ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ವಿಮೆ: ನಿಯಮ ಸಡಿಲು

Last Updated 28 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ
ADVERTISEMENT
""
""

ಆರೋಗ್ಯ ವಿಮೆ ಪಾಲಿಸಿ ಖರೀದಿಸಲು ವರ್ಷಕ್ಕೊಮ್ಮೆ ಒಂದೇ ಬಾರಿಗೆ ಕಂತು ಪಾವತಿಸುವ ನಿಯಮವನ್ನು ವಿಮೆ ಪ್ರಾಧಿಕಾರ ಸಡಿಲಿಸಿ ಕಂತುಗಳಲ್ಲಿ ಪಾವತಿಸಲು ಅವಕಾಶ ಕೊಟ್ಟಿರುವುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

‘ಕೋವಿಡ್‌–19’ ಬಿಕ್ಕಟ್ಟಿನ ಸಂದರ್ಭದಲ್ಲಿ ಆರೋಗ್ಯ ವಿಮೆ ಪಾಲಿಸಿ ಖರೀದಿಸುವುದು ಹೊರೆಯಾಗುವುದನ್ನು ತಪ್ಪಿಸಿ, ಕೈಗೆಟುಕುವಂತೆ ಮಾಡಲು ಪ್ರೀಮಿಯಂ ಪಾವತಿಸುವುದನ್ನು ಸುಲಭಗೊಳಿಸಲಾಗಿದೆ. ಇದುವರೆಗೆ ಪಾಲಿಸಿ ಖರೀದಿಸಲು ವರ್ಷಕ್ಕೊಮ್ಮೆ ಒಂದೇ ಬಾರಿಗೆ ಕಂತು ಪಾವತಿಸಬೇಕಾಗುತ್ತಿತ್ತು. ಈಗ ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ‘ಕೊರೊನಾ–2’ ವೈರಾಣು ಸೃಷ್ಟಿಸಿರುವ ಆರ್ಥಿಕ ಮತ್ತು ಆರೋಗ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಂತು ಪಾವತಿಸುವುದನ್ನು ಸುಲಭಗೊಳಿಸಲಾಗಿದೆ. ಜೀವನೋಪಾಯಕ್ಕೆ ತಿಂಗಳ ವೇತನವನ್ನೇ ನೆಚ್ಚಿಕೊಂಡಿರುವ ಉದ್ಯೋಗಿಗಳು ವೇತನ ಕಡಿತ ಮತ್ತು ಉದ್ಯೋಗಕ್ಕೆ ಎರವಾಗುವ ಭೀತಿ ಎದುರಿಸುತ್ತಿರುವ ಸಂದರ್ಭದಲ್ಲಿ ಈ ವಿನಾಯ್ತಿ ಕಲ್ಪಿಸಲಾಗಿದೆ.

ಅಮಿತ್‌ ಛಬ್ರಾ
‘ಪಾಲಿಸಿಬಜಾರ್‌ಡಾಟ್‌ಕಾಂ’ನ ಆರೋಗ್ಯ ವಿಮೆ ವಿಭಾಗದ ಮುಖ್ಯಸ್ಥ

ಲಾಕ್‌ಡೌನ್‌ ಸಂದರ್ಭದಲ್ಲಿನ ಈ ನಿಯಮ ಸಡಿಲಿಕೆಯು ವಿಮೆ ಖರೀದಿದಾರರು ಮತ್ತು ವಿಮೆ ಕಂಪನಿಗಳಿಗೆ ಪ್ರಯೋಜನಕಾರಿಯಾಗಿ ಪರಿಣಮಿಸಿದೆ. ಒಂದೇ ಬಾರಿಗೆ ಕಂತು ಪಾವತಿಸುವುದು ಸದ್ಯದ ಸಂದರ್ಭದಲ್ಲಿ ಹೊರೆಯಾಗಿ ಪರಿಣಮಿಸಿತ್ತು. ಈ ಕಾರಣಕ್ಕೆ ಪಾಲಿಸಿದಾರರ ಮೇಲಿನ ಹೊರೆಯನ್ನು ಇಳಿಸಿರುವುದು ಸಮಯೋಚಿತವಾಗಿದೆ.

ವೈಯಕ್ತಿಕ ವಿಮೆ ಪಾಲಿಸಿಗಳಿಗೆ ಸಂಬಂಧಿಸಿದ ಪ್ರೀಮಿಯಂಗಳನ್ನು ಕಂತುಗಳಲ್ಲಿ ಪಾವತಿಸಲು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಹಿಂದಿನ ವರ್ಷದ ಸೆಪ್ಟೆಂಬರ್‌ನಲ್ಲಿಯೇ ಅನುಮತಿ ನೀಡಿತ್ತು. ಈ ನಿಯಮ ಸಡಿಲಿಕೆಯು ಈ ವರ್ಷದ ಅಕ್ಟೋಬರ್‌ನಿಂದ ಜಾರಿಗೆ ಬರಬೇಕಾಗಿತ್ತು. ‘ಕೋವಿಡ್‌–19’ ಪಿಡುಗಿನಿಂದಾಗಿ ಆರೋಗ್ಯ ವಿಮೆ ಕಂತನ್ನು ಸುಲಭವಾಗಿ ಪಾವತಿಸುವುದಕ್ಕೆ ನೆರವಾಗಲು ತಕ್ಷಣದಿಂದಲೇ ಈ ವಿನಾಯ್ತಿ ಜಾರಿಗೆ ತರಲು ವಿಮೆ ಪ್ರಾಧಿಕಾರವು ಕಳೆದ ವಾರ ಅವಕಾಶ ಕಲ್ಪಿಸಿದೆ. ಕಂತುಗಳನ್ನು ಪ್ರತಿ ತಿಂಗಳು, 3 ತಿಂಗಳಿಗೊಮ್ಮೆ ಇಲ್ಲವೆ 6 ತಿಂಗಳಿಗೊಮ್ಮೆ ಪಾವತಿಸಬಹುದಾಗಿದೆ.

2021ರ ಮಾರ್ಚ್‌ 31ರವರೆಗೆ ನವೀಕರಿಸಬೇಕಾಗಿರುವ ಪಾಲಿಸಿಗಳಿಗೆ ಸಂಬಂಧಿಸಿದಂತೆ ಈ ಸೌಲಭ್ಯವನ್ನು ಒಂದು ವರ್ಷದವರೆಗೆ ಮಾತ್ರ ಒದಗಿಸುವ ಇಲ್ಲವೆ ಶಾಶ್ವತವಾಗಿ ಮುಂದುವರೆಸುವುದನ್ನು ವಿಮೆ ಕಂಪನಿಗಳ ನಿರ್ಧಾರಕ್ಕೆ ಬಿಡಲಾಗಿದೆ. ಆರೋಗ್ಯ ವಿಮೆ ಉತ್ಪನ್ನಗಳನ್ನಷ್ಟೇ ಮಾರಾಟ ಮಾಡುವ ಕಂಪನಿಗಳು ಮತ್ತು ಆರೋಗ್ಯ ವಿಮೆ ಪಾಲಿಸಿ ಒದಗಿಸುವ ಸಾಮಾನ್ಯ ವಿಮೆ ಕಂಪನಿಗಳಿಗೆ ಈ ನಿಯಮ ಸಡಿಲಿಕೆಯು ಅನ್ವಯವಾಗಲಿದೆ. ಪ್ರತಿಯೊಂದು ವಿಮೆ ಕಂಪನಿಯು ಕಂತುಗಳಲ್ಲಿ ಪ್ರೀಮಿಯಂ ಪಾವತಿಸಲು ಅವಕಾಶ ಇರುವ ಪಾಲಿಸಿಗಳ ವಿವರಗಳನ್ನು ಗ್ರಾಹಕರ ಗಮನಕ್ಕೆ ತರಲು ತಮ್ಮ ಅಂತರ್ಜಾಲ ತಾಣದಲ್ಲಿ ಪ್ರಕಟಿಸುವುದನ್ನು ವಿಮೆ ಪ್ರಾಧಿಕಾರವು ಕಡ್ಡಾಯ ಮಾಡಿದೆ.

‘ವಿಮೆ ಕಂಪನಿಗಳು ಒದಗಿಸುವ ಪಾಲಿಸಿಗಳು ಮತ್ತು ಕೈಗೊಳ್ಳುವ ನಿರ್ಧಾರಗಳು ಪಾಲಿಸಿದಾರರ ಹಿತಾಸಕ್ತಿ ರಕ್ಷಿಸುವ ಬಗೆಯಲ್ಲಿ ಇರುವುದನ್ನು ಖಾತರಿಪಡಿಸಿಕೊಳ್ಳಲು ವಿಮೆ ಪ್ರಾಧಿಕಾರವು ಮುತುವರ್ಜಿಯಿಂದ ಕೆಲಸ ನಿರ್ವಹಿಸುತ್ತಿದೆ. ‘ಕೋವಿಡ್‌–19’ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಮೆ ಉತ್ಪನ್ನಗಳು ಗ್ರಾಹಕರ ಅಗತ್ಯಗಳನ್ನು ಈಡೇರಿಸುವ ರೀತಿಯಲ್ಲಿ ಇರುವುದಕ್ಕೆ ಪ್ರಾಧಿಕಾರವು ಹೊಸ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ. ವರ್ಷಕ್ಕೊಮ್ಮೆ ಪಾವತಿಸಬೇಕಾಗಿದ್ದ ಆರೋಗ್ಯ ವಿಮೆ ಪ್ರೀಮಿಯಂ ಅನ್ನು ಕಂತುಗಳಲ್ಲಿ ಪಾವತಿಸುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ’ ಎಂದು ‘ಪಾಲಿಸಿಬಜಾರ್‌ಡಾಟ್‌ಕಾಂ’ನ ಆರೋಗ್ಯ ವಿಮೆ ವಿಭಾಗದ ಮುಖ್ಯಸ್ಥ ಅಮಿತ್‌ ಛಬ್ರಾ ಹೇಳುತ್ತಾರೆ.

‘ಗ್ರಾಹಕರಿಂದ ವಿಮೆ ಪ್ರೀಮಿಯಂಗಳನ್ನು ಕಂತುಗಳಲ್ಲಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿರುವುದರಿಂದ ಆರೋಗ್ಯ ವಿಮೆ ಸೌಲಭ್ಯವನ್ನು ಹೆಚ್ಚು ಗ್ರಾಹಕರಿಗೆ ವಿಸ್ತರಿಸಲೂ ಸಾಧ್ಯವಾಗಲಿದೆ. ವಿಮೆ ಕಂಪನಿಗಳು ಈ ಸೌಲಭ್ಯ ಜಾರಿಗೆ ತರಲು ತಂತ್ರಜ್ಞಾನ ಅಳವಡಿಕೆಯಲ್ಲಿ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ’ ಎಂದೂ ಅವರು ಹೇಳುತ್ತಾರೆ.

ಪ್ರಾಧಿಕಾರದ ನಿರ್ಧಾರದಿಂದ ಆರೋಗ್ಯ ವಿಮೆಗಾಗಿ ಮಾಡುವ ಖರ್ಚಿನ ಹೊರೆ ಕಡಿಮೆಯಾಗಲಿದೆ. ಆರೋಗ್ಯ ವಿಮೆ ಖರೀದಿಸುವುದು ಗ್ರಾಹಕರಿಗೆ ಅಗ್ಗವಾಗಿ ಪರಿಣಮಿಸಲಿದೆ. ಇದರಿಂದಾಗಿ ಹೆಚ್ಚೆಚ್ಚು ಜನರು ಖರೀದಿಸಲು ಮುಂದಾಗಬಹುದು. ಗ್ರಾಮೀಣ ಪ್ರದೇಶದ ಜನರ ಕೈಗೂ ಆರೋಗ್ಯ ವಿಮೆಗಳು ಎಟುಕಲಿವೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ವಿಮೆ ಸೌಲಭ್ಯವು ನಿರೀಕ್ಷಿತ ಮಟ್ಟದಲ್ಲಿ ವಿಸ್ತರಣೆಯಾಗಿಲ್ಲ. ಕಂತುಗಳಲ್ಲಿ ಆರೋಗ್ಯ ವಿಮೆ ಖರೀದಿಸಲು ಅವಕಾಶ ಕಲ್ಪಿಸಿರುವುದರಿಂದ ವಿಮೆ ವಹಿವಾಟು ವಿಸ್ತರಿಸಲು ವಿಪುಲ ಅವಕಾಶಗಳಿವೆ.

ಇಂಟರ್‌ನೆಟ್‌ನಿಂದಾಗಿ ವಿಮೆ ಖರೀದಿಸಲು ಆನ್‌ಲೈನ್‌ ಪಾವತಿಯೂ ಸುಲಭವಾಗಿರಲಿದೆ. ಪಾಲಿಸಿದಾರರು ವಿಭಿನ್ನ ಬಗೆಯ ಪಾಲಿಸಿಗಳನ್ನು ಖರೀದಿಸಲು ಒಲವು ತೋರಬಹುದು. ಕಡಿಮೆ ಕಂತಿನ ಕಾರಣಕ್ಕೆ ಪಾಲಿಸಿದಾರರು ಹೆಚ್ಚಿನ ವಿಮೆ ಪರಿಹಾರ ಇರುವ ಉತ್ಪನ್ನಗಳ ಖರೀದಿಗೂ ಮುಂದಾಗಬಹುದು. ಇದರಿಂದ ಆರೋಗ್ಯ ವಿಮೆ ಉದ್ದಿಮೆಯ ವಹಿವಾಟು ಗಣನೀಯವಾಗಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಅದರಿಂದ ಕಂಪನಿಗಳು ಇನ್ನಷ್ಟು ಸ್ಪರ್ಧಾತ್ಮಕ ವಿಮೆ ಉತ್ಪನ್ನಗಳನ್ನು ಪರಿಚಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT