ಜಗತ್ತಿನಲ್ಲಿದ್ದ ಲೋಹಗಳಲ್ಲಿ ಅತ್ಯಂತ ಬೆಲೆಬಾಳುವ ಲೋಹ ಯಾವುದು? ಚಿನ್ನ? ಬೆಳ್ಳಿ? ಅಲ್ಲ, ಅದ್ಯಾವುದೂ ಅಲ್ಲ. ಈ ಲೋಹ ಗಣಿಗಳಿಂದ ಹೊರತೆಗೆದಿದ್ದಲ್ಲ, ಈ ಲೋಹದ ಹೆಸರು ರಸಾಯನ ವಿಜ್ಞಾನದ ಆವರ್ತಕೋಷ್ಟಕದಲ್ಲಿ ಇಲ್ಲವೇ ಇಲ್ಲ. ಅರೆ, ಅದ್ಯಾವುದಂತೀರಾ? ಅದೇ ಅಕ್ರಮ ಶಸ್ತ್ರಾಸ್ತ್ರಗಳಿಂದ ತಯಾರಿಸಿದ ‘ಹ್ಯುಮಾನಿಯಂ’ ಲೋಹ. ಇಂದು ಅತಿ ಹೆಚ್ಚು ಮಾನ್ಯತೆ ಗಳಿಸಿದ ಲೋಹ. ಏಕೆಂದರೆ ಇದು ಜೀವವನ್ನುಳಿಸುವ ಅಮೂಲ್ಯವಾದ ಲೋಹ.

ಯುದ್ಧ ಎಂದರೆ ಹಿಂಸೆ, ಕ್ರೌರ್ಯ. ದೇಶದೇಶಗಳ ನಡುವೆಯಷ್ಟೇ ಅಲ್ಲ, ನಾಗರಿಕ ಜಗತ್ತಿನಲ್ಲೂ ಅಲ್ಲಲ್ಲಿ ಭಯೋತ್ಪಾದನೆ, ಅಶಾಂತಿ, ದಂಗೆ, ದೊಂಬಿಯಲ್ಲಿ ಆಂತರಿಕ ಯುದ್ಧಗಳು ನಡೆಯುತ್ತಲೇ ಇರುತ್ತವೆ. ಶಸ್ತ್ರಾಸ್ತ್ರ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಭೂಗತ ಮಾದಕ ವಸ್ತುಗಳ ಮಾಫಿಯಾ ದಂಧೆಯಲ್ಲೂ ಈ ಆಯುಧಗಳು ಬಳಕೆಯಾಗುತ್ತಿವೆ. ಅಲ್ಲಿ ಉಂಟಾಗುವುದೇ ಸಾವು, ನೋವು. ಮುಂದೆ ಅನಾಥರಾಗುವ ಮಕ್ಕಳು, ಮಹಿಳೆಯರು, ಇಡೀ ಕುಟುಂಬ. ಒಟ್ಟಾರೆ ಸಮಾಜದಲ್ಲಿ ಅಲ್ಲೋಲ ಕಲ್ಲೋಲವುಂಟಾಗುತ್ತದೆ.

ಹ್ಯಾಂಡ್ ಗನ್, ರಿವಾಲ್ವರ್, ಪಿಸ್ತೂಲ್, ರೈಫಲ್, ಬಂದೂಕು, ಎಕೆ 47, ಮಶಿನ್ ಗನ್, ಬೆಂಕಿ ಉಗುಳುವ ಆಯುಧಗಳು, ಆಟೊಮ್ಯಾಟಿಕ್ ಗನ್, ಸಮೂಹನಾಶಕ ಶಸ್ತ್ರಾಸ್ತ್ರ... ಇತ್ಯಾದಿಗಳು ಕ್ರೌರ್ಯದ ಸೂಚಕಗಳು. ತಂತ್ರಜ್ಞಾನ ಸುಧಾರಣೆಗೊಂಡಂತೆಲ್ಲ ಅವುಗಳ ಗುರಿ ಹೆಚ್ಚು ನಿಖರವಾಗುತ್ತಿದೆ. ಪರಿಣಾಮವಾಗಿ ಸಾವು ನೋವುಗಳು ಹೆಚ್ಚಾಗುತ್ತಾ ಹೋಗುತ್ತಿವೆ. ಅವುಗಳ ಬಳಕೆಯಿಂದಾಗಿ ದಿನಕ್ಕೆ ಸುಮಾರು ಎರಡು ಸಾವಿರ ಜನರು ಹತ್ಯೆಗೀಡಾಗುತ್ತಿದ್ದಾರೆ. ಏನಿಲ್ಲೆಂದರೂ ಹತ್ತು, ನೂರು ಜನರು ಅಂಗವಿಕಲರಾಗುತ್ತಿದ್ದಾರೆ.

ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ಕೆರಿಬಿಯನ್ ಪ್ರದೇಶಗಳಲ್ಲಿ ಅತಿ ಹೆಚ್ಚು ಗಲಭೆ, ಅಶಾಂತಿ ಕಾಡಿವೆ. ಉಕ್ರೇನ್ ಮತ್ತು ಪ್ಯಾಲೆಸ್ಟೇನಿಯನ್ಗಳಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸುಮಾರು 2,40,000 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಿರಿಯಾ, ಹೈಟಿ, ಮ್ಯಾನ್ಮಾರ್, ಪಾಕಿಸ್ತಾನ ಹೀಗೆ ಅನೇಕ ದೇಶಗಳಲ್ಲಿ ದಿನನಿತ್ಯ ಪಿಸ್ತೂಲು, ಬಂದೂಕುಗಳ ಶಬ್ದ ಕಿವಿಗಪ್ಪಳಿಸುತ್ತಲೇ ಇರುತ್ತದೆ.

ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವುದು ಮತ್ತು ಅವನ್ನು ಸಂಗ್ರಹಿಸಿಟ್ಟುಕೊಳ್ಳುವುದು ಎರಡೂ ಸರಕಾರಗಳಿಗೆ ತಲೆನೋವಿನ ಕೆಲಸ. ಅಕ್ರಮ ಶಸ್ತ್ರಾಸ್ತ್ರ ನಿಖರ ಅಂಕಿಅಂಶಗಳು ಎಲ್ಲೂ ದೊರೆಯುವುದಿಲ್ಲ. ಇಡೀ ಜಗತ್ತಿನಲ್ಲಿ ಹಬ್ಬಿದ ಜಾಲ ಅದು. ಆದರೂ ಭಾರತದಲ್ಲಿ ಸುಮಾರು 61 ದಶಲಕ್ಷ ಪರವಾನಗಿ ಇಲ್ಲದ ಶಸ್ತ್ರಾಸ್ತ್ರಗಳು ಗುಪ್ತಗಾಮಿನಿಯಾಗಿ ಚಲಾವಣೆಯಲ್ಲಿವೆ ಎಂಬ ಒಂದು ಲೆಕ್ಕಾಚಾರವಿದೆ. ಮೊನ್ನೆಮೊನ್ನೆಯಷ್ಟೇ ಚಾಕು, ಚೂರಿ, ಖಡ್ಗ, ಕತ್ತಿ ಮುಂತಾದ ಐದು ಸಾವಿರದಷ್ಟು ಸಂಖ್ಯೆಯ ಆಯುಧಗಳನ್ನು ಮಹಾರಾಷ್ಟ್ರದ ನಾಂದೇಡ್ನ ಗೋಡೌನ್ ಒಂದರಿಂದ ಪೊಲೀಸರು ವಶಪಡಿಸಿಕೊಂಡ ಬಗ್ಗೆ ವರದಿಗಳಿವೆ.

ಸಾವು, ಅಂಗವೈಕಲ್ಯಗಳನ್ನು ಬದಿಗಿರಿಸಿ, ಭಯೋತ್ಪಾದನೆ ಅಥವಾ ಶಸ್ತ್ರಾಸ್ತ್ರಗಳ ಬಳಕೆಯ ಪರಿಣಾಮವನ್ನು ಅಳೆಯಲು ಹೊರಟರೆ ಅದು ಉಂಟುಮಾಡುವ ಸಾಮಾಜಿಕ, ಆರ್ಥಿಕ ವೈಕಲ್ಯಗಳು ಭಯಂಕರ ಎಂಬುದು ಅರಿವಾಗುತ್ತದೆ. ಶಸ್ತ್ರಾಸ್ತ್ರಗಳು ಉಂಟುಮಾಡುವ ಆರ್ಥಿಕ ಅಸ್ಥಿರತೆ, ವಾರ್ಷಿಕ ನಾಲ್ಕು ಸಾವಿರ ಕೋಟಿ ಡಾಲರ್ ನಷ್ಟ, ರಾಷ್ಟ್ರಗಳ ಆದಾಯದಲ್ಲಿ ಶೇಕಡಾ ಎರಡರಷ್ಟು ಹಿನ್ನಡೆ ಕಾಣುತ್ತದೆಂದು ಅಂದಾಜಿದೆ.

2016ರಲ್ಲಿ ಅಕ್ರಮ ಶಸ್ತ್ರಾಸ್ತ್ರಗಳಿಗೆ ಹೊಸ ಅರ್ಥ ಕೊಡಲೆಂದು ಸ್ವೀಡನ್ ದೇಶದ ಆಯೆಮ್ ಸ್ವೀಡಿಷ್ (IM Swedish Development Partner) ಎಂಬ ಸರ್ಕಾರೇತರ ಸಂಸ್ಥೆಯೊಂದು ಮುಂದೆ ಬಂದಿತು. ಸಂಸ್ಥೆಯ ಹಿರಿಯ ಅಧಿಕಾರಿಯಾಗಿದ್ದ ಪೀಟರ್ ಬ್ರೂನ್, ಹಿಂದೆ ವಿಶ್ವಸಂಸ್ಥೆಯಲ್ಲಿ ಮಧ್ಯ ಅಮೆರಿಕದ ಶಸ್ತ್ರಾಸ್ತ್ರ ಹತೋಟಿಯ ಕುರಿತು ಕೆಲಸ ಮಾಡಿದವರು. ಅವರ ಮಾರ್ಗದರ್ಶನದಲ್ಲಿ ನ್ಯಾಯಬಾಹಿರ ಶಸ್ತ್ರಾಸ್ತ್ರಗಳನ್ನು ಉತ್ತಮ ಕೆಲಸಕ್ಕೆ ಪರಿವರ್ತಿಸಬಾರದೇಕೆ ಎಂದು ಸಂಸ್ಥೆ ಮುಂದೆ ಹೆಜ್ಜೆ ಇಟ್ಟಿತು.

ಅಕ್ರಮವಾಗಿ ಬಳಸಲಾಗುವ ಶಸ್ತ್ರಾಸ್ತ್ರಗಳನ್ನು ಸರಕಾರ, ಸೈನ್ಯಗಳು ವಶಪಡಿಸಿಕೊಂಡ ನಂತರ ಅವುಗಳನ್ನು ಕರಗಿಸಿದಾಗ ಹೊರಬರುವ ಲೋಹವೇ ‘ಹ್ಯುಮಾನಿಯಂ’ ಲೋಹ. ಶಾಂತಿಯುತ ಬಳಕೆಯ ಉತ್ಪನ್ನಗಳಾಗಿ ಆ ಲೋಹವನ್ನು ಉಪಯೋಗಿಸಲಾಗುತ್ತದೆ. ಹಿಂಸೆಗೆ ಕಾರಣವಾಗುವ ಸಾಧನಗಳು ಶಾಂತಿಯ ಸಂಕೇತವಾಗುವ ವಸ್ತುಗಳಾಗಿ ರೂಪಾಂತರಗೊಳ್ಳುತ್ತವೆ.

ಮೊದಲ ಪ್ರಯತ್ನ ಎಲ್ ಸೆಲ್ವಡಾರ್ ದೇಶದಲ್ಲಿ ನಡೆಯಿತು. 2015ರಲ್ಲಿ ಆ ದೇಶದಲ್ಲಿ ಗುಂಪು ದಂಗೆಯಲ್ಲಿ ಅಪಾರ ಸಾವು ನೋವುಗಳುಂಟಾಗಿತ್ತು. 1825 ಬಂದೂಕುಗಳನ್ನು ವಶಪಡಿಸಿಕೊಂಡು ಅವುಗಳಿಂದ ಲೋಹಭಾಗವನ್ನು ಬೇರ್ಪಡಿಸಲಾಯಿತು. ನಂತರ ಗ್ವಾಟೆಮಾಲಾ, ಝಾಂಬಿಯ ಒಂದೊಂದಾಗಿ ಅಕ್ರಮ ಶಸ್ತ್ರಾಸ್ತ್ರಗಳಿಂದ ತೊಂದರೆಗೊಳಗಾದ ದೇಶಗಳು ಅವುಗಳ ಉದ್ದೇಶ ಪರಿವರ್ತನೆಗೆ ಮುಂದೆ ಬಂದವು. ಮುಂದೆ ಅಮೆರಿಕ ದೇಶವೂ ಈ ಅಭಿಯಾನದಲ್ಲಿ ಪಾಲ್ಗೊಂಡಿತು. 2025ರಲ್ಲಿ ಮಲಾವಿ ದೇಶ 700 ಆಯುಧಗಳನ್ನು ನಾಶಪಡಿಸಿದೆ.

ಈ ಶಸ್ತ್ರಾಸ್ತ್ರಗಳಲ್ಲಿ ಶೇ. 95ರಷ್ಟು ಭಾಗ ಕಬ್ಬಿಣದ ಅಂಶವಿರುತ್ತದೆ. ವಶಪಡಿಸಿಕೊಂಡ ನಂತರ ಅವುಗಳನ್ನು ಕರಗಿಸಿ ತಂತಿ, ಸರಳು ಅಥವಾ ಗುಂಡುಗಳ ರೂಪಕ್ಕೆ ಮಾರ್ಪಡಿಸಲಾಗುತ್ತದೆ. ಅದನ್ನು ಸ್ವೀಡನ್ನಿಗೆ ಕಳಿಸಲಾಗುತ್ತದೆ. IM ಸಂಸ್ಥೆ ಅವುಗಳು ಮರುಬಳಕೆಯ ಲೋಹವೇ ಎಂದು ಖಚಿತಪಡಿಸಿಕೊಂಡು ಸಾಮಾಜಿಕ ಬದ್ಧತೆಯುಳ್ಳ ಕಂಪನಿಗಳಿಗೆ ಕಳಿಸುತ್ತದೆ. ಅಲ್ಲಿ ಅವು ಪೆನ್, ಗಡಿಯಾರ, ಆಭರಣ, ಬುಗುರಿ, ಕೆಲವೊಮ್ಮೆ ಕಲಾಕೃತಿ ಹೀಗೆ ವಿಧವಿಧದ ವಸ್ತುಗಳಾಗಿ ರೂಪಾಂತರಗೊಳ್ಳುತ್ತವೆ. ಸ್ಮಾರ್ಟ್ಫೋನ್ಗಳ ಹೊರಕವಚವಾಗಿ ಹಾಗೂ ಇನ್ನೂ ಹತ್ತಾರು ವಸ್ತುಗಳ ತಯಾರಿಕೆಗೆ ಈ ಲೋಹವನ್ನು ಬಳಸಲು ತಯಾರಿ ನಡೆದಿದೆ.

ಹ್ಯುಮಾನಿಯಂ ಲೋಹದಿಂದ ತಯಾರಿಸಲಾದ ಉತ್ಪನ್ನಗಳನ್ನು ಮಾರಾಟ ಮಾಡಿ, ಬಂದ ಹಣವನ್ನು ಸಮಾಜದಲ್ಲಿ ಹಿಂಸೆಯಿಂದ ಬಾಧಿತರಾದವರಿಗೆ ನೆರವು ನೀಡಲು ಬಳಸಲಾಗುತ್ತದೆ. ಈ ನಿಧಿಯಿಂದ ಯುವಕರಿಗೆ ಶಿಕ್ಷಣ, ಉದ್ಯೋಗಾವಕಾಶ, ಮನೋವೈದ್ಯಕೀಯ ನೆರವು ಮತ್ತು ಶಾಂತಿಯ ಸಂದೇಶವನ್ನು ಹರಡುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಹೀಗಾಗಿ ಈ ಲೋಹವು ಕೇವಲ ವಸ್ತುವಲ್ಲ, ಅದು ಒಂದು ಮಾನವೀಯ ಚಳವಳಿ.

ಹೀಗೆ ಮಾಡುವುದರಿಂದ ಚಲಾವಣೆಯಲ್ಲಿರುವ ಆಯುಧಗಳು ಶಾಶ್ವತವಾಗಿ ಕಣ್ಮರೆಯಾಗುತ್ತವೆ. ಮುಂದೆಂದೂ ಅವು ಯಾರ ಕೈಗೂ ಸಿಗುವುದಿಲ್ಲ, ಆಯುಧಗಳ ಹತೋಟಿ ಮತ್ತು ಸುರಕ್ಷತೆ ಇವುಗಳ ಬಗ್ಗೆ ಜಾಗತಿಕ ಆಂದೋಲನವೊಂದು ಆರಂಭವಾದಂತಾಗುತ್ತದೆ.

2030ರೊಳಗೆ ‘ಸುಸ್ಥಿರ ಅಭಿವೃದ್ಧಿ ಗುರಿ’ ಹೊಂದಿದ ವಿಶ್ವಸಂಸ್ಥೆಯ ಕಾರ್ಯಸೂಚಿಯಲ್ಲಿ ಸಮೂಹನಾಶಕ ಶಸ್ತ್ರಾಸ್ತ್ರಗಳ ಕೊನೆ ಕೂಡ ಸೇರಿದೆ. ನ್ಯೂಯಾರ್ಕ್ ನಗರದಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಕಟ್ಟಡದಲ್ಲಿ ನಳಿಕೆಗೆ ಗಂಟು ಹಾಕಿದ ರಿವಾಲ್ವರ್ನ ಬೃಹತ್ ಪ್ರತಿಕೃತಿಯೊಂದು ಪ್ರದರ್ಶನಕ್ಕಿದೆ. ‘ಹಿಂಸೆ ಬೇಡ’ ಎಂಬುದರ ಸೂಚಕವಾಗಿ ನಾನ್ ವಯೊಲೆನ್ಸ್ ಸಂಸ್ಥೆ ಸ್ಥಾಪಿಸಿದ ಲೋಹದ ಕೃತಿ ಅದು. ಕಳೆದ ಎಂಬತ್ತರ ದಶಕದಲ್ಲಿ ರಾಕ್ ಸಿಂಗರ್ ಆಗಿ ಜನಪ್ರಿಯರಾಗಿದ್ದ ಇಂಗ್ಲೆಂಡ್ನ ಜಾನ್ ಲೆನ್ನನ್ ಭಯೋತ್ಪಾದಕನ ಗುಂಡಿಗೆ ಬಲಿಯಾದರು. ಅವರ ಹತ್ಯೆ ಪ್ರಕರಣದ ನೆನಪಿಗಾಗಿ ತುದಿಯಲ್ಲಿ ಗಂಟು ಹಾಕಿದ ಬಂದೂಕಿನ ಚಿತ್ರವನ್ನು ಕಲಾವಿದ ಕಾರ್ಲ್ ಫ್ರೆಡ್ರಿಕ್ ನಿರ್ಮಿಸಿದ. ಆ ಸಂಸ್ಥೆಯ ಜೊತೆ ಕೈ ಜೋಡಿಸಿದ ಸ್ವೀಡಿಷ್ ಐಎಮ್ ಇದುವರೆಗೆ ಅಂಥ ಗಂಟು ಹಾಕಿದ ನೂರೈವತ್ತು ಬಂದೂಕು ಕೃತಿಗಳನ್ನು ಹ್ಯುಮಾನಿಯಂ ಲೋಹದಿಂದ ತಯಾರಿಸಿಕೊಟ್ಟಿದೆ. ‘ಪರ್ಯಾಯ ನೊಬೆಲ್’ ಎಂದೇ ಹೆಸರಾದ ರೈಟ್ ಲೈವ್ಲಿಹುಡ್ ಪಾರಿತೋಷಕವನ್ನು 2020ರಿಂದ ಹ್ಯುಮಾನಿಯಂ ಲೋಹ ಬಳಸಿ ತಯಾರಿಸಲಾಗುತ್ತಿದೆ.

ದಲಾಯಿ ಲಾಮಾ, ಮಾನವ ಹಕ್ಕುಗಳ ಹೋರಾಟಗಾರ ಡೆಸ್ಮಂಡ್ ಟುಟು ಮುಂತಾದ ಜಗತ್ತಿನ ಅನೇಕ ಗಣ್ಯರು ಹ್ಯುಮಾನಿಯಂ ಲೋಹವನ್ನು ಮೆಚ್ಚಿದ್ದಾರೆ. ‘ಹಿಂಸೆಯಿಂದ ಶಾಂತಿಗೆ’ ಎಂಬ ಮಾನವೀಯ ಸಂದೇಶವನ್ನು ಹ್ಯುಮಾನಿಯಂ ಜಗತ್ತಿಗೆ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.