ನವದೆಹಲಿ: 2023–24ನೇ ಮಾರುಕಟ್ಟೆ ವರ್ಷದಲ್ಲಿ (ಜುಲೈ–ಜೂನ್) ದೇಶದ ತೋಟಗಾರಿಕೆ ಉತ್ಪಾದನೆಯಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ.
353.19 ದಶಲಕ್ಷ ಟನ್‌ನಷ್ಟು ಉತ್ಪಾದನೆಯಾಗುವ ನಿರೀಕ್ಷೆಯಿದೆ. ಕಳೆದ ಮಾರುಕಟ್ಟೆ ವರ್ಷದಲ್ಲಿನ ಉತ್ಪಾದನೆಗೆ ಹೋಲಿಸಿದರೆ ಶೇ 0.65ರಷ್ಟು ಕಡಿಮೆಯಾಗಲಿದೆ ಎಂದು ಕೇಂದ್ರ ತೋಟಗಾರಿಕೆ ಸಚಿವಾಲಯ ಶನಿವಾರ ತಿಳಿಸಿದೆ.
112.73 ದಶಲಕ್ಷ ಟನ್‌ನಷ್ಟು ಹಣ್ಣುಗಳ ಉತ್ಪಾದನೆಯಾಗಲಿದೆ. ಕಳೆದ ಮಾರುಕಟ್ಟೆ ವರ್ಷಕ್ಕೆ ಹೋಲಿಸಿದರೆ ಶೇ 2.29ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಹಣ್ಣುಗಳ ಪೈಕಿ ಮಾವು, ಬಾಳೆಹಣ್ಣು, ಲಿಂಬೆಹಣ್ಣು, ದ್ರಾಕ್ಷಿ ಮತ್ತು ಸೀತಾಫಲ ಹಣ್ಣಿನ ಉತ್ಪಾದನೆಯಲ್ಲಿ ಏರಿಕೆಯಾಗಲಿದೆ ಎಂದು ವಿವರಿಸಿದೆ.
ಆದರೆ ಸೇಬು, ಕಿತ್ತಲೆ, ಪೇರಳೆ, ಲಿಚಿ, ದಾಳಿಂಬೆ ಮತ್ತು ಫೈನಾಪಲ್ ಉತ್ಪಾದನೆಯಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಅಂದಾಜಿಸಿದೆ.
ತರಕಾರಿ ಉತ್ಪಾದನೆ ಏರಿಕೆ:
205.80 ದಶಲಕ್ಷ ಟನ್ ತರಕಾರಿ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಟೊಮೆಟೊ, ಎಲೆಕೋಸು, ಹೂಕೋಸು ಸೇರಿ ಹಲವು ತರಕಾರಿಗಳ ಉತ್ಪಾದನೆಯಲ್ಲಿ ಏರಿಕೆಯಾಗಲಿದೆ. ಆದರೆ, ಆಲೂಗೆಡ್ಡೆ ಮತ್ತು ಈರುಳ್ಳಿ ಉತ್ಪಾದನೆಯಲ್ಲಿ ಕುಸಿತವಾಗಲಿದೆ ಎಂದು ಅಂದಾಜಿಸಿದೆ.
ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಉತ್ಪಾದನಾ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿ, ಕಳೆದ ಮಾರುಕಟ್ಟೆ ವರ್ಷಕ್ಕೆ ಹೋಲಿಸಿದರೆ 24.24 ದಶಲಕ್ಷ ಟನ್‌ನಷ್ಟು ಈರುಳ್ಳಿ ಮತ್ತು 57.05 ದಶಲಕ್ಷ ಟನ್‌ನಷ್ಟು ಆಲೂಗೆಡ್ಡೆ ಉತ್ಪಾದನೆಯಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.
ಜೇನುತುಪ್ಪ, ಹೂವು, ಪ್ಲಾಂಟೇಷನ್ ಬೆಳೆ, ಸಂಬಾರ ಬೆಳೆ, ಸುಗಂಧ ಮತ್ತು ಔಷಧೀಯ ಸಸ್ಯಗಳ ಉತ್ಪಾದನೆಯಲ್ಲಿ ಏರಿಕೆಯಾಗಲಿದೆ ಎಂದು ತಿಳಿಸಿದೆ.
ಅಂಕಿ–ಅಂಶ 242.44 ದಶಲಕ್ಷ ಟನ್– ಈರುಳ್ಳಿ ಉತ್ಪಾದನೆ ನಿರೀಕ್ಷೆ 570.49 ದಶಲಕ್ಷ ಟನ್– ಆಲೂಗೆಡ್ಡೆ ಉತ್ಪಾದನೆ ಅಂದಾಜು 213.20 ದಶಲಕ್ಷ ಟನ್– ಟೊಮೆಟೊ ಉತ್ಪಾದನೆ ನಿರೀಕ್ಷೆ