ಅವಧಿಪೂರ್ವ ನಿವೃತ್ತಿಗೆ ಸಿದ್ಧತೆ ಹೇಗೆ?

7

ಅವಧಿಪೂರ್ವ ನಿವೃತ್ತಿಗೆ ಸಿದ್ಧತೆ ಹೇಗೆ?

Published:
Updated:

ಹಿಂದಿನ ತಲೆಮಾರಿನವರಿಗೆ ವೃತ್ತಿಯ ಆಯ್ಕೆ ವಿಚಾರದಲ್ಲಿ ಸ್ಪಷ್ಟವಾದ ಒಂದು ಗುರಿ ಇರುತ್ತಿತ್ತು. ಕಾಲೇಜು ಶಿಕ್ಷಣ ಮುಗಿಯುತ್ತಿದ್ದಂತೆ ಯಾವುದಾದರೂ ದೊಡ್ಡ ಕಂಪನಿಯಲ್ಲಿ ಅಥವಾ ಸರ್ಕಾರಿ ಕೆಲಸಕ್ಕೆ ಸೇರಿ, ಸುಮಾರು 38 ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ದುಡಿದು, ನಿವೃತ್ತಿ ಹೊಂದುವ ಕಾಲಕ್ಕೆ ಭವಿಷ್ಯನಿಧಿ ಮತ್ತು ಗ್ರಾಚ್ಯುಟಿ ಸೇರಿ ದೊಡ್ಡ ಮೊತ್ತದ ಹಣದೊಂದಿಗೆ ನಿರ್ಗಮಿಸುತ್ತಿದ್ದರು. ಮುಂದಿನ ಜೀವನಕ್ಕೆ ಬೇಕಾದಷ್ಟು ಪಿಂಚಣಿಯೂ ಬರುತ್ತಿತ್ತು.

ಈಚಿನ ಮೂರು ದಶಕಗಳಲ್ಲಿ ಉದ್ಯೋಗ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಜನರು ನಿವೃತ್ತಿ ವಯಸ್ಸು ತಲುಪುವುದಕ್ಕೂ ಮೊದಲೇ ಕೆಲಸದಿಂದ ನಿವೃತ್ತಿ ಪಡೆದು ಸ್ವತಂತ್ರರಾಗಲು ಇಚ್ಛಿಸುತ್ತಾರೆ. ಇನ್ನೂ ಕೆಲವರು 40ವರ್ಷದ  ಆಸುಪಾಸಿನಲ್ಲೇ ಸ್ವಯಂ ನಿವೃತ್ತಿ ಪಡೆದು, ಸ್ವಂತ ಉದ್ಯೋಗ ಮಾಡುತ್ತಾ ಅಥವಾ ತಮ್ಮ ಆಸಕ್ತಿಯ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾ ಮುಂದಿನ ಜೀವನವನ್ನು ಕಳೆಯಲು ಮುಂದಾಗುತ್ತಿದ್ದಾರೆ.

ಈ ಚಿಂತನೆ ಕೇಳಲು ಬಹಳ ಸೊಗಸಾಗಿರುತ್ತದೆ. ಆದರೆ ಇಂಥ ನಿರ್ಧಾರ ಕೈಗೊಳ್ಳಬೇಕಾದರೆ ಸಾಕಷ್ಟು ಆರ್ಥಿಕ ಭದ್ರತೆ ಇರಬೇಕಾಗುತ್ತದೆ. ಒಂದೊಮ್ಮೆ ನೀವು ಇಂಥ ನಿವೃತ್ತ ಜೀವನ ನಡೆಸಲು ಇಚ್ಛಿಸುವುದಾದರೆ ವೃತ್ತಿ ಬದುಕಿನ ಆರಂಭದಿಂದಲೇ ದೊಡ್ಡ ನಿಧಿಯನ್ನು ಕೂಡಿಡುವ ಬಗ್ಗೆ ಯೋಜನೆ ರೂಪಿಸಬೇಕು. ಹೀಗೆ ಹಣವನ್ನು ಕೂಡಿಡುವ ಹವ್ಯಾಸವು ಜೀವನದಲ್ಲಿ ಬಹುದೊಡ್ಡ ಪರಿಣಾಮ ಉಂಟುಮಾಡುತ್ತದೆ. ಜೀವನದ ಯಾವುದೋ ಒಂದು ಹಂತದಲ್ಲಿ ದೊಡ್ಡ ಮೊತ್ತದ ಲಾಟರಿ ಹೊಡೆದರೆ ಅಥವಾ ಇನ್ಯಾವುದೋ ಮೂಲದಿಂದ ದೊಡ್ಡ ನಿಧಿ ಲಭಿಸಿದರೆ ನಿಮ್ಮ ಜೀವನವೇ ಬದಲಾಗಬಹುದು. ಆದರೆ ಅಂಥ ಚಮತ್ಕಾರಕ್ಕಾಗಿ ಕಾಯುತ್ತಾ ಕುಳಿತುಕೊಳ್ಳಲು ಸಾಧ್ಯವೇ? ನಿವೃತ್ತಿಗೂ ಸಾಕಷ್ಟು ಮೊದಲೇ ಸರಿಯಾದ ಯೋಜನೆ ರೂಪಿಸುವುದು ಮತ್ತು ಯೋಜನಾಬದ್ಧವಾಗಿ ಹೂಡಿಕೆ ಮಾಡುವುದೊಂದೇ ನಾವು ಮಾಡಬಹುದಾದ ಪೂರ್ವಸಿದ್ಧತೆ.

ಹಾಗಿದ್ದರೆ, ನಿವೃತ್ತಿಯ ಸಮಯದಲ್ಲಿ ನಮಗೆಷ್ಟು ಹಣ ಬೇಕಾಗಬಹುದು ಮತ್ತು ಅಷ್ಟು ಹಣ ಸಂಗ್ರಹಿಸಲು ಈಗಿಂದಲೇ ಯಾವ ಪ್ರಮಾಣದಲ್ಲಿ ಉಳಿತಾಯ– ಹೂಡಿಕೆ ಮಾಡಬೇಕಾಗುತ್ತದೆ ಎಂಬುದನ್ನು ಈಗಲೇ ತಿಳಿಯುವುದಾದರೂ ಹೇಗೆ?

ಇದುವೇ ಹಣಕಾಸು ಯೋಜನೆ ರೂಪಿಸುವ ‘ಸಿಮ್ಯುಲೇಟರ್‌’ಗಳ ಕೆಲಸ. ನೀವು ಬೇಗನೆ ನಿವೃತ್ತಿ ಹೊಂದಲು ಬಯಸುವಿರಾದರೆ ಅದಕ್ಕೆ ಪೂರಕವಾಗಿ ಉಳಿತಾಯಗಳನ್ನು ಎಲ್ಲಿ ಮತ್ತು ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಈ ಸಾಫ್ಟ್‌ವೇರ್‌ಗಳು ತಿಳಿಸುತ್ತವೆ. ಜೊತೆಗೆ ನೀವು ಮಾಡಿದ ಹೂಡಿಕೆಯಮೇಲೆ ಅವು ಕಣ್ಣಿಟ್ಟಿರುತ್ತವೆ. ಈ ಸಿಮ್ಯುಲೇಟರ್‌ಗಳು ಹಲವು ಹಂತಗಳಲ್ಲಿ ಕೆಲಸ ಮಾಡುತ್ತವೆ.

ಹಂತ 1:

ನೀವು ನಿವೃತ್ತಿಯ ವಯಸ್ಸನ್ನು ನಿರ್ಧಾರ ಮಾಡಿದರೆ ಸಿಮ್ಯುಲೇಟರ್‌ಗಳು ನಿಮ್ಮ ಈಗಿನ ಅರ್ಥಿಕ ಸ್ಥಿತಿ, ಅಪಾಯ (ರಿಸ್ಕ್‌) ಎದುರಿಸುವ ಸಾಮರ್ಥ್ಯ ಮತ್ತು ಈಗ ಇರುವ ಉಳಿತಾಯಗಳನ್ನು ಲೆಕ್ಕ ಹಾಕಿ, ನೀವು ಇನ್ನು ಮುಂದೆ ಎಷ್ಟು ಹಣವನ್ನು ನಿಯಮಿತವಾಗಿ ಉಳಿತಾಯ ಯೋಜನೆಯಲ್ಲಿ (ಎಸ್‌ಐಪಿ) ತೊಡಗಿಸಬೇಕು ಎಂದು ತಿಳಿಸುತ್ತದೆ. ಇವೆಲ್ಲವೂ ಕಂಪ್ಯೂಟರೀಕೃತ ಲೆಕ್ಕಾಚಾರಗಳು (ಹಲವು ಪ್ರಸಿದ್ಧ ಹಣಕಾಸು ಸಂಸ್ಥೆಗಳು ಇಂಥ ಸಿಮ್ಯುಲೇಟರ್‌ಗಳನ್ನು ರೂಪಿಸಿವೆ).

ಹಂತ 2:

ಈ ಹಂತದಲ್ಲಿ ನಿಮ್ಮ ವೆಚ್ಚವನ್ನು ಕಡಿತಗೊಳಿಸಿ, ಉಳಿತಾಯ ಹೆಚ್ಚಿಸುವ ಬಗ್ಗೆ ಸಲಹೆ ನೀಡಲಾಗುತ್ತದೆ. ಆರ್ಥಿಕ ನಿರ್ವಹಣೆ ಎಂದರೆ ವೆಚ್ಚ ಮತ್ತು ಉಳಿತಾಯಗಳ ನಡುವಿನ ಆಟವೇ ಅಲ್ಲವೇ? ಸಿಮ್ಯುಲೇಟರ್‌ಗಳು ಭವಿಷ್ಯದ ಹಣದುಬ್ಬರದ ಆಧಾರದಲ್ಲಿ ಹಣದ ಮೌಲ್ಯವನ್ನು ಲೆಕ್ಕಹಾಕಿ ಕಾಲಕಾಲಕ್ಕೆ ಸಲಹೆಗಳನ್ನು ನೀಡುತ್ತವೆ. ನಿವೃತ್ತಿಯ ವೇಳೆಗೆ ನಿಮ್ಮ ದಿನಿತ್ಯದ ವೆಚ್ಚಕ್ಕೆ ಎಷ್ಟು ಹಣ ಬೇಕಾಗಬಹುದು ಎಂಬುದನ್ನೂ ತಿಳಿಸುತ್ತವೆ.

ಹಂತ 3:

ಈ ಹಂತದಲ್ಲಿ ನೀವು ನಿಖರವಾಗಿ ಎಷ್ಟು ಹೂಡಿಕೆ ಮಾಡಬಲ್ಲಿರಿ ಮತ್ತು ನಿವೃತ್ತಿಯ ಸಮಯದಲ್ಲಿ ಎಷ್ಟು ಮೊತ್ತವನ್ನು ಪಡೆಯಬಲ್ಲಿರಿ ಎಂಬುದನ್ನು ತಿಳಿಸುತ್ತದೆ. ಅಪಾಯ ಎದುರಿಸುವ ನಿಮ್ಮ ಸಾಮರ್ಥ್ಯ, ತೆರಿಗೆ ಪ್ರಮಾಣ, ಅಗತ್ಯ ಖರ್ಚುವೆಚ್ಚಗಳೆಲ್ಲವನ್ನೂ ಲೆಕ್ಕ ಹಾಕಿ, ಸರಿಯಾದ ಹೂಡಿಕೆ ವಿಧಾನವನ್ನು ತಿಳಿಸಲಾಗುತ್ತದೆ. ನೀವು ಉದ್ದೇಶಿತ ಪ್ರಮಾಣದ ಹಣವು ನಿವೃತ್ತಿಗೂ ಎರಡು ವರ್ಷ ಮೊದಲೇ ಕೈಸೇರುವಂತೆ ಮಾಡಬಲ್ಲ ಯೋಜನೆಯನ್ನು ಇವು ರೂಪಿಸಿಕೊಡುತ್ತವೆ.

ಹಂತ 4:

ಅವಧಿಗೂ ಮುನ್ನ ನಿವೃತ್ತಿ ಪಡೆಯುವ ನಿಮ್ಮ ಯೋಜನೆಯ ಕೊನೆಯ ಹಂತವೆಂದರೆ ಇಡೀ ಹೂಡಿಕೆ ವಿಧಾನದ ಮೇಲೆ ನಿಗಾ ಇಡುವುದು. ನೀವು ಮಾಡಿರುವ ಹೂಡಿಕೆ ಯೋಜನೆ ಸರಿಯಾದ ದಿಕ್ಕಿನಲ್ಲಿದೆಯೇ ಎಂಬುದನ್ನು ಸಿಮ್ಯುಲೇಟರ್‌ ಪರೀಕ್ಷಿಸುತ್ತಾ, ಅಗತ್ಯ ಬಿದ್ದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲು ಸಲಹೆ ನೀಡುತ್ತದೆ. ಸಿಮ್ಯುಲೇಟರ್‌ಗಳ ಅತಿ ದೊಡ್ಡ ಉಪಯೋಗವೆಂದರೆ ಇವು ಅತ್ಯಂತ ಸರಳವಾಗಿ ನಿಮ್ಮ ಹೂಡಿಕೆ ಯೋಜನೆಗಳನ್ನು ಬದಲಿಸಲು ಅವಕಾಶ ಮಾಡಿಕೊಡುತ್ತವೆ.

ಅವಧಿಗೂ ಮುನ್ನವೇ ನಿವೃತ್ತಿ ಪಡೆದು ಸ್ವತಂತ್ರ ಜೀವನ ನಡೆಸಬೇಕಾದರೆ ಅದಕ್ಕೆ ಸೂಕ್ತ ಯೋಜನೆ ರೂಪಿಸುವುದು ಅಗತ್ಯ. ಅದಕ್ಕೆ ಸರಿಯಾದ ಮಾರ್ಗದರ್ಶನ ನೀಡುವ ವ್ಯವಸ್ಥೆ ಇದ್ದರೆ ನಿಮ್ಮ ಸಂಪತ್ತಿನ ಮೌಲ್ಯವರ್ಧನೆ ಆಗುತ್ತದೆ.

(ಏಂಜೆಲ್‌ ಬ್ರೋಕಿಂಗ್‌ ಪ್ರೈವೇಟ್‌ ಲಿಮಿಟೆಡ್‌)

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !