ ತಲುಪುವ ಮೊದಲೇ ವಿಮೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇದರಿಂದ ಕಡಿಮೆ ವಾರ್ಷಿಕ ಕಂತಿನಲ್ಲಿ ಅತ್ಯುತ್ತಮವಾದ ವಿಮೆ ಪಡೆಯಲು ಸಾಧ್ಯವಾಗುತ್ತದೆ. ಆ ವಯಸ್ಸಿನಲ್ಲಿ ಎಲ್ಲರೂ ಆರೋಗ್ಯದಿಂದ ಇರುವುದರಿಂದ ಕಂತಿನ ಮೊತ್ತ ಕಡಿಮೆಯಾಗಿರುತ್ತದೆ.

ಆರೋಗ್ಯ ವಿಮೆ ಹಾಗೂ ಜೀವ ವಿಮೆ ಬಗ್ಗೆ ಅನೇಕರಲ್ಲಿ ಗೊಂದಲಗಳಿವೆ. ಜೀವ ವಿಮೆಯು ವಿಮೆ ಮಾಡಿಸಿದ ವ್ಯಕ್ತಿ ಸಾವನ್ನಪ್ಪಿದರೆ, ನಾಮನಿರ್ದೇಶಿತ ವ್ಯಕ್ತಿಗೆ ನಿಗದಿತ ಮೊತ್ತವನ್ನು ಪಾವತಿ ಮಾಡುತ್ತದೆ. ಆದರೆ, ಆರೋಗ್ಯ ವಿಮೆಯು ವಿಮಾದಾರ ಅಪಘಾತಕ್ಕೊಳಗಾದರೆ ಅಥವಾ ಕಾಯಿಲೆಗೆ ತುತ್ತಾದರೆ ಆತನ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸುತ್ತದೆ. ಜೀವನದಲ್ಲಿ ಯಾವುದೇ ಸಂದರ್ಭದಲ್ಲಿ ಅನಿರೀಕ್ಷಿತಗಳು ಎದುರಾಗುವ ಸಾಧ್ಯತೆಗಳು ಇರುವುದರಿಂದ ಎರಡೂ ವಿಮೆಗಳು ಅಗತ್ಯ.

ಅನೇಕ ಉದ್ಯೋಗದಾತ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಉಚಿತವಾಗಿ ಆರೋಗ್ಯ ವಿಮೆ ಮಾಡಿಸುತ್ತವೆ. ಆದರೆ, ಚಿಕಿತ್ಸಾ ವೆಚ್ಚಗಳು ದುಬಾರಿಯಾಗುತ್ತಿರುವ ಇಂದಿನ ದಿನಮಾನದಲ್ಲಿ ಸಂಸ್ಥೆಗಳು ಕೊಡಮಾಡುವ ವಿಮೆಗಷ್ಟೇ ಸೀಮಿತವಾಗಿರುವುದು ಸರಿಯಾದ ಕ್ರಮವಲ್ಲ. ಆ ವಿಮೆಗಳು ಒದಗಿಸುವ ನೆರವು ಎಲ್ಲ ರೋಗಗಳ ಚಿಕಿತ್ಸೆಗೆ ಸಾಕಾಗಲಾರದು. ಆದ್ದರಿಂದ ಪ್ರತ್ಯೇಕ ವಿಮೆ ಮಾಡಿಸುವುದೇ ಸುರಕ್ಷಿತ.

ಆರೋಗ್ಯ ವಿಮೆಯ ರಕ್ಷಣೆ ಇಲ್ಲದಿದ್ದರೆ, ವಯಸ್ಸಾದ ಬಳಿಕವಂತೂ ವೈದ್ಯಕೀಯ ವೆಚ್ಚಗಳು ನಿಜವಾಗಿಯೂ ಆತಂಕ ಮೂಡಿಸುತ್ತವೆ. ವೃದ್ಧಾಪ್ಯದಲ್ಲಿ ಚಿಕಿತ್ಸೆಗೆ ಹಣವಿಲ್ಲದೆ, ಸಂಬಂಧಿಕರ ಬಳಿ ನೆರವು ಯಾಚಿಸಿಕೊಂಡು ಹೋಗುವ ಅನೇಕರನ್ನು ನಾವು ಕಂಡಿದ್ದೇವೆ. ಆರೋಗ್ಯ ವಿಮೆಯೊಂದಿದ್ದರೆ ಇಂಥ ಸ್ಥಿತಿ ಬಾರದಂತೆ ನೋಡಿಕೊಳ್ಳಬಹುದು.

ಯುವಕರು ಆರೋಗ್ಯ ವಿಮೆ ಮಾಡಿಸುವುದಾದರೆ ಅವರಿಗೆ ವಿಮಾ ಸಂಸ್ಥೆಗಳು ಎಲ್ಲ ಸೌಲಭ್ಯಗಳನ್ನೂ ಒದಗಿಸುತ್ತವೆ. ಒಂದು ವಯಸ್ಸಿನ ಬಳಿಕ ವಿಮೆ ಮಾಡಿಸುವಾಗ, ವಿಮೆ ಮಾಡಿಸುವುದಕ್ಕೂ ಮೊದಲೇ ಇದ್ದ ಕಾಯಿಲೆಗಳಿಗೆ ವಿಮೆ ಅನ್ವಯಿಸದೇ ಇರಬಹುದು ಅಥವಾ ಯಾವುದಾದರೂ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಮುಂದಿನ ನಿಗದಿತ ಅವಧಿಯವರೆಗೂ ಅದಕ್ಕೆ ವಿಮೆ ಜಾರಿಯಾಗದೇ ಇರಬಹುದು.

ಇತ್ತೀಚಿನ ಕೆಲವು ಆರೋಗ್ಯ ವಿಮೆಗಳು ಗಂಭೀರ ಕಾಯಿಲೆಗಳಿಗೆ ಮಾತ್ರವಲ್ಲ, ಸಣ್ಣಪುಟ್ಟ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಒಂದು ದಿನದ ಚಿಕಿತ್ಸೆ ಪಡೆಯಲು (ಡೇ ಕೇರ್‌) ಸಹ ಪರಿಹಾರ ಒದಗಿಸುತ್ತವೆ. ಆಂಬುಲೆನ್ಸ್‌, ಫಿಸಿಯೊಥೆರಪಿ, ಹಲ್ಲಿನ ಸಮಸ್ಯೆ, ಕಣ್ಣಿನ ಕಾಯಿಲೆಗಳಿಗೂ ವಿಮೆ ಒದಗಿಸುವ ಸಂಸ್ಥೆಗಳಿವೆ. ಆದ್ದರಿಂದ ವಯಸ್ಸಾದವರುಇಂತಹ ಚಿಕಿತ್ಸೆಗಳಿಗೆ ಹೆಚ್ಚಿನ ಹಣ ವೆಚ್ಚ ಮಾಡುವ ಸಂದರ್ಭ ಬರುವುದಿಲ್ಲ.

ಜೀವನದ ಸಂಧ್ಯಾಕಾಲದಲ್ಲಿ ಒತ್ತಡರಹಿತವಾದ ಸುಂದರ ಜೀವನ ಸಾಗಿಸಬೇಕೆಂದರೆ ಆರೋಗ್ಯ ವಿಮೆ ಮಾಡಿಸುವುದು ಅತ್ಯಗತ್ಯ.

(ಲೇಖಕ: ಆದಿತ್ಯ ಬಿರ್ಲಾ ಹೆಲ್ತ್‌ ಇನ್ಶೂರೆನ್ಸ್‌ನ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT