ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿಯ ಬದುಕಿಗೆ ಇರಲಿ ಜೀವವಿಮೆ

Last Updated 11 ಜೂನ್ 2019, 14:08 IST
ಅಕ್ಷರ ಗಾತ್ರ

ಜೀವನದ ಬಹುಪಾಲು ಸಮಯವನ್ನು ಎಲ್ಲರೂ ಕಷ್ಟಪಟ್ಟು ದುಡಿಯುವುದರಲ್ಲೇ ಕಳೆಯುತ್ತಾರೆ. ನಿವೃತ್ತಿಯ ನಂತರ ಹೆಚ್ಚಿನ ಚಿಂತೆಗಳಿಲ್ಲದೆ ಬದುಕಬೇಕು ಎಂಬುದು ಇದರ ಹಿಂದಿನ ಉದ್ದೇಶ. ತಮ್ಮ ಇಷ್ಟದ ಹವ್ಯಾಸಗಳನ್ನು ಮಾಡುವುದು, ಚೈತನ್ಯದಾಯಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ದೇಶ–ವಿದೇಶಗಳನ್ನು ಸುತ್ತಾಡುವುದು... ಹೀಗೆ ಒಂದರ್ಥದಲ್ಲಿ ಇದು ಜೀವನದ ಸ್ವರ್ಣಯುಗ. ಅನೇಕ ಮಂದಿಯ ನಿಜವಾದ ಜೀವನ ಆರಂಭವಾಗುವುದೇ ನಿವೃತ್ತಿಯ ಬಳಿಕ.

ನಿವೃತ್ತಿ ನಂತರದ ಜೀವನವನ್ನು ಆನಂದಿಸಬೇಕಾದರೆ ದೊಡ್ಡ ಮೊತ್ತದ ಹಣದ ಅಗತ್ಯವೂ ಇರುತ್ತದೆ. ಮಾಡಲು ಉದ್ಯೋಗ ಇಲ್ಲ ಎಂದ ಮೇಲೆ ಹಣ ಎಲ್ಲಿಂದ ಬರಬೇಕು. ಅದಕ್ಕಾಗಿ ಸಾಕಷ್ಟು ಮುಂಚಿತವಾಗಿಯೇ ಯೋಜನೆ ರೂಪಿಸುವುದು ಅಗತ್ಯ. ಉದ್ಯೋಗ ಮಾಡುತ್ತಿರುವಾಗಲೇ ನಿವೃತ್ತಿ ಜೀವನಕ್ಕೆ ಬೇಕಾಗುವಷ್ಟು ಹೂಡಿಕೆ ಮಾಡುವುದು ಅಗತ್ಯ. ಅಂದರೆ ನಿವೃತ್ತಿ ಬಳಿಕದ ಜೀವನಕ್ಕಾಗಿ ಮೊದಲೇ ಯೋಜನೆಗಳನ್ನು ರೂಪಿಸಬೇಕು. ಆದರೆ ಹೇಗೆ?

ಬೇಗನೆ ಆರಂಭಿಸಿ: ಹೌದು, ನಿವೃತ್ತಿಯ ನಂತರದ ಜೀವನಕ್ಕೆ ಹೆಚ್ಚಿನ ಹಣ ಬೇಕು ಎಂದಾದರೆ ಬಹು ಬೇಗನೆ ಹೂಡಿಕೆ ಆರಂಭಿಸಬೇಕು. ಎಷ್ಟು ಬೇಗ ಹೂಡಿಕೆ ಆರಂಭಿಸುತ್ತೀರೋ ನಿವೃತ್ತಿಯ ವೇಳೆಗೆ ಅಷ್ಟು ಪ್ರಮಾಣದಲ್ಲಿ ಹೆಚ್ಚಿನ ಗಳಿಕೆ ಆಗುತ್ತದೆ. 25–26ನೇ ವರ್ಷ ಉಳಿತಾಯದ ಹವ್ಯಾಸ ಆರಂಭಿಸಲು ಯೋಗ್ಯ ವಯಸ್ಸು.

ಸುಮಾರಾಗಿ ಈ ವಯಸ್ಸಿನಲ್ಲೇ ಹೆಚ್ಚಿನವರು ದುಡಿಮೆ ಆರಂಭಿಸಿರುತ್ತಾರೆ. ಈ ವಯಸ್ಸಿನಲ್ಲಿ ನಿವೃತ್ತಿಯ ನಂತರದ ಜೀವನದ ಬಗ್ಗೆ ಯಾರೂ ಯೋಚನೆಯನ್ನೂ ಮಾಡುವುದಿಲ್ಲ ಎಂಬುದು ನಿಜ. ಆದರೆ, ಈ ವಯಸ್ಸಿನಲ್ಲಿ ಹೆಚ್ಚಿನ ಜವಾಬ್ದಾರಿಗಳು ಇರುವುದಿಲ್ಲ. ಹೀಗಾಗಿ ಹೂಡಿಕೆ ಆರಂಭಿಸಲು ಇದು ಸಕಾಲವಾಗಿರುತ್ತದೆ. ವೃತ್ತಿ ಜೀವನದ ಆರಂಭದಿಂದಲೇ ಹೂಡಿಕೆ ಆರಂಭಿಸಿದರೆ ನಿವೃತ್ತಿ ವೇಳೆಗೆ ದೊಡ್ಡ ನಿಧಿಯನ್ನು ಪಡೆಯಬಹುದು.

ಯೋಜನೆ ರೂಪಿಸುವುದು ಹೇಗೆ?: ನಿವೃತ್ತಿಯ ಬಳಿಕವೂ ನಿಗದಿತವಾಗಿ ಆದಾಯ ತಂದುಕೊಡುವ ಯೋಜನೆಗಳನ್ನು ಆಯ್ಕೆ ಮಾಡುವುದು ಸರಿಯಾದ ನಿರ್ಧಾರವೆನಿಸುತ್ತದೆ. ನಿವೃತ್ತಿ ವೇಳೆಯ ಹಣದುಬ್ಬರ, ಆ ಕಾಲದಲ್ಲಿ ಬರಬಹುದಾದ ಆರೋಗ್ಯ ರಕ್ಷಣಾ ವೆಚ್ಚಗಳು ಮುಂತಾದವುಗಳನ್ನು ಗಣನೆಗೆ ತೆಗೆದುಕೊಂಡು, ಜೀವನಕ್ಕೆ ಎಷ್ಟು ಹಣದ ಅಗತ್ಯ ಬರಬಹುದು ಎಂಬುದನ್ನು ಮೊದಲೇ ಲೆಕ್ಕ ಹಾಕಿಕೊಳ್ಳಬೇಕು.

ಜೀವ ವಿಮೆಯೂ ಇರಲಿ: ಹೂಡಿಕೆಗೆ ಇಂದು ಸಾಕಷ್ಟು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಬೇರೆ ಬೇರೆ ಹೂಡಿಕೆಗಳ ಜೊತೆಗೆ ಜೀವ ವಿಮೆಯನ್ನೂ ಸೇರಿಸಿಕೊಳ್ಳುವುದು ಅಗತ್ಯ. ನಿವೃತ್ತಿ ಯೋಜನೆಗಾಗಿ ಜೀವ ವಿಮಾ ಉತ್ಪನ್ನಗಳನ್ನು ಹಲವು ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ.

ಪಿಂಚಣಿ ಯೋಜನೆ, ಎಂಡೋಮೆಂಟ್‌ ಯೋಜನೆ, ಯುಲಿಪ್‌... ಹೀಗೆ ಜೀವವಿಮೆಯಲ್ಲೂ ಅನೇಕ ಉತ್ಪನ್ನಗಳು ಇವೆ. ವಾರ್ಷಿಕ, ಅರ್ಧವಾರ್ಷಿಕ ಅಥವಾ ತ್ರೈಮಾಸಿಕ ಅಂತರದಲ್ಲಿ ನಿಗದಿತ ಮೊತ್ತ ಕೊಡುವಂತಹ ಯೋಜನೆ ಆಯ್ಕೆ ಮಾಡಿಕೊಳ್ಳಬಹುದು. ಕೆಲವು ಯೋಜನೆಗಳು ಆರಂಭದಲ್ಲಿ ಕಡಿಮೆ ಹಣ ಕೊಡುತ್ತ, ಕೊನೆ ಕೊನೆಗೆ ಹೆಚ್ಚಿನ ಮೊತ್ತ ಕೊಡುತ್ತವೆ. ವಯಸ್ಸಾದಂತೆ ಆರೋಗ್ಯ ರಕ್ಷಣೆಗೆ ಹೆಚ್ಚಿನ ವೆಚ್ಚ ಬರುವುದರಿಂದ ಇಂಥ ವಿಮೆ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಪಕ್ವಗೊಂಡಾಗ ಒಮ್ಮೆಲೇ ದೊಡ್ಡ ಮೊತ್ತ ನೀಡುವ ಬದಲು, ಹಲವು ಕಂತುಗಳಲ್ಲಿ ಹಣ ನೀಡುವ ಯೋಜನೆಗಳೂ ಇವೆ.

ಪ್ರತಿ ತಿಂಗಳೂ ಆದಾಯ: ಜೀವ ವಿಮಾ ಸಂಸ್ಥೆಗಳು ಮಾಸಿಕ ಆದಾಯದ ಯೋಜನೆಗಳನ್ನೂ ನೀಡುತ್ತವೆ. ಆರಂಭದ ಕೆಲವು ವರ್ಷಗಳಲ್ಲಿ ಕಂತುಗಳನ್ನು ತುಂಬುತ್ತಾ ಹೋದರೆ, ಯೋಜನೆ ಪಕ್ವಗೊಂಡ ಬಳಿಕ ಇವು ಪ್ರತಿ ತಿಂಗಳೂ ನಿಗದಿತ ಪ್ರಮಾಣದಲ್ಲಿ ಹಣವನ್ನು ಕೊಡುತ್ತಲೇ ಇರುತ್ತವೆ. ಇಂಥ ಯೋಜನೆಗಳು ವಿಮಾದಾರರಿಗೆ ಜೀವ ವಿಮೆಯ ಸೌಲಭ್ಯವನ್ನೂ ನೀಡುತ್ತವೆ. ನಿವೃತ್ತಿಯ ನಂತರ ನಿಗದಿತ ಆದಾಯ ಬಯಸುವವರು ಇಂತಹ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಜೀವವಿಮೆಯ ಲಾಭಗಳು: ಜೀವವಿಮೆ ಉತ್ಪನ್ನಗಳು ಆದಾಯ ದೃಢಪಡಿಸುವುದರ ಜೊತೆಗೆ ಇನ್ನೂ ಅನೇಕ ಸೌಲಭ್ಯಗಳನ್ನು ನೀಡುತ್ತವೆ. ಇವುಗಳಲ್ಲಿ ಮಾಡಿರುವ ಹೂಡಿಕೆ ಹೆಚ್ಚು ಸುರಕ್ಷಿತ. ವಿಮೆಯು ನಿಗದಿತ ಆದಾಯ ದೃಢಪಡಿಸುವ ಉತ್ಪನ್ನವಾಗಿದೆ. ಮಾಡಿರುವ ಹೂಡಿಕೆಯನ್ನು ರಕ್ಷಿಸುವುದರ ಜೊತೆಗೆ ಇಂಥ ಯೋಜನೆಗಳು ನಿವೃತ್ತಿಯ ನಂತರದ ಆದಾಯವನ್ನೂ ಖಾತರಿಪಡಿಸುತ್ತವೆ. ಜೊತೆಗೆ ತೆರಿಗೆ ಉಳಿತಾಯದ ಲಾಭವನ್ನೂ ನೀಡುತ್ತವೆ.

ಜೀವ ವಿಮೆಯ ಹೂಡಿಕೆಯು ನಿವೃತ್ತಿ ನಂತರದ ಜೀವನಕ್ಕೆ ಮಾಡುವ ಪರಿಣಾಮಕಾರಿ ಮತ್ತು ಸರಿಯಾದ ಹೂಡಿಕೆ ಆಗಿರುವುದರಲ್ಲಿ ಸಂದೇಹವಿಲ್ಲ. ಆದಾಯ ತಂದುಕೊಡುವುದರ ಜೊತೆಗೆ ಇವು ತೆರಿಗೆ ಉಳಿತಾಯ ಮಾಡಲು ಮತ್ತು ದೀರ್ಘಾವಧಿ ಗುರಿಯನ್ನು ಈಡೇರಿಸಲೂ ನೆರವಾಗುತ್ತವೆ. ಆ ಮೂಲಕ ನಿವೃತ್ತಿ ನಂತರದ ಜೀವನ ಸುಲಲಿತವಾಗಿ ಸಾಗಲು ಸಾಧ್ಯವಾಗುವಂತೆ ಮಾಡುತ್ತದೆ.

(ಲೇಖಕ: ಆದಿತ್ಯ ಬಿರ್ಲಾ ಸನ್‌ ಲೈಫ್‌ ಇನ್ಶೂರೆನ್ಸ್‌ನ ಮುಖ್ಯ ವಿತರಣಾ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT