ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಸಾಲ : ಆರ್‌ಬಿಐನಿಂದಸ್ಪಷ್ಟನೆ ಕೇಳಲಿರುವ ಎಸ್‌ಬಿಐ

ಸ್ಥಿರ, ಬದಲಾಗುವ ಬಡ್ಡಿ ದರ ಗೊಂದಲ ನಿವಾರಣೆ
Last Updated 15 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಲೇಹ (ಪಿಟಿಐ): ಗೃಹ ಸಾಲಗಳ ಸ್ಥಿರ ಮತ್ತು ಬದಲಾಗುವ ಬಡ್ಡಿ ದರಗಳಿಗೆ ಸಂಬಂಧಿಸಿದಂತೆ ಉದ್ಭವಿಸಿರುವ ಅನುಮಾನಗಳ ಕುರಿತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಸ್ಪಷ್ಟನೆ ಬಯಸಿದೆ.

ಎಲ್ಲ ಬಗೆಯ ರಿಟೇಲ್‌ ಸಾಲಗಳಿಗೆ ಅಕ್ಟೋಬರ್‌ ತಿಂಗಳಿನಿಂದ ರೆಪೊ, ಟ್ರೆಷರಿ ಬಿಲ್‌ ದರ ಆಧರಿಸಿ ಬದಲಾಗುವ ಬಡ್ಡಿ ದರ ಅನ್ವಯಿಸಬೇಕು ಎಂದು ಆರ್‌ಬಿಐ ಕಡ್ಡಾಯ ಮಾಡಿರುವುದರಿಂದ ಗೊಂದಲ ಉಂಟಾಗಿದೆ.

ದೀರ್ಘಾವಧಿಯ ಗೃಹ ಸಾಲಗಳಿಗೆ ಆರಂಭದಲ್ಲಿ ಸ್ಥಿರ ಬಡ್ಡಿ ದರ ನಿಗದಿಪಡಿಸಿ, ನಂತರ ಬದಲಾಗುವ ಬಡ್ಡಿ ದರ ವಿಧಿಸಬಹುದೇ ಎನ್ನುವುದರ ಕುರಿತು ಕೇಂದ್ರೀಯ ಬ್ಯಾಂಕ್‌ ಗೊಂದಲ ನಿವಾರಿಸಬೇಕಾಗಿದೆ ಎನ್ನುವುದು ಎಸ್‌ಬಿಐ ನಿಲುವಾಗಿದೆ.

‘ಬದಲಾಗುವ ಬಡ್ಡಿ ದರ ಅಳವಡಿಸಿಕೊಳ್ಳುವುದನ್ನು ಆರ್‌ಬಿಐ ಕಡ್ಡಾಯ ಮಾಡಿದೆ. ಹೀಗಾಗಿ ಸ್ಥಿರ ಬಡ್ಡಿ ದರಗಳಿಗೆ ಸಂಬಂಧಿಸಿದಂತೆ ಹೇಗೆ ಮುಂದುವರೆಯಬೇಕು ಎನ್ನುವುದು ಸ್ಪಷ್ಟಗೊಂಡಿಲ್ಲ. ಈ ಕಾರಣಕ್ಕೆ ಆರ್‌ಬಿಐನಿಂದ ವಿವರಣೆ ಕೇಳಲಾಗಿದೆ’ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಹೇಳಿದ್ದಾರೆ.

‘ಗೃಹ ಸಾಲ ಪಡೆಯಲು ಬಯಸುವ ಕೆಲವರು ತಮಗೆ ಸ್ಥಿರ ಬಡ್ಡಿ ದರ ಅನ್ವಯಿಸಬೇಕು ಎನ್ನುವ ಬೇಡಿಕೆ ಮುಂದಿಟ್ಟರೆ ಏನು ಮಾಡಬೇಕು. ಇಂತಹ ಗ್ರಾಹಕರಿಗೆ ‘ಸ್ಥಿರ ಮತ್ತು ಬದಲಾಗುವ’ ಬಡ್ಡಿ ದರದ ಸೌಲಭ್ಯ ಒದಗಿಸಬೇಕಾಗುತ್ತದೆ. ದೀರ್ಘಾವಧಿಯ ಗೃಹ ಸಾಲಗಳ ಆರಂಭಿಕ 5 ರಿಂದ 10 ವರ್ಷಗಳ ಕಾಲ ಸ್ಥಿರ ಬಡ್ಡಿ ಮತ್ತು ನಂತರದ ವರ್ಷಗಳಿಗೆ ಬದಲಾಗುವ ಬಡ್ಡಿ ದರ ಒದಗಿಸಬೇಕಾಗುತ್ತದೆ.

ಎಸ್‌ಬಿಐ, ತನ್ನ ಗೃಹ ಸಾಲಗಳಿಗೆ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಬದಲಾಗುವ ಬಡ್ಡಿ ದರ ವಿಧಿಸುತ್ತಿತ್ತು. ಈಗ ರೆಪೊ ದರ ಆಧರಿಸಿ ಬಡ್ಡಿ ದರ ನಿಗದಿ ಮಾಡಿದೆ.

30 ವರ್ಷಗಳಷ್ಟು ದೀರ್ಘಾವಧಿಯ ಸಾಲಗಳಿಗೆ ಸ್ಥಿರ ಬಡ್ಡಿ ದರ ಅನ್ವಯಿಸುವುದು ಕಷ್ಟಕರ. ಖಾಸಗಿ ವಲಯದ ಕೆಲ ಬ್ಯಾಂಕ್‌ಗಳು ಸಾಲಗಾರರ ವಯಸ್ಸು ಆಧರಿಸಿ 35 ವರ್ಷಗಳವರೆಗೆ ಸಾಲ ನೀಡುತ್ತಿವೆ. ಸದ್ಯಕ್ಕೆ ಕೇಂದ್ರೀಯ ಬ್ಯಾಂಕ್‌, ಬ್ಯಾಂಕ್‌ಗಳಿಗೆ ಶೇ 5.40ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT