ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಉತ್ಪನ್ನಗಳಿಂದ ಕೈಗಾರಿಕೆಮೇಲೆ ದುಷ್ಪರಿಣಾಮ:‘ಫಿಕ್ಕಿ’ವರದಿ

Last Updated 8 ನವೆಂಬರ್ 2018, 20:15 IST
ಅಕ್ಷರ ಗಾತ್ರ

ನವದೆಹಲಿ: ನಕಲಿ ಉತ್ಪನ್ನಗಳು ದೇಶಿ ಕೈಗಾರಿಕಾ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಏಳು ಪ್ರಮುಖ ವಲಯಗಳಲ್ಲಿನ ನಷ್ಟದ ಮೊತ್ತ ₹ 1.05 ಲಕ್ಷ ಕೋಟಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಮತ್ತು ಅದರ ಕಳ್ಳಸಾಗಣೆ ತಡೆ ಹಾಗೂ ನಕಲಿ ಉತ್ಪನ್ನ ತಡೆ ಘಟಕವು ಜಂಟಿಯಾಗಿ ಸಿದ್ಧಪಡಿಸಿದ ವರದಿಯಲ್ಲಿ ಈ ವಿವರಗಳಿವೆ. ಕಾನೂನುಬಾಹಿರವಾಗಿ ನಡೆಯುವ ಇಂತಹ ಚಟುವಟಿಕೆಗಳಿಂದ ಸರ್ಕಾರದ ವರಮಾನಕ್ಕೂ ಖೋತಾ ಬೀಳಲಿದೆ. ಏಳು ಕೈಗಾರಿಕಾ ವಲಯಗಳಿಂದ ಬೊಕ್ಕಸಕ್ಕೆ ₹ 39,239 ಕೋಟಿ ನಷ್ಟ ಉಂಟಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಿವಿಧ ಸರಕುಗಳ ನಕಲಿ ತಯಾರಿಕೆಯು ದೇಶದಾದ್ಯಂತ ಹಲವಾರು ವಲಯಗಳಲ್ಲಿ ವ್ಯಾಪಕವಾಗಿ ಹಬ್ಬಿದೆ. ಕಾನೂನುಬಾಹಿರ ವಹಿವಾಟು ಮತ್ತು ಕ್ರಿಮಿನಲ್‌ ಸ್ವರೂಪದ ವಾಣಿಜ್ಯ ಚಟುವಟಿಕೆಗಳಿಂದ ಜಾಗತಿಕ ಒಟ್ಟು ಆಂತರಿಕ ಉತ್ಪನ್ನದಲ್ಲಿಯೂ (ಜಿಡಿಪಿ) ಶೇ 8 ರಿಂದ ಶೇ 15ರಷ್ಟು ನಷ್ಟ ತಗುಲಲಿದೆ. ದೇಶಿ ಕೈಗಾರಿಕೆಗೂ ತೀವ್ರ ಸ್ವರೂಪದ ನಷ್ಟ ಉಂಟಾಗಲಿದೆ. ಕಾನೂನುಬದ್ಧವಾದ ಲಕ್ಷಾಂತರ ಉದ್ಯೋಗ ಅವಕಾಶಗಳಿಗೂ ಗಂಡಾಂತರ ತಂದೊಡ್ಡಲಿದೆ.

ವಾಹನ ಬಿಡಿಭಾಗ ತಯಾರಿಕೆ, ಮದ್ಯ, ಕಂಪ್ಯೂಟರ್‌ ಹಾರ್ಡ್‌ವೇರ್‌, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ), ಪ್ಯಾಕೇಜ್ಡ್‌ ಉತ್ಪನ್ನ, ತಂಬಾಕು, ಮೊಬೈಲ್‌ ತಯಾರಿಕಾ ಕ್ಷೇತ್ರದಲ್ಲಿ ನಕಲಿ ಹಾವಳಿ ವ್ಯಾಪಕವಾಗಿದೆ.

ಗರಿಷ್ಠ ದರದ ಸುಂಕ, ಬ್ರ್ಯಾಂಡ್‌ ಪ್ರಜ್ಞೆ, ತಿಳಿವಳಿಕೆ ಅಭಾವ, ಅಗ್ಗದ ಬದಲಿ ಉತ್ಪನ್ನ ಮತ್ತು ಬೇಡಿಕೆ – ಪೂರೈಕೆ ಅಂತರ ಮುಂತಾದವು ವಿದೇಶಿ ಉತ್ಪನ್ನಗಳನ್ನು ದೇಶದ ಒಳಗೆ ಅಕ್ರಮವಾಗಿ ಸಾಗಿಸುವುದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT