ನವದೆಹಲಿ: ಕೋವಿಡ್ ಲಸಿಕೆ ನೀಡಿಕೆಯಲ್ಲಿ ಭಾರತವು ತುಂಬಾ ಹಿಂದುಳಿದಿದೆ ಎಂದು ಫಿಚ್ ರೇಟಿಂಗ್ ಸಂಸ್ಥೆ ಹೇಳಿದೆ. ಜಿಡಿಪಿ ಮತ್ತು ಸಾಲದ ಅನುಪಾತ ಹೆಚ್ಚುತ್ತಿರುವುದಾಗಿಯೂ ಹೇಳಿದೆ.
ಸಂಸ್ಥೆಯು ಕಳೆದ ಏಪ್ರಿಲ್‌ನಲ್ಲಿ ಭಾರತಕ್ಕೆ ‘ಬಿಬಿಬಿ ಮೈನಸ್’ ರೇಟಿಂಗ್ ನೀಡಿತ್ತು. ಕೋವಿಡ್ ಬಿಕ್ಕಟ್ಟಿನಿಂದಾಗಿ ಮುನ್ನೋಟವು ಸ್ಥಿರತೆಯಿಂದ ನಕಾರಾತ್ಮಕ ಮಟ್ಟಕ್ಕೆ ಇಳಿಕೆಯಾಗಲಿದೆ ಎಂದು ಕಳೆದ ವರ್ಷ ಜೂನ್‌ನಲ್ಲಿ ಫಿಚ್ ರೇಟಿಂಗ್ ಸಂಸ್ಥೆ ಹೇಳಿತ್ತು. ಸಾಲದ ಪ್ರಮಾಣ ಹೆಚ್ಚಿರುವುದರಿಂದಾಗಿ ವಿತ್ತೀಯ ಹೊಣೆಗಾರಿಕೆ ನಿಭಾಯಿಸಲು ಹೆಚ್ಚಿನ ಸವಾಲಿರುವುದಾಗಿಯೂ ಹೇಳಿತ್ತು.
‘ಜಾಗತಿಕ ಸಾರ್ವಭೌಮ ಸಮಾವೇಶ 2021’ ಉದ್ದೇಶಿಸಿ ಮಾತನಾಡಿದ ಫಿಚ್ ರೇಟಿಂಗ್ಸ್‌ನ ಹಿರಿಯ ನಿರ್ದೇಶಕ, ಏಷ್ಯಾ ಪೆಸಿಫಿಕ್ ಸವರಿನ್ ರೇಟಿಂಗ್ಸ್‌ನ ಮುಖ್ಯಸ್ಥ ಸ್ಟೀಫನ್ ಶಾರ್ಟ್ಜ್, ವಿಶ್ವದಾದ್ಯಂತ ಆರ್ಥಿಕ ಚೇತರಿಕೆಗೆ ಲಸಿಕೆ ನೀಡಿಕೆಯೊಂದೇ ಪ್ರಮುಖ ಕೀಲಿಕೈ ಎಂದು ಹೇಳಿದ್ದಾರೆ.
‘ಕೊರೊನಾ ವೈರಸ್ ಹರಡುವಿಕೆ ತಡೆಯುವಲ್ಲಿ ಏಷ್ಯಾ ಪೆಸಿಫಿಕ್ ವಲಯದ ರಾಷ್ಟ್ರಗಳು ಹೆಚ್ಚು ಯಶಸ್ವಿಯಾಗಿವೆ. ಸಿಂಗಪುರವು ತನ್ನ ಒಟ್ಟು ಜನಸಂಖ್ಯೆಯ ಶೇ 80ರಷ್ಟು ಮಂದಿಗೆ ಲಸಿಕೆ ನೀಡಿದೆ. ಆದರೆ ವಿಯೆಟ್ನಾಂ, ಥಾಯ್ಲೆಂಡ್, ಭಾರತದಂಥ ಕೆಲವು ದೇಶಗಳು ಲಸಿಕೆ ನೀಡಿಕೆಯಲ್ಲಿ ತೀರಾ ಹಿಂದುಳಿದಿವೆ ಹಾಗೂ ಇದರ ಪರಿಣಾಮವಾಗಿ ನಿರ್ಬಂಧಗಳನ್ನು ಮುಂದುವರಿಸುತ್ತಿವೆ’ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಈವರೆಗೆ ಸುಮಾರು 70 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಕಳೆದ 11 ದಿನಗಳ ಅವಧಿಯಲ್ಲಿ 3 ಬಾರಿ ಪ್ರತಿ ದಿನ 1 ಕೋಟಿಗೂ ಹೆಚ್ಚು ಡೋಸ್ ನೀಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.