ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುವಲ್‌ ಫಂಡ್‌: ಎಸ್‌ಐಪಿಗೆ ಶಕ್ತಿ ತುಂಬುವ ಬಗೆ

Last Updated 13 ಡಿಸೆಂಬರ್ 2019, 5:50 IST
ಅಕ್ಷರ ಗಾತ್ರ

ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡುವವರಲ್ಲಿ ಹೆಚ್ಚಿನವರು ಈಚೆಗೆ ವ್ಯವಸ್ಥಿತ ಹೂಡಿಕಾ ಯೋಜನೆಯನ್ನು (ಎಸ್‌ಐಪಿ–ಸಿಪ್‌) ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರತಿ ತಿಂಗಳು 2.6 ಕೋಟಿ ಖಾತೆಗಳ ಮೂಲಕ ಸುಮಾರು ₹ 800 ಕೋಟಿ ಎಸ್‌ಐಪಿ ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಆಗಿತ್ತಿದೆ. ಎಸ್‌ಐಪಿಯ ಆಕರ್ಷಣೆ ಅಬಾಧಿತವಾಗಿದೆ ಎಂಬುದನ್ನು ಈ ಅಂಕಿ ಸಂಖ್ಯೆಗಳು ತೋರಿಸುತ್ತವೆ.

ಪ್ರತಿ ತಿಂಗಳೂ ನಿಗದಿತ ಮೊತ್ತವನ್ನು ತಮಗೆ ಇಷ್ಟವಿರುವ ಫಂಡ್‌ನಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಎಸ್‌ಐಪಿ ಅತ್ಯುತ್ತಮ ಹೂಡಿಕಾ ವಿಧಾನವಾಗಿದೆ. ಇಲ್ಲಿ ನೀವು ಯಾವ ಸಮಯದಲ್ಲಿ ಹೂಡಿಕೆ ಮಾಡಿದ್ದೀರಿ ಎನ್ನುವುದಕ್ಕಿಂತ ಎಷ್ಟು ಸಮಯ ಹೂಡಿಕೆ ಮಾಡಿರುತ್ತೀರಿ ಎಂಬುದು ಮುಖ್ಯವಾಗುತ್ತದೆ.

ಎಸ್‌ಐಪಿ ಬಗ್ಗೆ ಈಗ ಜಾಗೃತಿ ಹೆಚ್ಚಿದ್ದರೂ, ಅದರ ಎಲ್ಲಾ ಸೌಲಭ್ಯಗಳ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ಆದಾಯ ವೃದ್ಧಿಗೆ ದಾರಿ ಮಾಡಿಕೊಡಬಹುದಾದಂಥ ಹಲವು ಸೌಲಭ್ಯಗಳು ಎಸ್‌ಐಪಿಯಲ್ಲಿ ಇವೆ. ಕಳೆದ ಕೆಲವು ವರ್ಷಗಳಲ್ಲಿ ಎಸ್‌ಐಪಿಯೂ ಸಹ ಗ್ರಾಹಕರಿಗೆ ಹೊಸಹೊಸ ಸೌಲಭ್ಯಗಳನ್ನು ಒದಗಿಸಲು ಅನುವಾಗುವಂತೆ ಸುಧಾರಿಸುತ್ತಲೇ ಬಂದಿದೆ. ಎಸ್‌ಐಪಿಯ ಗರಿಷ್ಠ ಲಾಭ ಪಡೆಯಲು ಬಯಸುವವರು ಹೂಡಿಕೆಯ ಸಂದರ್ಭದಲ್ಲಿ ಈ ಕೆಲವು ಸಲಹೆಗಳನ್ನು ಪರಿಗಣಿಸಬಹುದು.

ಸೆಟ್‌ಅಪ್‌/ ಟಾಪ್‌ಅಪ್‌ ಸಿಪ್‌

ಯಾವುದೇ ಹೆಚ್ಚುವರಿ ಪತ್ರವ್ಯವಹಾರಗಳಿಲ್ಲದೆಯೇ ನಿಗದಿತ ಅಂತರದಲ್ಲಿ ಹೂಡಿಕೆಯನ್ನು ಹೆಚ್ಚುಮಾಡುತ್ತಾ ಹೋಗುವ ಸೌಲಭ್ಯ ಇದು. ಸಣ್ಣ ಮೊತ್ತದಿಂದ ಹೂಡಿಕೆ ಆರಂಭಿಸುವವರು ವರ್ಷವರ್ಷವೂ ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗಬಹುದು. ಹೂಡಿಕೆಯ ಹವ್ಯಾಸವನ್ನು ಮುಂದುವರಿಸಿಕೊಂಡು ಹೋಗಲು ಇದು ಅನುಕೂಲಕರ. ಅಷ್ಟೇ ಅಲ್ಲ ಹೂಡಿಕೆ ಹೆಚ್ಚಿದಂತೆ ಗಳಿಕೆಯ ಪ್ರಮಾಣವೂ ಹೆಚ್ಚುತ್ತದೆ.

ಜೀವವಿಮಾ ಸೌಲಭ್ಯ

ಎಸ್‌ಐಪಿಯು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆಯೇ ಹೂಡಿಕೆದಾರರಿಗೆ ಜೀವವಿಮೆಯನ್ನೂ ಒದಗಿಸುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿರಲಾರದು. ಇದು ಸಂಸ್ಥೆಗಳು ಹೂಡಿಕೆದಾರರಿಗೆ ನೀಡುವ ಹೆಚ್ಚುವರಿ ಸೌಲಭ್ಯವಾಗಿದೆ. ಗರಿಷ್ಠ ₹ 50 ಲಕ್ಷದವರೆಗೆ ವಿಮೆ ಲಭ್ಯವಾಗುತ್ತದೆ. ಹೂಡಿಕೆಯ ಅವಧಿ ಇರುವವರೆಗೆ ಅಥವಾ ಹೂಡಿಕೆದಾರರಿಗೆ 60 ವರ್ಷ ವಯಸ್ಸು ತುಂಬುವವರೆಗೆ ಇದು ಜಾರಿಯಲ್ಲಿರುತ್ತದೆ. ನಮ್ಮ ಸಂಸ್ಥೆಯ ಎಲ್ಲಾ ಫಂಡ್‌ಗಳಿಗೂ ಇದು ಅನ್ವಯವಾಗುತ್ತದೆ.

ಬಹುಕ್ಷೇತ್ರಗಳಲ್ಲಿ ಹೂಡಿಕೆ

ಬೇರೆಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವವರಿಗೆ ‘ಮಲ್ಟಿ ಸಿಪ್‌’ ಆಯ್ಕೆ ಅತ್ಯುತ್ತಮವಾದುದು. ಒಂದೇ ಹೂಡಿಕೆಯ ಮೂಲಕ ಬೇರೆಬೇರೆ ಕ್ಷೇತ್ರದ ಫಂಡ್‌ಗಳ ಲಾಭವನ್ನು ಪಡೆದುಕೊಳ್ಳಬಹುದು. ಇದರಿಂದ ಪ್ರತಿ ಹೂಡಿಕೆಗೂ ಹಲವು ದಾಖಲೆಗಳಿಗೆ ಸಹಿಮಾಡುವ ಕಷ್ಟ ಸಹ ತಪ್ಪುತ್ತದೆ.

ಯಾವತ್ತು ಬೇಕಾದರೂ ಎಸ್‌ಐಪಿ

ಹಿಂದೆ ಹೂಡಿಕೆದಾರರು ಯಾವ ದಿನ ಹಣ ತೊಡಗಿಸಬೇಕು ಎಂಬುದನ್ನು ಮ್ಯೂಚುವಲ್‌ ಫಂಡ್‌ ಸಂಸ್ಥೆಗಳೇ ನಿಗದಿ ಮಾಡುತ್ತಿದ್ದವು. ಈಗ ಆ ಆಯ್ಕೆಯನ್ನು ಹೂಡಿಕೆದಾರರಿಗೆ ನೀಡಲಾಗಿದೆ. ತಮ್ಮ ಹಣದ ಹರಿವಿಗೆ ಅನುಗುಣವಾಗಿ ಪ್ರತಿ ತಿಂಗಳ 1 ರಿಂದ 28ನೇ ತಾರೀಕಿನೊಳಗಿನ ದಿನವನ್ನು ಹೂಡಿಕೆದಾರರೇ ಆಯ್ಕೆ ಮಾಡಿಕೊಳ್ಳಬಹುದು.

ಶಾಶ್ವತ ಸಿಪ್‌

ಸಿಪ್‌ ಮೂಲಕ ಮಾಡುವ ಹೂಡಿಕೆಗೆ ಸಾಮಾನ್ಯವಾಗಿ ಕೊನೆಯ ದಿನ ಎಂಬುದು ಇರುತ್ತದೆ. 1 ವರ್ಷದಿಂದ 10 ವರ್ಷಗಳವರೆಗಿನ ಅವಧಿಯಲ್ಲಿ ಬೇಕಾದ ದಿನವನ್ನು ಹೂಡಿಕೆದಾರರು ಆಯ್ಕೆ ಮಾಡಿಕೊಳ್ಳಬಹುದಾಗಿತ್ತು. ಅವಧಿ ಪೂರ್ಣಗೊಂಡ ಬಳಿಕ ಖಾತೆಯಿಂದ ಫಂಡ್‌ ನಿರ್ವಹಣಾ ಸಂಸ್ಥೆಗೆ ಹಣ ಹೋಗುವುದು ಸ್ಥಗಿತಗೊಳ್ಳುತ್ತಿತ್ತು. ಆದರೆ ಈಗ ಶಾಶ್ವತ ಹೂಡಿಕೆಯ ಅವಕಾಶವನ್ನೂ ನೀಡಲಾಗುತ್ತಿದೆ. ಹೂಡಿಕೆ ಆರಂಭಿಸುವಾಗ ಹೂಡಿಕೆಯ ಕೊನೆಯ ದಿನಾಂಕವನ್ನು ನಮೂದಿಸದಿದ್ದರೆ ನಿರಂತರವಾಗಿ ಹಣ ಹೂಡಿಕೆ ಆಗುತ್ತಲೇ ಇರುತ್ತದೆ. ಉದ್ದೇಶಿತ ಆರ್ಥಿಕ ಗುರಿ ಸಾಧನೆಯ ನಂತರವೂ ಹೂಡಿಕೆಯನ್ನು ಮುಂದುವರಿಸುತ್ತಲೇ ಇರಲು ಇದು ನೆರವಾಗುತ್ತದೆ.

ಮೈಕ್ರೊ ಸಿಪ್‌

ಮೊದಲ ಬಾರಿಗೆ ಹೂಡಿಕೆಯನ್ನು ಆರಂಭಿಸುವವರಿಗೆ ಸೂಕ್ತವಾದ ಆಯ್ಕೆ ಇದು. ಇಲ್ಲಿ ಕನಿಷ್ಠ ₹ 100 ಹೂಡಿಕೆಗೂ ಅವಕಾಶ ಇದೆ. ಸ್ವಲ್ಪ ಕಾಲ ಕನಿಷ್ಠ ಹೂಡಿಕೆ ಮಾಡಿದ ಬಳಿಕ ನಿಧಾನವಾಗಿ ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸಬಹುದು. ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ನೀಡುವ ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡ ನಂತರವೂ ದೊಡ್ಡ ಪ್ರಮಾಣದ ನಿಧಿಯನ್ನು ಪಡೆಯಬೇಕೆಂದರೆ ಅನುಸರಿಸಲೆಬೇಕಾದ ಪ್ರಮುಖ ನಿಯಮವೆಂದರೆ ದೀರ್ಘಕಾಲದವರೆಗೆ ಹೂಡಿಕೆಯನ್ನು ಮುಂದುವರಿಸುವುದು.

(ಲೇಖಕ: ಸಿಇಒ, ಆದಿತ್ಯಬಿರ್ಲಾ ಸನ್‌ಲೈಫ್‌ ಎಎಂಸಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT