ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಿಂದ ಲ್ಯಾಪ್‌ಟಾಪ್, ಪಿ.ಸಿ. ಆಮದು ಇಳಿಕೆ

ಪಿಎಲ್‌ಐ ಯೋಜನೆ ಜಾರಿಯಿರುವಲ್ಲಿ ತಗ್ಗಿದ ಆಮದು * ಜಿಟಿಆರ್‌ಐ ವರದಿ
Published 16 ಮೇ 2023, 16:34 IST
Last Updated 16 ಮೇ 2023, 17:02 IST
ಅಕ್ಷರ ಗಾತ್ರ

ನವದೆಹಲಿ: ಲ್ಯಾಪ್‌ಟಾಪ್‌, ವೈಯಕ್ತಿಕ ಕಂಪ್ಯೂಟರ್‌, ಸೌರಕೋಶಗಳು, ಇಂಟಿಗ್ರೇಟೆಡ್ ಸರ್ಕಿಟ್‌ಗಳಂತಹ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಭಾರತವು ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಮಾಣವು 2022–23ರಲ್ಲಿ ಕಡಿಮೆ ಆಗಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್‌ ಇನಿಷಿಯೇಟಿವ್ (ಜಿಟಿಆರ್‌ಐ) ವರದಿ ಹೇಳಿದೆ.

ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯು ಜಾರಿಯಲ್ಲಿ ಇರುವ ವಲಯದ ಎಲೆಕ್ಟ್ರಾನಿಕ್ ಉತ್ಪನ್ನಗಳ ಆಮದು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದೆ ಎಂದು ಜಿಟಿಆರ್‌ಐ ಹೇಳಿದೆ. ವೈದ್ಯಕೀಯ ಉಪಕರಣಗಳ ಆಮದು 2022–23ರಲ್ಲಿ (2021–22ಕ್ಕೆ ಹೋಲಿಸಿದರೆ) ಶೇಕಡ 13.6ರಷ್ಟು ಕಡಿಮೆ ಆಗಿದೆ.

ಅದೇ ರೀತಿ, ಸೌರಕೋಶಗಳು, ಬಿಡಿಭಾಗಗಳು, ಡಯೋಡ್‌ಗಳ ಆಮದು ಶೇ 70.9ರಷ್ಟು ಕಡಿಮೆ ಆಗಿದೆ. ಲ್ಯಾಪ್‌ಟಾಪ್‌, ಪಿ.ಸಿ. ಆಮದು ಶೇ 23.1ರಷ್ಟು ಕಡಿಮೆ ಆಗಿದೆ. ಮೊಬೈಲ್‌ ಫೋನ್ ಆಮದು ಶೇ 4.1ರಷ್ಟು ಇಳಿಕೆಯಾಗಿದೆ. ಇಂಟಿಗ್ರೇಟೆಡ್ ಸರ್ಕಿಟ್ ಆಮದು ಶೇ 4.5ರಷ್ಟು ಇಳಿಕೆಯಾಗಿದೆ.

ಯೂರಿಯಾ ಮತ್ತು ಇತರ ರಸಗೊಬ್ಬರಗಳ ಆಮದು ಶೇ 26ರಷ್ಟು ಕಡಿಮೆ ಆಗಿದೆ. ಆದರೆ ಲಿಥಿಯಂ ಅಯಾನ್ ಬ್ಯಾಟರಿಗಳ ಆಮದು ಶೇ 96ರಷ್ಟು ಹೆಚ್ಚಾಗಿದೆ.

‘ಭಾರತವು ಚೀನಾದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳಲ್ಲಿ ಇಳಿಕೆಯಾಗಿರುವ ಸೂಚನೆಗಳಿವೆ. ಚೀನಾದಿಂದ ಆಮದಾಗುವ ಎಲೆಕ್ಟ್ರಾನಿಕ್ಸ್ ಉಪಕರಣಗಳ ಪ್ರಮಾಣ ಕಡಿಮೆಯಾಗಿದೆ. ಚೀನಾದಿಂದ ಆಮದಾಗುವ ಎಲ್ಲ ಬಗೆಯ ಉತ್ಪನ್ನಗಳ ಪ್ರಮಾಣದಲ್ಲಿ ಕಡಿಮೆ ಪ್ರಮಾಣದ ಏರಿಕೆ ದಾಖಲಾಗಿದೆ’ ಎಂದು ಜಿಟಿಆರ್‌ಐ ಸಹ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ.

ಕೆಲವು ಉತ್ಪನ್ನಗಳ ಆಮದು ಕಡಿಮೆ ಆಗಿದ್ದರೂ, ಭಾರತವು ಚೀನಾದಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ದೇಶವಾಗಿಯೇ ಮುಂದುವರಿದಿದೆ. 2021–22ರಲ್ಲಿ ಚೀನಾದಿಂದ ಭಾರತಕ್ಕೆ ಆಮದಾಗಿರುವ ಸರಕುಗಳ ಆಮದು ಮೊತ್ತವು ₹7.78 ಲಕ್ಷ ಕೋಟಿ ಇದ್ದಿದ್ದು 2022–23ರಲ್ಲಿ ₹7.48 ಲಕ್ಷ ಕೋಟಿಗೆ ತಗ್ಗಿದೆ.

ಭಾರತವು ಹೆಚ್ಚು ಸರಕು, ಸೇವೆಗಳನ್ನು ರಫ್ತು ಮಾಡುವುದು ಅಮೆರಿಕ, ಯುಎಇ, ನೆದರ್ಲೆಂಡ್ಸ್ ಮತ್ತು ಚೀನಾಕ್ಕೆ. ಮೊದಲ ಮೂರು ದೇಶಗಳಿಗೆ ರಫ್ತು ಹೆಚ್ಚಾಗಿದೆ. ಆದರೆ, ಚೀನಾಕ್ಕೆ ಆಗುವ ರಫ್ತು ತಗ್ಗಿದೆ.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT