ಗುರುವಾರ , ಜೂನ್ 30, 2022
27 °C
'ಬಂಡವಾಳ ಆಕರ್ಷಣೆಯಲ್ಲಿ ಹಿಂದೆ ಬಿದ್ದಿಲ್ಲ'

ರಾಜ್ಯದಲ್ಲಿ ₹1 ಲಕ್ಷ ಕೋಟಿ ಹೂಡಿಕೆ ವಿಶ್ವಾಸ: ಸಿಎಂ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಿದೇಶಿ ಬಂಡವಾಳ ಸೆಳೆಯುವಲ್ಲಿ ಕರ್ನಾಟಕ ಹಿಂದೆ ಬಿದ್ದಿಲ್ಲ. ದಾವೋಸ್‌ನಲ್ಲಿ ಸರ್ಕಾರದ ಜತೆ ಒಪ್ಪಂದ ಆಗಿರುವ ಮತ್ತು ಹೂಡಿಕೆಗೆ ಆಸಕ್ತಿ ತೋರಿಸಿರುವ ಕಂಪನಿಗಳ ಹೂಡಿಕೆಯ ಮೊತ್ತ ಒಟ್ಟು ಸೇರಿಸಿದರೆ ಸುಮಾರು ₹1 ಲಕ್ಷ ಕೋಟಿ ಹೂಡಿಕೆ ಆಗುವ ಸಾಧ್ಯತೆ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಕರ್ನಾಟಕವನ್ನು ಆಂಧ್ರದ ಜತೆಗೆ ಹೋಲಿಸಲು ಸಾಧ್ಯವಿಲ್ಲ. ಬೆಂಗಳೂರು ಅಂತರರಾಷ್ಟ್ರೀಯ ನಗರ. ಇಲ್ಲಿ ಬಂಡವಾಳ ಹೂಡಲು ಸಹಿ ಮಾಡಿರುವ ಕಂಪನಿಗಳೂ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕಂಪನಿಗಳಾಗಿವೆ’ ಎಂದೂ ಅವರು ಹೇಳಿದರು.

ದಾವೋಸ್‌ನ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಂಡು ಶುಕ್ರವಾರ ಮರಳಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘₹1 ಲಕ್ಷ ಕೋಟಿ ಬಂಡವಾಳ ಬರುತ್ತದೆ ಎಂದು ಆಂಧ್ರ ಹೇಳಿಕೊಂಡಿದೆ. ನಮ್ಮಲ್ಲಿ ಹೂಡಿಕೆ ಕಡಿಮೆ ಆಗಿದೆಯೇ’ ಎಂಬ ಪ್ರಶ್ನೆಗೆ, ‘ನಮ್ಮಲ್ಲಿ ₹65 ಸಾವಿರ ಕೋಟಿ ಹೂಡಿಕೆ ಆಗಲಿದೆ. ಸಾಕಷ್ಟು ಕಂಪನಿಗಳು ಒಪ್ಪಂದಕ್ಕೆ ಸಹಿಯನ್ನೂ ಮಾಡಿವೆ’ ಎಂದರು.

‘ಈ ಬಾರಿ ಬೆಂಗಳೂರು ಅಲ್ಲದೆ ರಾಜ್ಯದ ಇತರ ನಗರಗಳಲ್ಲೂ ಹೂಡಿಕೆ ಆಗಲಿದೆ. ಹಿಂದೆ ಹೂಡಿಕೆಗೆ ಹಲವು ಅಡಚಣೆಗಳಿದ್ದವು. ಇದ್ದವು. ನಮ್ಮ ಸರ್ಕಾರ ಅದನ್ನು ನಿವಾರಿಸಿ ಸುಲಲಿತ ವಾಣಿಜ್ಯೋದ್ಯಮಕ್ಕೆ ಅವಕಾಶ ಕಲ್ಪಿಸಿರುವುದನ್ನು ಉದ್ಯಮಿಗಳಿಗೆ ವಿವರಸಲಾಗಿದೆ. ಹಲವು ಉದ್ಯಮಿಗಳು ಹೂಡಿಕೆಗೆ ಮಾಡುವುದಾಗಿ ಉತ್ಸಾಹ ವ್ಯಕ್ತಪಡಿಸಿದ್ದಾರೆ’ ಎಂದು ಬೊಮ್ಮಾಯಿ ಹೇಳಿದರು.

ಬೆಂಗಳೂರಿನಲ್ಲಿ ಮಳೆ ಮತ್ತು ಪ್ರವಾಹದಿಂದ ಸಮಸ್ಯೆ ಆಗುತ್ತಿರುವುದರಿಂದ ಹೂಡಿಕೆಗೆ ತೊಂದರೆ ಆಗಿದೆಯಲ್ಲವೇ ಎಂಬ ಪ್ರಶ್ನೆಗೆ, ದೊಡ್ಡ ನಗರಗಳಲ್ಲಿ ಮಳೆ ಬಂದರೆ ಇದೇ ಸಮಸ್ಯೆ ಇರುತ್ತದೆ. ಜಗತ್ತಿನ ಯಾವುದೇ ನಗರಗಳು ಇದಕ್ಕೆ ಹೊರತಾಗಿಲ್ಲ ಎಂದರು.

ನಗರದಲ್ಲಿ ರಾಜಕಾಲುವೆಗಳನ್ನು ಸರಿಪಡಿಸಲು ನಗರೋತ್ಥಾನ ಯೋಜನೆಯಡಿ ₹6,000 ಕೋಟಿ ಅನುದಾನ ನೀಡಲಾಗುವುದು. ಈ ಮೊತ್ತವನ್ನು ಇದೇ ವರ್ಷ ಖರ್ಚು ಮಾಡಲಾಗುವುದು ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇಂಧನ ಕ್ಷೇತ್ರಕ್ಕೆ ₹50 ಸಾವಿರ ಕೋಟಿ
‘ರೆನ್ಯೂ ಪವರ್‌ ಪ್ರೈ.ಲಿ.ಕಂಪೆನಿ ₹50 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದೆ. 7 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ, ಬ್ಯಾಟರಿ ಸ್ಟೋರೇಜ್‌, ಗ್ರೀನ್ ಹೈಡ್ರೋಜನ್‌ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. 30 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ’ ಎಂದು ಸಿ.ಎಂ ಹೇಳಿದರು.

‘ಮೊದಲ ಹಂತದಲ್ಲಿ ಹಾಲಿ ಯೋಜನೆಗಳಿಗೆ ₹11,900 ಕೋಟಿ ಬಂಡವಾಳ ಹೂಡಿಕೆ ಆಗಲಿದ್ದು, 2 ವರ್ಷದಲ್ಲಿ ಯೋಜನೆಗಳು ಕಾರ್ಯಾರಂಭ ಮಾಡಲಿವೆ. ಎರಡನೇ ಹಂತದಲ್ಲಿ 5 ವರ್ಷದಲ್ಲಿ  ₹37,500 ಕೋಟಿ ಹೂಡಿಕೆ ಆಗಲಿದೆ ಎಂದರು.

ಜ್ಯೂಬಿಲಿಯಂಟ್, ಹಿಟಾಚಿ ಎನರ್ಜಿ, ಸೀಮೆನ್ಸ್, ಅಬ್ ಇನ್ಬೇವ್, ದಸ್ಸಾಲ್ಟ್ ಸಿಸ್ಟಂ, ನೆಸ್ಲೆ , ಆರ್ಸೆಲಾರ್ ಮಿತ್ತಲ್, ಭಾರ್ತಿ ಎಂಟರ್ ಪ್ರೈಸಸ್ ಕೂಡಾ  ಮುಂದೆ ರಾಜ್ಯದಲ್ಲಿ ಬಂಡವಾಳ ಹೂಡಲಿವೆ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು