ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಡ್‌ಬ್ಯಾಂಡ್‌ ಬಳಕೆಯಲ್ಲಿ ಮುಂಚೂಣಿಗೆ ಭಾರತ: ಮುಕೇಶ್ ಅಂಬಾನಿ ಅಭಿಮತ

ರಿಲಯನ್ಸ್ ಇಂಡಸ್ಟ್ರೀಸ್‌ ಮುಖ್ಯಸ್ಥ ಅಭಿಪ್ರಾಯ
Last Updated 25 ಅಕ್ಟೋಬರ್ 2018, 18:45 IST
ಅಕ್ಷರ ಗಾತ್ರ

ನವದೆಹಲಿ:‘ರಿಲಯನ್ಸ್‌ ಜಿಯೊದ ಫೈಬರ್‌ ಆಧಾರಿತ ಬ್ರಾಡ್‌ಬ್ಯಾಂಡ್‌ ಸೇವೆ ಬಳಕೆಗೆ ಬಂದ ನಂತರ ಭಾರತವು ಸ್ಥಿರ ಬ್ರಾಡ್‌ಬ್ಯಾಂಡ್‌ ಬಳಕೆಯಲ್ಲಿ ವಿಶ್ವದ ಮುಂಚೂಣಿ ಮೂರು ದೇಶಗಳಲ್ಲಿ ಒಂದಾಗಲಿದೆ’ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌) ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ.

‘ಸ್ಥಿರ ಬ್ರಾಡ್‌ಬ್ಯಾಂಡ್‌ ಬಳಕೆಯಲ್ಲಿ ಸದ್ಯಕ್ಕೆ ವಿಶ್ವದಲ್ಲಿ 135ನೇ ಸ್ಥಾನದಲ್ಲಿ ಇರುವ ಭಾರತ ಸದ್ಯದಲ್ಲೇ 3ನೇ ಸ್ಥಾನಕ್ಕೆ ಏರಲಿದೆ’ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಮೊಬೈಲ್‌ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.

‘ಮೊಬೈಲ್‌ ಬ್ರಾಡ್‌ಬ್ಯಾಂಡ್‌ ಬಳಕೆಯಲ್ಲಿ 155ನೆ ಸ್ಥಾನದಲ್ಲಿ ಇರುವ ಭಾರತವು ಎರಡು ವರ್ಷಗಳಲ್ಲಿ ಮೊದಲ ಸ್ಥಾನಕ್ಕೆ ಏರಲಿದೆ. ಸಂವಹನ ಮತ್ತು ಕೈಗೆಟುಕುವ ಬೆಲೆ ವಿಷಯದಲ್ಲಿ ಸರಿಸಾಟಿ ಇಲ್ಲದ ಸಮನ್ವಯತೆ ಕಂಡು ಬರಲಿದೆ. ಮೊಬೈಲ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ‘2ಜಿ’, ‘3ಜಿ’ಯಿಂದ ‘4ಜಿ’ಗೆ ವರ್ಗಾವಣೆಗೊಳ್ಳುವ ಪ್ರಕ್ರಿಯೆ ಕ್ಷಿಪ್ರವಾಗಿ ನಡೆಯುತ್ತಿದೆ. ವಿಶ್ವದ ಯಾವುದೇ ಭಾಗದಲ್ಲಿಯೂ ಇಷ್ಟು ವೇಗದಲ್ಲಿ ಬದಲಾವಣೆ ನಡೆಯುತ್ತಿಲ್ಲ. 2020ರ ವೇಳೆಗೆ ದೇಶದಾದ್ಯಂತ ‘4ಜಿ’ ಸೌಲಭ್ಯವು ಸಂಪೂರ್ಣವಾಗಿ ವಿಸ್ತರಣೆಯಾಗಲಿದೆ. ‘5ಜಿ’ಗೆ ಮುನ್ನಡೆಯಲು ಭಾರತವು ಎಲ್ಲರಿಗಿಂತ ಮುಂಚೂಣಿಯಲ್ಲಿ ಇರಲಿದೆ ಎನ್ನುವುದು ತಮ್ಮ ನಂಬಿಕೆಯಾಗಿದೆ’ ಎಂದರು.

‘ಜಿಯೊ ಪ್ರತಿಯೊಬ್ಬರಿಗೆ, ಎಲ್ಲಕಡೆಯೂ, ಪ್ರತಿಯೊಂದರ ಜತೆ ಗರಿಷ್ಠ ವೇಗದ ಸಂಪರ್ಕ ಕಲ್ಪಿಸಿಕೊಡಲಿದೆ. ಅತ್ಯಂತ ಕಡಿಮೆ ಬೆಲೆಗೆ ಗುಣಮಟ್ಟದ ಸೇವೆ ಒದಗಿಸಲಿದೆ. ಜಿಯೊಗೀಗಾಫೈಬರ್‌ ಅಳವಡಿಕೆಯಿಂದಾಗಿ ಸ್ಥಿರ ಮತ್ತು ಮೊಬೈಲ್ ಮೂಲಕ ಗ್ರಾಹಕರು ಗರಿಷ್ಠ ವೇಗದ ಬ್ರಾಡ್‌ಬ್ಯಾಂಡ್‌ ಸೇವೆ ಪಡೆಯಲಿದ್ದಾರೆ’ ಎಂದು ಹೇಳಿದ್ದಾರೆ.

ಅತಿ ಕಡಿಮೆ ಬೆಲೆಗೆ ದತ್ತಾಂಶ ಸೇವೆ ಒದಗಿಸುವ ಮೂಲಕ 2016ರಲ್ಲಿ ದೇಶಿ ದೂರಸಂಪರ್ಕ ಉದ್ದಿಮೆ ಪ್ರವೇಶಿಸಿದ ರಿಲಯನ್ಸ್‌ ಜಿಯೊ, ಈಗ ತನ್ನ ಮಹತ್ವಾಕಾಂಕ್ಷೆಯ ಗರಿಷ್ಠ ವೇಗದ ಫೈಬರ್‌ ಆಧಾರಿತ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಮನೆ ಮತ್ತು ಕಚೇರಿಗಳಿಗೆ ಒದಗಿಸಲು ಮುಂದಾಗಿದೆ.

ಜಿಯೊದ ಪ್ರವೇಶದಿಂದ ದೂರಸಂಪರ್ಕ ಕ್ಷೇತ್ರದಲ್ಲಿ ಭಾರಿ ಸಂಚಲನ ಉಂಟಾಗಿತ್ತು. ಅದರ ಸ್ಪರ್ಧಾತ್ಮಕ ದರಗಳ ಫಲವಾಗಿ ಇತರ ಸಂಸ್ಥೆಗಳೂ ದರ ಇಳಿಸಿದ್ದವು. ಇದರಿಂದ ದೇಶದಲ್ಲಿ ಮೊಬೈಲ್‌ ದತ್ತಾಂಶ ಬಳಕೆಯು ಗಮನಾರ್ಹವಾಗಿ ಹೆಚ್ಚಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT