ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸದ ಮನೆ ತೆರಿಗೆ ರಿಯಾಯ್ತಿ

Last Updated 8 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ದುಡಿಯುವ ಮಧ್ಯಮ ವಯಸ್ಸಿನ ಯಾರನ್ನೇ ಆಗಲಿ, ಅವರ ಆದಾಯದ ಬಹುದೊಡ್ಡ ಮೊತ್ತ ಯಾವುದಕ್ಕೆ ಖರ್ಚಾಗುತ್ತದೆ ಎಂದು ಕೇಳಿದರೆ ಬಹುತೇಕ ಮಂದಿಯ ಉತ್ತರ, ಒಂದೋ ಮನೆ ಬಾಡಿಗೆ ಪಾವತಿಗೆ ಅಥವಾ ಮನೆ ಸಾಲದ ತಿಂಗಳ ಕಂತಿನ ಪಾವತಿಗೆ ಎಂದು ಉತ್ತರಿಸುತ್ತಾರೆ. ಇವೆರಡರಲ್ಲಿ ಯಾವುದೇ ಇದ್ದರೂ ಆದಾಯದ ಸರಿ ಸುಮಾರು ಶೇ 20 ರಿಂದ ಶೇ 40 ರಷ್ಟು ಆದಾಯ ವಸತಿಗೆ ಸಂಬಂಧಿಸಿದ ಪಾವತಿ ಆಗಿರುತ್ತದೆ ಎನ್ನುವುದು ಸ್ಪಷ್ಟ.

ದೇಶದ ಯಾವುದೋ ಮೂಲೆಯಿಂದ ಉದ್ಯೋಗ ಅರಸುತ್ತಾ ನಗರಗಳಿಗೆ ಬಂದು ಬದುಕಿನಲ್ಲಿ ಎಲ್ಲಾದರೂ ಒಂದೆಡೆ ನೆಲೆಕಂಡು ನೆಮ್ಮದಿಯ ಬದುಕು ಸಾಗಿಸಬೇಕೆಂಬ ಹಂಬಲವು ಪ್ರತಿಯೊಬ್ಬರಿಗೂ ಇರುತ್ತದೆ. ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬ ದಾಸೋಕ್ತಿಯಂತೆ ಮನುಷ್ಯನ ಅತಿ ಅಗತ್ಯಗಳಲ್ಲಿ ಮೊದಲನೆಯದು ಆಹಾರ, ಎರಡನೆಯದು ವಸ್ತ್ರ, ಮೂರನೆಯದು ವಸತಿ. ಗಳಿಸಿದ ಆದಾಯದ ಬಹು ದೊಡ್ಡ ಮೊತ್ತ ಮನೆ ಬಾಡಿಗೆ ಅಥವಾ ಮನೆ ಖರೀದಿಯ ಮಾಸಿಕ ಕಂತಿನ ಪಾವತಿಗೆ ಖರ್ಚಾದರೆ ನಾಳಿನ ದಿನಗಳಿಗಾಗಿ ತಮ್ಮಲ್ಲಿ ಉಳಿಯುವ ಹಣ ಎಷ್ಟು ಎನ್ನುವ ಪ್ರಶ್ನೆ ಬಹುತೇಕ ಮಧ್ಯಮ ವರ್ಗದ ಜನರನ್ನು ಕಾಡುತ್ತದೆ. ಇಂತಹ ಸಂದರ್ಭದಲ್ಲಿ ಗೃಹ ಸಾಲ ಅಥವಾ ಮನೆ ಬಾಡಿಗೆಗೆ ಸಂಬಂಧಿತ ಆದಾಯ ತೆರಿಗೆ ಉಳಿತಾಯ ಮಾಡುವ ಒಂದಿಷ್ಟು ಸಂಗತಿಗಳನ್ನು ಇಲ್ಲಿ ಪಟ್ಟಿ ಮಾಡಿ ಕೊಡಲಾಗಿದೆ.

ಮೊದಲ ಬಾರಿಗೆ ಮನೆ ಖರೀದಿಸುವಾಗ

ಇದುವರೆಗೆ ನಿಮ್ಮ ಹೆಸರಲ್ಲಿ ಯಾವುದೇ ಮನೆ ಇರದಿದ್ದರೆ, ಹೊಸ ಮನೆ ಖರೀದಿಸುವ ಯಾವುದಾದರೂ ಯೋಜನೆ ಹಾಕಿಕೊಂಡಿದ್ದರೆ, 2019 ರ ಬಜೆಟ್‍ನಲ್ಲಿ ಹೊಸದಾಗಿ ಸೇರ್ಪಡೆಗೊಳಿಸಿದ ’ಸೆಕ್ಷನ್ 80 ಇಇಎ’ಯ ಪ್ರಯೋಜನ ಪಡೆಯಬಹುದು.

ಇದರಡಿ ಗೃಹ ಸಾಲದ ಮೇಲೆ ₹ 1.5 ಲಕ್ಷದಷ್ಟು ಹೆಚ್ಚುವರಿ ಮೊತ್ತದ ಬಡ್ಡಿಯನ್ನು ತೆರಿಗೆ ವಿನಾಯ್ತಿ ರೂಪದಲ್ಲಿ ಪಡೆಯುವ ಅವಕಾಶ ಮಾಡಿಕೊಡಲಾಗಿದೆ. ಈ ನಿಯಮ 2019-20ರ ಹಣಕಾಸು ವರ್ಷದಿಂದ ಅನ್ವಯವಾಗಲಿದೆ. ಸೆಕ್ಷನ್ 24 ರ ಅಡಿಯಲ್ಲಿ ಮನೆ ಸಾಲದ ಮೇಲಿನ ಬಡ್ಡಿ ಪಾವತಿಗಾಗಿ ಸಿಗುವ ₹ 2 ಲಕ್ಷಗಳ ವಿನಾಯ್ತಿ ಮತ್ತು ಸೆಕ್ಷನ್ 80ಸಿಯ ಅಡಿಯಲ್ಲಿ ಅಸಲು ಮೊತ್ತದ ಪಾವತಿಗಾಗಿ ಸಿಗುವ ₹ 1.50 ಲಕ್ಷದ ವಿನಾಯ್ತಿಗಳು ಪ್ರತ್ಯೇಕವಾಗಿ ಮುಂದುವರಿಯಲಿವೆ.

ಈ ನಿಯಮವು ಎಲ್ಲರಿಗೂ ವಸತಿ ಕಲ್ಪಿಸುವ ಧ್ಯೇಯೋದ್ದೇಶದಿಂದ ಸೂರು ಕಲ್ಪಿಸುವ ಸರ್ಕಾರದ ಉದ್ದೇಶದ ಒಂದು ಭಾಗವಾಗಿದೆ. ಹೊಸದಾಗಿ ಸೇರಿಸಲಾದ ಸೆಕ್ಷನ್ 80 ಇಇಎ ಅಡಿಯಲ್ಲಿ ತೆರಿಗೆ ಲಾಭ ಪಡೆಯಲು ಕೆಲವು ಷರತ್ತುಗಳಿವೆ ಮತ್ತು ಈ ಎಲ್ಲಾ ಷರತ್ತುಗಳನ್ನು ಪೂರೈಸುವ ತೆರಿಗೆದಾರರಿಗೆ ಮಾತ್ರ ಇದರ ಪ್ರಯೋಜನ ಪಡೆಯಲು ಅವಕಾಶವಿರುತ್ತದೆ.

ಷರತ್ತುಗಳು ಹೀಗಿವೆ.

1. 2019ರ ಏಪ್ರಿಲ್ 1 ರಿಂದ 2020 ರ ಮಾರ್ಚ್ 31ರ ಒಳಗೆ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಸಾಲವನ್ನು ಪಡೆದಿರಬೇಕು.

2. ಮನೆಯ ಆಸ್ತಿಯ ಸ್ಟ್ಯಾಂಪ್ ಡ್ಯೂಟಿ ಮೌಲ್ಯವು ₹ 45 ಲಕ್ಷಗಳಿಗಿಂತ ಕಡಿಮೆ ಇರಬೇಕು.

3. ಸಾಲವನ್ನು ಮಂಜೂರು ಮಾಡಿದ ಅವಧಿಯಲ್ಲಿ ಮನೆಸಾಲ ಪಡೆಯುವ ವ್ಯಕ್ತಿ ತನ್ನ ಹೆಸರಲ್ಲಿ ಯಾವುದೇ ಮನೆಯನ್ನು ಹೊಂದಿರಬಾರದು ಹಾಗೂ ಮನೆ ಸಾಲ ಹಾಗೂ ಬಡ್ಡಿಯ ತೆರಿಗೆ ಲಾಭ ಪಡೆದಿರಬಾರದು.

ಕೈಗೆಟುಕುವ ವಸತಿ ಯೋಜನೆ ಪ್ರಕಾರ (ಅಫೋರ್ಡೆಬಲ್ ಹೌಸಿಂಗ್ ಸ್ಕೀಂ) ಪ್ರಕಾರ, ನಿಮ್ಮ ಮನೆಯ ಕಾರ್ಪೆಟ್ ಪ್ರದೇಶವು ಮಹಾನಗರಗಳಲ್ಲಿ 60 ಚದರ ಮೀಟರ್ (645 ಚದರ ಅಡಿ) ಅಥವಾ ಮಹಾನಗರಗಳನ್ನು ಹೊರತುಪಡಿಸಿದ ನಗರಗಳು ಅಥವಾ ಪಟ್ಟಣಗಳಲ್ಲಿ 90 ಚದರ ಮೀಟರ್ (968 ಚದರ ಅಡಿ) ಮೀರಿರದಿದ್ದರೆ ಮಾತ್ರ ನೀವು ಈ ನಿಯಮದಡಿ ಹೆಚ್ಚುವರಿ ಬಡ್ಡಿಯ ಮೇಲಿನ ತೆರಿಗೆ ಲಾಭ ಪಡೆಯಲು ಅರ್ಹರಾಗುವಿರಿ.

ಈ ತೆರಿಗೆ ವಿನಾಯ್ತಿಯನ್ನು ಪಡೆಯಲು ಖರೀದಿಯ ನಂತರ ಸ್ವಂತ ಮನೆಯಲ್ಲೇ ನೆಲೆಸಿರಬೇಕೆಂಬ ಯಾವ ಷರತ್ತನ್ನು ವಿಧಿಸದ ಕಾರಣ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ ಈ ವಿನಾಯ್ತಿಯ ಲಾಭ ಪಡೆಯಬಹುದು. ಈ ಹೊಸ ನಿಯಮ ಜಾರಿಗೆ ಬರುವ ಮುನ್ನ ಗೃಹ ಸಾಲಗಳ ಮೇಲೆ ಹಲವಾರು ವರ್ಷಗಳಿಂದ ತೆರಿಗೆ ವಿನಾಯ್ತಿ ಇರುವುದರಿಂದ ಈ ಕೆಳಗಿನ ಕೆಲವು ಪ್ರಮುಖ ಸಂಗತಿಗಳನ್ನೂ ಗಮನಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.

1. ಗೃಹ ಸಾಲದ ತೆರಿಗೆ ವಿನಾಯ್ತಿಯು ಪ್ರತಿ ವ್ಯಕ್ತಿಗೆ ಸಂಬಂಧಿಸಿರುವುದರಿಂದ, ಪತಿ-ಪತ್ನಿ ಜಂಟಿಯಾಗಿ ಮನೆ ಸಾಲ ಹೊಂದಿದ್ದರೆ ಮತ್ತು ಅವರಿಬ್ಬರೂ ಸಾಲದ ಕಂತುಗಳನ್ನು ಪ್ರತ್ಯೇಕವಾಗಿ ಪಾವತಿಸುತ್ತಿದ್ದರೆ, ಇಬ್ಬರೂ ಬಡ್ಡಿ ಹಾಗೂ ಅಸಲು ಮೊತ್ತದ ವಿನಾಯ್ತಿ ಪಡೆಯಲು ಅರ್ಹರಾಗಿರುತ್ತಾರೆ.

2. ತೆರಿಗೆ ವಿನಾಯ್ತಿಗಳನ್ನು ಪಡೆಯಲು, ಸಾಲಗಾರನು ಪಾವತಿಸಬೇಕಾದ ಅಸಲು ಮತ್ತು ಬಡ್ಡಿ ಮೊತ್ತವನ್ನು ಸ್ಪಷ್ಟವಾಗಿ ಸೂಚಿಸುವ ಬ್ಯಾಂಕ್ ಖಾತೆಯ ವಿವರ ಇರಬೇಕು.

3. ನೀವು ಸೆಕ್ಷನ್‘ 80 ಸಿ’ಯಡಿ ವಾರ್ಷಿಕವಾಗಿ ₹ 1.5 ಲಕ್ಷದಷ್ಟು ಮೊತ್ತವನ್ನು ತೆರಿಗೆ ರಿಯಾಯ್ತಿ ಪಡೆಯುವ ಅವಕಾಶವಿದೆ. ಒಂದು ವೇಳೆ ಐದು ವರ್ಷದ ಒಳಗೆ ಮನೆಯನ್ನು ಮಾರಾಟ ಮಾಡುವ ನಿರ್ಧಾರ ಕೈಗೊಂಡರೆ ಅಂತಹ ಸಂದರ್ಭದಲ್ಲಿ ನೀವು ಹಿಂದಿನ ಐದು ವರ್ಷಗಳಲ್ಲಿ ಪಡೆದ ರಿಯಾಯ್ತಿ ಮೊತ್ತವನ್ನು ಮಾರಾಟ ಮಾಡಿದ ವರ್ಷದ ಆದಾಯಕ್ಕೆ ಸೇರಿಸಿ ತೆರಿಗೆ ಕಟ್ಟಬೇಕಾಗುತ್ತದೆ ಎಂಬುದು ನೆನಪಿರಲಿ.

4. ಸಾಮಾನ್ಯವಾಗಿ ಮನೆಯನ್ನು ಸ್ವತಃ ಕಟ್ಟಿಸುವುದಾದರೆ, ನಿಮಗೆ ಸಾಲ ಮಂಜೂರು ಮಾಡಿದ ಆರ್ಥಿಕ ವರ್ಷದಿಂದ ನಿರ್ಮಾಣ ಪೂರೈಸಲು ಐದು ವರ್ಷಗಳ ಅವಕಾಶ ನೀಡಲಾಗುತ್ತದೆ. ಇದರೊಳಗೆ ಯಾವುದೇ ಕಾರಣಕ್ಕೆ ನಿರ್ಮಾಣ ಪೂರೈಸಲಾಗದಿದ್ದರೆ, ಬಡ್ಡಿ ಮೊತ್ತಕ್ಕೆ ಸಾಮಾನ್ಯವಾಗಿ ಸಿಗುವ ₹ 2 ಲಕ್ಷದ ತೆರಿಗೆ ವಿನಾಯ್ತಿ ಮೊತ್ತವನ್ನು ₹ 30,000 ಕ್ಕೆ ಇಳಿಸಲಾಗುತ್ತದೆ.

5. ನೀವು ಮನೆಯ ನಿರ್ಮಾಣದ ಹಂತದಲ್ಲಿ ಪಾವತಿಸುವ ಬಡ್ಡಿ ಮೊತ್ತಕ್ಕೆ ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿಲ್ಲ. ಹೀಗಾಗಿ ನಿರ್ಮಾಣ ಸಂದರ್ಭದಲ್ಲಿ ಪಾವತಿಸಿದ ಒಟ್ಟು ಮೊತ್ತವನ್ನು ನಿರ್ಮಣ ಪೂರೈಸಿದ ಆರ್ಥಿಕ ವರ್ಷದಿಂದ ಮುಂದಿನ ಐದು ವರ್ಷ ಸಮನಾಗಿ ಪಡೆಯುವ ಅವಕಾಶವಿದೆ.

6. ನಿಮ್ಮಲ್ಲಿ ಅನೇಕ ಮನೆಗಳಿದ್ದು ಅವನ್ನು ಬಾಡಿಗೆಗೆ ಕೊಟ್ಟಿದ್ದರೆ, ಮೇಲೆ ಉಲ್ಲೇಖಿಸಿದ ನಿಯಮ 24ರ ₹ 2 ಲಕ್ಷದ ಮಿತಿ ಅನ್ವಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವು ಬಾಡಿಗೆಗೆ ಕೊಟ್ಟ ಮನೆಗಳ ಮೇಲಿನ ಸಾಲದ ಬಡ್ಡಿಯನ್ನು ಸಂಪೂರ್ಣವಾಗಿ ಪಡೆಯುವ ಅವಕಾಶವಿದೆ.

ಸ್ವಂತ ಉದ್ಯೋಗಿಗಳಿಗೆ ಏನಿದೆ ಲಾಭ?

ಒಂದು ವೇಳೆ ನೀವು ಸ್ವಂತ ಉದ್ಯೋಗ ಅಥವಾ ವೃತ್ತಿ ಮಾಡುತ್ತಿರುವವರಾಗಿದ್ದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಮಾಸಿಕ ವೇತನ ಪಡೆಯುವ ಉದ್ಯೋಗಿಗಳಿಗೆ ಇರುವ ಮನೆ ಬಾಡಿಗೆ ಭತ್ಯೆ ನಿಮಗೆ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಸ್ವಂತ ವೃತ್ತಿ ನಿರ್ವಹಿಸುತ್ತಿರುವವರಿಗೂ ವಸತಿ ಸಂಬಂಧಿತ ಬಾಡಿಗೆ ಪಾವತಿಯ ತೆರಿಗೆ ರಿಯಾಯಿತಿ ಇದೆ.

ಸೆಕ್ಷನ್ ‘80 ಜಿಜಿ’ಯಡಿ ಪ್ರತಿ ತಿಂಗಳಿಗೆ ₹ 5,000 ದಷ್ಟು ಅಥವಾ ಒಟ್ಟು ಆದಾಯದ ಶೇಕಡಾ 25 ರಷ್ಟು, ಇದರಲ್ಲಿ ಯಾವುದು ಕಡಿಮೆಯೊ ಆ ಮೊತ್ತವನ್ನು ತೆರಿಗೆ ವಿನಾಯ್ತಿಯಾಗಿ ಪಡೆಯಬಹುದು. ಒಂದು ವೇಳೆ ನಿಮ್ಮ ವೇತನದಲ್ಲಿ ಬಾಡಿಗೆ ಮನೆ ಭತ್ಯೆ ಇಲ್ಲದಿದ್ದರೆ, ಅಂಥವರೂ ಈ ನಿಯಮದಡಿ ತೆರಿಗೆ ವಿನಾಯ್ತಿ ಪಡೆಯಬಹುದು. ಇದಕ್ಕಾಗಿ ತೆರಿಗೆದಾರರು ಫಾರಂ 10 ಬಿಎಯನ್ನು ಮನೆಯ ಮಾಲೀಕನ ಪೂರ್ಣ ವಿವರದೊಡನೆ ಆದಾಯ ತೆರಿಗೆ ಇಲಾಖೆಗೆ ರಿಟರ್ನ್ಸ್ ಸಲ್ಲಿಸುವಾಗ ಆನ್‍ಲೈನ್ ಮೂಲಕ ಸಲ್ಲಿಸಬೇಕು.

ಬಾಡಿಗೆ ಮನೆ ಹೊಂದಿದವರ ಲಾಭ

ಆದಾಯ ತೆರಿಗೆ ನಿಯಮ 10(13ಎ) ಇದರಡಿ ನಿಮ್ಮ ವಿನಾಯ್ತಿ ಈ ಕೆಳಗಿನ ಮೂರರಲ್ಲಿ ಕನಿಷ್ಠ ಮೊತ್ತವಾಗಿರುತ್ತದೆ.

1. ನಿಮ್ಮ ಕಂಪನಿ ಬಾಡಿಗೆ ಮನೆ ಭತ್ಯೆಯಾಗಿ ವೇತನದಲ್ಲಿ ನಿಗದಿಪಡಿಸಿದ ಮೊತ್ತ
2. ಮೂಲ ವೇತನದ ಶೇಕಡಾ 10ಕ್ಕಿಂತ ಹೆಚ್ಚು ಪಾವತಿಸಿದ ನಿಜವಾದ ಬಾಡಿಗೆ
3. ಉದ್ಯೋಗಿಯು ಮಹಾನಗರದಲ್ಲಿ ವಾಸಿಸುತ್ತಿದ್ದರೆ (ಮೆಟ್ರೊ ಅಲ್ಲದ ನಗರಕ್ಕೆ ಶೇ 40) ಮೂಲ ವೇತನದ ಶೇಕಡಾ 50

ಒಂದುವೇಳೆ ನೀವು ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದು, ವೇತನದಲ್ಲಿ ಬಾಡಿಗೆ ಮನೆ ಭತ್ಯೆಯನ್ನೂ ಪಡೆಯುತ್ತಿದ್ದರೆ, ನಿಮಗೆ ಮೇಲಿನ ನಿಯಮದ ಪ್ರಕಾರ ಯಾವುದೇ ತೆರಿಗೆ ವಿನಾಯ್ತಿ ಸಿಗುವುದಿಲ್ಲ. ಹೀಗಾಗಿ ಸಂಪೂರ್ಣ ಭತ್ಯೆಯ ಮೇಲೆ ತೆರಿಗೆ ಕಟ್ಟಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT