ಇನ್‌ಕಂ ಟ್ಯಾಕ್ಸ್‌ ಗರಿಷ್ಠ ಉಳಿತಾಯ ಹೇಗೆ?

ಬುಧವಾರ, ಮಾರ್ಚ್ 27, 2019
26 °C

ಇನ್‌ಕಂ ಟ್ಯಾಕ್ಸ್‌ ಗರಿಷ್ಠ ಉಳಿತಾಯ ಹೇಗೆ?

Published:
Updated:

ಕೇಂದ್ರ ಸರ್ಕಾರ ಮಂಡಿಸಿದ 2019–20ನೆ ಹಣಕಾಸು ವರ್ಷದ ಮಧ್ಯಂತರ ಬಜೆಟ್, ಪೂರ್ಣ ಪ್ರಮಾಣದ ಬಜೆಟ್ ಆಗಿಲ್ಲ. ಆದರೆ, ವೈಯಕ್ತಿಕ ಆದಾಯ ತೆರಿಗೆ ಪಾವತಿಸುವವರ ಪಾಲಿಗೆ ಇದು ಅನೇಕ ಆಶಾದಾಯಕ ಕೊಡುಗೆಗಳನ್ನು ಹೊಂದಿದೆ. ಸರಿಯಾದ ತೆರಿಗೆ ನಿರ್ವಹಣೆ ಹಾಗೂ ತೆರಿಗೆ ವಿನಾಯ್ತಿ ಸಿಗುವ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಸಕಾಲಿಕವಾಗಿ ಹೂಡಿಕೆ ಮಾಡುವುದರಿಂದ ಸರ್ಕಾರ ನಿಗದಿ ಮಾಡಿರುವ ₹ 5 ಲಕ್ಷ ಆದಾಯ ಮಿತಿಗಿಂತ ದುಪ್ಪಟ್ಟು ಆದಾಯ ಉಳ್ಳವರೂ ಕಟ್ಟಬೇಕಾದ ತೆರಿಗೆ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಬಹುದು.

ಯಾವತ್ತೂ ತೆರಿಗೆ ಪಾವತಿಸಬೇಕಾದ ಮೊತ್ತ ನಿರ್ಧಾರವಾಗುವುದು ’ನಿವ್ವಳ ಆದಾಯ’ದ ಮೇಲೆಯೇ ಹೊರತು ವ್ಯಕ್ತಿಯೊಬ್ಬನಿಗೆ ವರ್ಷಕ್ಕೆ ಸಿಗುವ ಒಟ್ಟು ಆದಾಯದ ಮೇಲಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯಾಗಿರುತ್ತದೆ. ಹೀಗಾಗಿ ಈ ನಿವ್ವಳ ಆದಾಯವನ್ನು ನಿರ್ಧರಿಸುವ ಮೊದಲು ಆದಾಯದಲ್ಲಿ ಈಗಾಗಲೇ ಒಳಗೊಂಡಿರುವ ಹಲವಾರು ತೆರಿಗೆ ಮುಕ್ತ ಭತ್ಯೆಗಳನ್ನು ಕೈಬಿಟ್ಟು ಈ ಮೊತ್ತ ಲೆಕ್ಕಹಾಕಬೇಕು. ಉದಾಹರಣೆಗೆ, ಈ ತನಕ ₹ 40,000 ಗಳಷ್ಟಿದ್ದ ಮೂಲ ವಿನಾಯ್ತಿ ಮೊತ್ತವನ್ನು ₹ 50,000 ಕ್ಕೆ ಏರಿಸಲಾಗಿದೆ. ಮನೆ ಬಾಡಿಗೆಗೆ ಸಂಬಂಧಪಟ್ಟ ವಿನಾಯ್ತಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಮಾಸಿಕ ಭತ್ಯೆ ಪ್ರತಿ ಮಗುವಿಗೆ ₹ 100 ರಂತೆ, ಹೀಗೆ ಎಲ್ಲ ರೀತಿಯ ತೆರಿಗೆ ಮುಕ್ತ ಭತ್ಯೆಗಳನ್ನೂ ಒಟ್ಟು ವೇತನ ಆದಾಯದಿಂದ ಕಳೆಯಬೇಕಾಗುತ್ತದೆ.

ಈ ಎಲ್ಲ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡು, ಮಾಸಿಕ ವೇತನ ಪಡೆಯುವ ಒಬ್ಬ ವ್ಯಕ್ತಿಯ ಆದಾಯವನ್ನು ಇಲ್ಲಿ ಕೊಟ್ಟಿರುವ ಪಟ್ಟಿಯಲ್ಲಿ ಸೂಚಿಸಿದಂತೆ ಉದಾಹರಣೆಗಾಗಿ ಲೆಕ್ಕ ಹಾಕಬಹುದು.

ಸೆಕ್ಷನ್ 80 TTA ಯ ಅಡಿ ನಿಗದಿಪಡಿಸಿದ್ದ ₹ 10,000 ದಷ್ಟು ಬಡ್ಡಿ ಮೊತ್ತಕ್ಕೂ ತೆರಿಗೆ ಇರುವುದಿಲ್ಲ ಎನ್ನುವ ಅಂಶ ಎಲ್ಲರಿಗೂ ತಿಳಿದೇ ಇದೆ. ಅದೇ ರೀತಿ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ತಪಾಸಣೆಗೋಸ್ಕರ ವ್ಯಯಿಸುವ ₹ 5,000 ಹಾಗೂ ಆರೋಗ್ಯ ವಿಮೆ ಪಾವತಿಗಾಗಿ ವಾರ್ಷಿಕವಾಗಿ ₹ 25,000 ರಿಂದ ₹ 50,000 ಮೊತ್ತವೂ ವಿನಾಯ್ತಿಯಾಗಿ ಸಿಗುತ್ತದೆ.

ಇಷ್ಟೇ ಅಲ್ಲದೆ ಸ್ವಂತ ಮನೆ ಕಟ್ಟಲು ಬ್ಯಾಂಕ್ ಸಾಲದ ಮೇಲೆ ಪಾವತಿಸುವ ವಾರ್ಷಿಕ ಬಡ್ಡಿ ಮೊತ್ತ ₹ 2 ಲಕ್ಷ ಹಾಗೂ ಕೆಲವು ನಿರ್ದಿಷ್ಟ ಅಂಶಗಳು ಕೂಡಿಬಂದರೆ ಹೆಚ್ಚುವರಿ ₹ 50,000 ದಷ್ಟು ಬಡ್ಡಿ ಮೊತ್ತವನ್ನು ಸೆಕ್ಷನ್ 80EE ಅಡಿ ವಿನಾಯ್ತಿಯಾಗಿ ನೀಡಲಾಗುತ್ತದೆ. ಇದು ವ್ಯಕ್ತಿಯೊಬ್ಬನಿಗೆ ಸಿಗುವ ವಿನಾಯ್ತಿ ಆಗಿರುವುದರಿಂದ ಕೂಡು ಸಾಲದ ಮೇಲೆ ಗಂಡ-ಹೆಂಡತಿ ಇಬ್ಬರೂ ಪ್ರತ್ಯೇಕ ವಿನಾಯ್ತಿ ಪಡೆಯಲು ಅರ್ಹರಾಗಿರುತ್ತಾರೆ.

ತೆರಿಗೆದಾರನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಸ್ವಂತ ವಿದ್ಯಾಭ್ಯಾಸಕ್ಕಾಗಿ ಅಥವಾ ಜೀವನ ಸಂಗಾತಿಯ ಶಿಕ್ಷಣಕ್ಕಾಗಿ ತೆರುವ ಸಾಲದ ವಾರ್ಷಿಕ ಬಡ್ಡಿ ಮೊತ್ತಕ್ಕೂ ಆದಾಯ ತೆರಿಗೆ ಸೆಕ್ಷನ್ 80E ಯಡಿ ವಿನಾಯ್ತಿ ಇದೆ. ಇಷ್ಟೇ ಅಲ್ಲದೆ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ತನ್ನ ಕುಟುಂಬದ ಸದಸ್ಯರೊಡನೆ ಪ್ರವಾಸ ಕೈಗೊಳ್ಳುವುದಕೋಸ್ಕರ ವ್ಯಯಿಸುವ ಪ್ರಯಾಣದ ಖರ್ಚನ್ನೂ ಈ ಅವಧಿಯಲ್ಲಿ ಯಾವುದೇ ಎರಡು ವರ್ಷ ಪ್ರತ್ಯೇಕವಾಗಿ ಪಡೆಯಬಹುದಾಗಿದೆ.

ಪಟ್ಟಿಯಲ್ಲಿ ಸೂಚಿಸಿದ ಸಂಗತಿಗಳಷ್ಟೇ ಅಲ್ಲದೆ, ತೆರಿಗೆದಾರನ ಸಂಬಂಧಿಕರು ದುರದೃಷ್ಟವಶಾತ್ ಕೆಲವು ನಿಗದಿತ ಕಾಯಿಲೆಗಳನ್ನು ಹೊಂದಿದ್ದರೆ ಅಥವಾ ಅಂಗವಿಕಲರಾಗಿದ್ದರೆ ಅವರ ಕಾಯಿಲೆ, ವೈಕಲ್ಯದ ಪ್ರಮಾಣಕ್ಕೆ ಹೊಂದಿಕೊಂಡು ₹ 75,000 ದಿಂದ ₹ 1,25,000 ರಷ್ಟು ಮೊತ್ತವನ್ನು ಅವರ ಪೋಷಣೆಗೋಸ್ಕರ ಮೇಲೆ ಸೂಚಿಸಿದ ಮೊತ್ತಕ್ಕಿಂತ ಹೆಚ್ಚುವರಿಯಾಗಿ ತೆರಿಗೆ ವಿನಾಯ್ತಿ ಪಡೆಯಬಹುದಾಗಿದೆ. ಹೀಗಾಗಿ ಇನ್ನಷ್ಟು ಆದಾಯವಿದ್ದರೂ ಈ ಮೇಲಿನ ಸಂದರ್ಭಗಳಲ್ಲಿ ಅದೂ ವಿನಾಯ್ತಿ ಲೆಕ್ಕಕ್ಕೆ ಪರಿಗಣಿಸಲಾಗುತ್ತದೆ.

ಕಳೆದ ಆರ್ಥಿಕ ಸಾಲಿನ ಮಾಹಿತಿಯ ಪ್ರಕಾರ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 7 ಕೋಟಿಗಳಷ್ಟು ಜನ ತೆರಿಗೆ ವ್ಯಾಪ್ತಿಯಲ್ಲಿದ್ದಾರೆ. ಇವರಲ್ಲಿ 5 ಕೋಟಿಗಳಷ್ಟು ಮಂದಿ ಆದಾಯ ತೆರಿಗೆ ವರದಿಯನ್ನು ಸಲ್ಲಿಸುತ್ತಿದ್ದಾರೆ. ಈ ವರ್ಗದಲ್ಲಿ ಶೇಕಡಾ 90 ರಷ್ಟು ಮಂದಿಯೂ ವಾರ್ಷಿಕವಾಗಿ ಹತ್ತು ಹನ್ನೆರಡು ಲಕ್ಷ ರೂಪಾಯಿಗಳಿಗಿಂತ ಕೆಳಗಿನ ಮೊತ್ತದ ಆದಾಯ ಹೊಂದಿರುವವರು.

ಈ ಎಲ್ಲ ವಿಚಾರಗಳನ್ನು ಪರಿಗಣಿಸಿದಾಗ 30 ರಿಂದ 60ರ ಒಳಗಿನ ವಯೋಮಾನದ, ಮಾಸಿಕ ₹ 1 ಲಕ್ಷ ಆದಾಯ ಪಡೆಯುವ ಯಾವುದೇ ವ್ಯಕ್ತಿಯೂ ಮೇಲಿನ ಎಲ್ಲ ಸಂದರ್ಭಗಳಲ್ಲಿ ಒಳಪಡುವುದಾದರೆ ಗರಿಷ್ಠ ತೆರಿಗೆ ಹೊರೆಯನ್ನು ಉಳಿಸಬಹುದು ಎನ್ನುವುದು ಸಾಬೀತಾಗುತ್ತದೆ.

(ಲೇಖಕ: ಆದಾಯ ತೆರಿಗೆ ಲೆಕ್ಕಪತ್ರ ತಪಾಸಿಗ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !