ಗುರುವಾರ , ಡಿಸೆಂಬರ್ 3, 2020
23 °C
ತೇವಾಂಶ ಹೆಚ್ಚಳ: ನಷ್ಟದ ಭೀತಿಯಲ್ಲಿ ಬೆಳೆಗಾರರು

ಕಾಫಿ, ಕಾಳುಮೆಣಸಿಗೆ ಕೊಳೆರೋಗ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿ ಗಿಡ ಹಾಗೂ ಕಾಳುಮೆಣಸಿನ ಬಳ್ಳಿಗಳಿಗೆ ಕೊಳೆರೋಗ ತಗುಲಿದ್ದು ಎಲೆಗಳು ಉದುರಲು ಆರಂಭಿಸಿವೆ.

ಭಾರಿ ಮಳೆಗೆ ಗಿಡದಲ್ಲಿ ಹೀಚು ಕಟ್ಟಿರುವ ಕಾಫಿ ಕಾಯಿ ಮಣ್ಣು ಪಾಲಾಗುತ್ತಿದೆ. ಇನ್ನು ಕಾಳುಮೆಣಸಿನ ಬಳ್ಳಿಗಳಿಗೂ ತೇವಾಂಶ ಹೆಚ್ಚಾಗಿ ಹಳದಿ ಬಣ್ಣಕ್ಕೆ ತಿರುಗಿವೆ. ಇನ್ನೊಂದು ವಾರ ಇದೇ ರೀತಿ ಮಳೆಯಾದರೆ ಶೇ 50ರಷ್ಟು ಫಸಲು ನಷ್ಟವಾಗಲಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ನಾಪೋಕ್ಲು, ಭಾಗಮಂಡಲ, ಅಯ್ಯಂಗೇರಿ, ತಣ್ಣಿಮಾನಿ, ಚೆಯ್ಯಂಡಾಣೆ, ಕೊಟ್ಟಮುಡಿ, ಕಕ್ಕಬ್ಬೆ, ಮೂರ್ನಾಡು, ಮಾದಾಪುರ, ಸುಂಟಿಕೊಪ್ಪ, ಕೊಡಗರಹಳ್ಳಿ, ಕಂಬಿಬಾಣೆ ಭಾಗದಲ್ಲಿ ಕೊಳೆರೋಗ ತೀವ್ರವಾಗಿದೆ. ಈ ವರ್ಷ ಫಸಲು ಕೈಗೆ ಸಿಗುವುದೇ ಕಷ್ಟವಾಗಿದೆ ಎಂದು ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಹೇಳುತ್ತಾರೆ.

‘ಹಲವು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ಅರೇಬಿಕಾ, ರೋಬಸ್ಟಾ ಕಾಫಿ ಗಿಡಗಳು ಎಲೆಗಳನ್ನು ಉದುರಿಸಿಕೊಂಡು ನಿಂತಿವೆ. ಹಿಂದಿನ ಎರಡು ವರ್ಷಗಳ ಕಾಲ ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯಾಗಿದ್ದರಿಂದ ಗಿಡಗಳೂ ಆ ತೇವಾಂಶಕ್ಕೆ ಒಗ್ಗಿಕೊಂಡಿದ್ದವು. ಆದರೆ, ಈಗ ವಾಡಿಕೆಗೂ ಅಧಿಕ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿದೆ. ಔಷಧಿ ಸಿಂಪಡಿಸಿ ರೋಗ ಹತೋಟಿಗೆ ತರಲು ಮಳೆ ಬಿಡುವು ನೀಡುತ್ತಿಲ್ಲ. ಔಷಧಿ ಸಿಂಪಡಣೆ ಮಾಡಿದರೆ ಮಳೆಯಲ್ಲಿ ತೊಯ್ದು ನಷ್ಟ ಉಂಟಾಗುತ್ತಿದೆ’ ಎಂದು ನಾಪೋಕ್ಲು ಕಾಫಿ ಬೆಳೆಗಾರರ ತಮ್ಮಯ್ಯ ನೊಂದು ನುಡಿಯುತ್ತಾರೆ.

‘ಕೆಲವು ವರ್ಷಗಳಿಂದ ಜುಲೈನಲ್ಲಿ ಮಳೆ ಅಬ್ಬರ ತೀವ್ರವಾಗುತ್ತಿತ್ತು. ಆದರೆ, ಈ ಬಾರಿ ನಮ್ಮೆಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಿವೆ. ಬೇಸಿಗೆಯಲ್ಲಿ ತೊಂದರೆ ಆಗಲಿದೆ ಎನ್ನುವ ಕಾರಣಕ್ಕೆ ಮರಕಸಿ ಸಹ ಮಾಡಿಸಿರಲಿಲ್ಲ. ತೇವಾಂಶ ಹೆಚ್ಚಾದರೆ ಫಸಲು ಇರಲಿ, ಗಿಡಗಳನ್ನು ಉಳಿಸಿಕೊಳ್ಳುವುದೇ ಸವಾಲು. ಈ ಬಾರಿ ಹಳೆಯ ಮಳೆಗಾಲ ನೆನಪಾಗುತ್ತಿದೆ’ ಎನ್ನುತ್ತಾರೆ ಬೆಳೆಗಾರರು.

ಧಾರಣೆಯೂ ಕುಸಿತ: ಜಿಲ್ಲೆಯ ಪ್ರಮುಖ ಬೆಳೆ ಕಾಫಿ ಹಾಗೂ ಕಾಳುಮೆಣಸು. ಅದನ್ನೇ ನಂಬಿ ರೈತರು ಹಾಗೂ ಸಾವಿರಾರು ಕಾರ್ಮಿಕರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ, ಬೆಲೆ ಕುಸಿತದ ಜತೆಗೆ ಕೊಳೆರೋಗದ ಭೀತಿಯು ಆತಂಕ ತಂದಿದೆ. ವಾಣಿಜ್ಯ ಬೆಳೆಗಳ ಬೆಲೆ ಕಳೆದ ವರ್ಷದಿಂದ ಕುಸಿತದ ಹಾದಿ ಹಿಡಿದಿದ್ದು, ಇನ್ನೂ ಚೇತರಿಕೆ ಕಂಡಿಲ್ಲ. ಪ್ರಸ್ತುತ ಪ್ರತಿ ಕೆ.ಜಿ. ಕಾಳುಮೆಣಸು ₹ 280ಕ್ಕೆ ಬಂದು ನಿಂತಿದೆ. ಎರಡು ವರ್ಷಗಳ ಹಿಂದೆ ₹ 650ರಿಂದ 700 ಬೆಲೆಯಿತ್ತು.

ಅರೇಬಿಕಾ ಹಾಗೂ ರೋಬಸ್ಟಾ ಕಾಫಿ ದರ ಸಹ ಮೇಲೇರುತ್ತಿಲ್ಲ. ಕೊಡಗಿನ ಕಾಳುಮೆಣಸಿಗೆ ದೇಶದಾದ್ಯಂತ ಬೇಡಿಕೆಯಿತ್ತು. ಆದರೆ, ವಿಯೆಟ್ನಾಂನಿಂದ ಕಡಿಮೆ ಬೆಲೆಗೆ ಕಳಪೆ ಗುಣಮಟ್ಟದ ಕಾಳುಮೆಣಸು ತಂದು ಕಲಬೆರಕೆ ಮಾಡುತ್ತಿರುವ ಪರಿಣಾಮ ಬೇಡಿಕೆಯೂ ಕುಸಿದಿದೆ.
**
ಜೂನ್‌ ಮೊದಲ ವಾರ ಆರಂಭವಾಗಿರುವ ಮಳೆ ಇನ್ನೂ ತಗ್ಗಿಲ್ಲ.  ಅಬ್ಬರದ ಗಾಳಿಗೆ ಕಾಫಿ ಗಿಡಗಳು ಅಲುಗಾಡಿ ಬುಡಕ್ಕೆ ನೇರವಾಗಿ ನೀರು ಸೇರಿಕೊಳ್ಳುತ್ತಿದೆ. ಕಾಫಿಯ ಹೀಚು, ಕಾಳುಮೆಣಸಿನ ಕರೆ ನೆಲದ ಪಾಲಾಗುತ್ತಿದೆ.
– ತಿಮ್ಮಯ್ಯ, ಕಾಫಿ ಬೆಳೆಗಾರ, ನಾಪೋಕ್ಲು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು