ಗುರುವಾರ , ಮೇ 26, 2022
25 °C
ಉದುರುತ್ತಿರುವ ಕಾಫಿ ಕಾಯಿ, ಕಾಫಿ ಬೆಳೆಗಾರರು ಕಂಗಾಲು

ತೇವಾಂಶ ಹೆಚ್ಚಳ: ಕಾಫಿ ಫಸಲು ನಷ್ಟದ ಭೀತಿ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗಿನಲ್ಲಿ ಕಳೆದ ವಾರ ಸುರಿದ ನಿರಂತರ ಮಳೆಯಿಂದ ತೇವಾಂಶ ಹೆಚ್ಚಿದ್ದು ಕಾಫಿ ಕಾಯಿಗಳು ಹಣ್ಣಾಗುವ ಮೊದಲೇ ಉದುರುತ್ತಿವೆ. ಈ ವರ್ಷವೂ ಕಾಫಿ ಬೆಳೆಗಾರರು ನಷ್ಟದ ಭೀತಿಯಲ್ಲಿದ್ದಾರೆ.

ಕಳೆದ ವರ್ಷ ಅರೇಬಿಕಾ, ರೋಬಸ್ಟಾ ಕಾಫಿ ಧಾರಣೆ ಏರಿಕೆಯಾಗಿ ಅಲ್ಪ ಸ್ವಲ್ಪ ಆದಾಯ ಲಭಿಸಿತ್ತು. ಆದರೆ, ಈ ವರ್ಷ ಸುರಿಯುತ್ತಿರುವ ವಿಪರೀತ ಮಳೆಯಿಂದ, ಕಾಫಿ ಕೊಯ್ಲು ವೇಳೆಗೆ ಫಸಲೇ ಇಲ್ಲವಾಗುವ ಆತಂಕ ಮೂಡಿದೆ. ಭಾಗಮಂಡಲ, ಚೇರಂಬಾಣೆ, ಬಕ್ಕ, ಕೊಳಕೇರಿ, ಶ್ರೀಮಂಗಲ, ಶಾಂತಳ್ಳಿ, ಗರ್ವಾಲೆ, ಸೂರ್ಲಬ್ಬಿ, ಪೊನ್ನಂಪೇಟೆ, ಮಾದಾಪುರ ಭಾಗದಲ್ಲಿ ವಾಡಿಕೆಗೂ ಹೆಚ್ಚು ಮಳೆಯಾಗಿದೆ. ಕಾವೇರಿ, ಲಕ್ಷ್ಮಣತೀರ್ಥ ನದಿಯ ತಟದ ತೋಟಗಳಲ್ಲಿ ನೀರು ಸಂಗ್ರಹಗೊಂಡಿದ್ದು, ಗಿಡಗಳು ಕೊಳೆಯುವ ಸನ್ನಿವೇಶವೂ ಎದುರಾಗಲಿದೆ. ಮುಂದೆಯೂ ಮಳೆ ಬಂದರೆ ಕಾಳು ಮೆಣಸಿನ ಬಳ್ಳಿಗಳೂ ಕೊಳೆರೋಗಕ್ಕೆ ತುತ್ತಾಗಲಿವೆ’ ಎಂದು ಚೇರಂಬಾಣೆಯ ಮನು ಸೋಮಯ್ಯ ವಿಷಾದಿಸಿದರು.

‘ಬಿಳಿಕಾಂಡ ರೋಗ, ಕಾಡಾನೆ ಹಾವಳಿ ನಡುವೆಯೂ ಕೊಡಗಿನಲ್ಲಿ ಕಾಫಿ ಬೆಳೆಯುವುದು ಸವಾಲು. ಈ ನಡುವೆ ನಾಲ್ಕು ವರ್ಷಗಳಿಂದ ಮಳೆ ಕಾಡುತ್ತಿದೆ. ನವೆಂಬರ್, ಡಿಸೆಂಬರ್‌ಗೆ ಕಾಫಿ ಕೊಯ್ಲಿ ಬರುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ಅಲ್ಲಿಯ ತನಕ ಫಸಲನ್ನು ಕಾಪಾಡಿಕೊಳ್ಳುವುದು ಕಷ್ಟ’ ಎಂದು ನೋವು ತೋಡಿಕೊಂಡರು.

‘ಹಿಂದೆಲ್ಲಾ ಮೂರು ತಿಂಗಳು ನಿಧಾನವಾಗಿ ಮಳೆ ಸುರಿಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಒಮ್ಮೆಲೇ ಮಳೆ ಸುರಿದು, ಜಲಪ್ರಳಯವೇ ಸೃಷ್ಟಿಯಾಗುತ್ತಿದೆ. ಒಂದು ತಿಂಗಳು ಸುರಿಯಬೇಕಿದ್ದ ಮಳೆಯು ಕೇವಲ ಐದೇ ದಿನ ಸುರಿದು, ಕಣ್ಣೀರು ಉಳಿಸಿ ಹೋಗುತ್ತಿದೆ. ಬಿರುಗಾಳಿಗೆ ತೋಟದಲ್ಲಿ ಸಾವಿರಾರು ಮರಗಳು ಬಿದ್ದಿವೆ. ಸಿಲ್ವರ್‌ ಮರ ಹಾಗೂ ಕಾಡು ಜಾತಿಯ ಮರಗಳನ್ನು ಮಾರಾಟ ಮಾಡಿ ಮನೆ ನಿರ್ಮಾಣ, ಮದುವೆ ಕಾರ್ಯವನ್ನು ರೈತರು ನಡೆಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಮುಂಗಾರು ಮಳೆ, ಬೆಳೆಗಾರರ ಬದುಕಿನ ಚಿತ್ರಣವನ್ನೇ ಬದಲಾಯಿಸಿದೆ’ ಎಂದು ಸೋಮವಾರಪೇಟೆಯ ಕೃಷಿಕ ಮನೋಜ್‌ ಹೇಳುತ್ತಾರೆ.

‘ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಇದುವರೆಗೆ 47 ಮನೆಗಳು ಕುಸಿದಿದೆ. 6 ಜಾನುವಾರು ಸಾವನ್ನಪ್ಪಿವೆ. ವೃದ್ಧ
ರೊಬ್ಬರು ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ತಿಳಿಸಿದ್ದಾರೆ. ‘ಮಳೆಯಿಂದ ಅಲ್ಲಲ್ಲಿ ರಸ್ತೆಗಳೂ ಹಾಳಾಗಿವೆ. ಬೆಳೆ ಹಾನಿ ಸಮೀಕ್ಷೆ ನಡೆಯುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು