ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರು ಗಳಿಸುವ ಆದಾಯಕ್ಕೆ ಶೇ 18ರಷ್ಟು ಜಿಎಸ್‌ಟಿ

Last Updated 16 ಫೆಬ್ರುವರಿ 2022, 16:17 IST
ಅಕ್ಷರ ಗಾತ್ರ

ನವದೆಹಲಿ: ಅತಿಥಿ ಉಪನ್ಯಾಸ ನೀಡಿ ಗಳಿಸುವ ಆದಾಯಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಶೇಕಡ 18ರಷ್ಟು ತೆರಿಗೆ ಪಾವತಿಸಬೇಕು ಎಂದು ಎಎಆರ್‌ನ (ಆಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್) ಕರ್ನಾಟಕ ಪೀಠ ಆದೇಶಿಸಿದೆ.

ಅತಿಥಿ ಉಪನ್ಯಾಸ ನೀಡಿ ಗಳಿಸುವ ಆದಾಯವು, ತೆರಿಗೆಗೆ ಅರ್ಹವಾದ ಸೇವೆ ಆಗುತ್ತದೆಯೇ ಎಂಬ ಬಗ್ಗೆ ಅರ್ಜಿದಾರ ಸಾಯಿರಾಮ್ ಗೋಪಾಲಕೃಷ್ಣ ಭಟ್ ಎಂಬುವವರು ಎಎಆರ್‌ನಿಂದ ಸ್ಪಷ್ಟನೆ ಕೋರಿದ್ದರು.

ಅತಿಥಿ ಉಪನ್ಯಾಸವು ತೆರಿಗೆ ವಿನಾಯಿತಿ ಇರುವ ವರ್ಗದ ಅಡಿಯಲ್ಲಿ ಬರುವುದಿಲ್ಲ. ಇತರ ವೃತ್ತಿಗಳು, ತಾಂತ್ರಿಕ ಮತ್ತು ವಾಣಿಜ್ಯ ಸೇವೆಗಳ ವರ್ಗದ ಅಡಿಯಲ್ಲಿ ಇದು ಬರುತ್ತದೆ. ಹಾಗಾಗಿ, ಈ ಸೇವೆಗೆ ಜಿಎಸ್‌ಟಿ ಅಡಿ ಶೇ 18ರಷ್ಟು ತೆರಿಗೆ ಪಾವತಿಸಬೇಕು ಎಂದು ಆದೇಶಿಸಲಾಗಿದೆ.

ಎಎಆರ್‌ ನೀಡಿರುವ ಆದೇಶದ ಅನ್ವಯ, ವಾರ್ಷಿಕವಾಗಿ ₹ 20 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸುವ, ವೃತ್ತಿಪರ ಸೇವೆ ಒದಗಿಸುವವರು ಅತಿಥಿ ಉಪನ್ಯಾಸದಿಂದ ಗಳಿಸುವ ಆದಾಯಕ್ಕೆ ಶೇ 18ರಷ್ಟು ತೆರಿಗೆ ಕೊಡಬೇಕಾಗುತ್ತದೆ.

ಸಂಭಾವನೆ ಪಡೆದು, ಅತಿಥಿ ಉಪನ್ಯಾಸದ ಮೂಲಕ ಜ್ಞಾನವನ್ನು ಹಂಚಿಕೊಳ್ಳುವ ಲಕ್ಷಾಂತರ ಮಂದಿ ಫ್ರೀಲಾನ್ಸಿಗಳಿಗೆ, ಅಕಾಡೆಮಿಕ್ ವಲಯದವರಿಗೆ, ಪ್ರೊಫೆಸರ್‌ಗಳಿಗೆ ಮತ್ತು ಇತರರಿಗೆ ಈ ಆದೇಶವು ಹಲವು ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಎಎಂಆರ್‌ಜಿ ಆ್ಯಂಡ್‌ ಅಸೋಸಿಯೇಟ್ಸ್‌ನ ಹಿರಿಯ ಪಾಲುದಾರ ರಜತ್ ಮೋಹನ್ ಪ್ರತಿಕ್ರಿಯೆ ನೀಡಿದರು.

‘ಅರೆಕಾಲಿಕ ತರಬೇತಿದಾರರಾಗಿ ಕೆಲಸ ಮಾಡುತ್ತಿರುವವರು ಕೂಡ ತಾವು ಪಾವತಿಸಬೇಕಿರುವ ಜಿಎಸ್‌ಟಿ ಮೊತ್ತವನ್ನು ಪರಿಶೀಲಿಸಬೇಕಾಗುತ್ತದೆ’ ಎಂದು ಮೋಹನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT