ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023ರ ಆರಂಭದಲ್ಲಿ ಡಿಜಿಟಲ್ ರೂಪಾಯಿ ಚಲಾವಣೆಗೆ?

Last Updated 6 ಫೆಬ್ರುವರಿ 2022, 15:18 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅಧಿಕೃತ ಡಿಜಿಟಲ್ ಕರೆನ್ಸಿ ‘ಡಿಜಿಟಲ್ ರೂಪಾಯಿ’ 2023ರ ಆರಂಭದಲ್ಲಿ ಚಲಾವಣೆಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಡಿಜಿಟಲ್ ಕರೆನ್ಸಿಯು ಈಗ ಹಣಕಾಸು ಮಾರುಕಟ್ಟೆಯಲ್ಲಿ ಇರುವ, ಖಾಸಗಿ ಕಂಪನಿಗಳ ಎಲೆಕ್ಟ್ರಾನಿಕ್ ವಾಲೆಟ್‌ ರೂಪದಲ್ಲಿಯೇ ಇರಲಿದೆ. ಆದರೆ, ಡಿಜಿಟಲ್ ರೂಪಾಯಿಗೆ ಸರ್ಕಾರದ ಖಾತರಿ ಇರಲಿದೆ ಎಂಬುದು, ಇದಕ್ಕೂ ಇ–ವಾಲೆಟ್‌ಗೂ ಇರುವ ವ್ಯತ್ಯಾಸ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಕಡೆಯಿಂದ ಡಿಜಿಟಲ್ ರೂಪಾಯಿಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಪ್ರಕಟಿಸಿದ್ದಾರೆ. ‘ಈಗ ಚಲಾವಣೆಯಲ್ಲಿ ಇರುವ ರೂಪಾಯಿ ಕರೆನ್ಸಿಯ ಮೌಲ್ಯದ ಜೊತೆ ಡಿಜಿಟಲ್ ರೂಪಾಯಿಯ ಮೌಲ್ಯವನ್ನೂ ಸೇರಿಸಲಾಗುತ್ತದೆ. ಡಿಜಿಟಲ್ ರೂಪಾಯಿಯು, ಸರ್ಕಾರದ ಬೆಂಬಲದೊಂದಿಗೆ ಈಗಾಗಲೇ ಚಲಾವಣೆಯಲ್ಲಿ ಇರುವ ಕರೆನ್ಸಿಗಿಂತ ಹೆಚ್ಚು ಭಿನ್ನವಾಗಿ ಇರುವುದಿಲ್ಲ. ಡಿಜಿಟಲ್ ರೂಪಾಯಿಯು, ಈಗಾಗಲೇ ಚಲಾವಣೆಯಲ್ಲಿರುವ ಕರೆನ್ಸಿಯ ಡಿಜಿಟಲ್ ರೂಪವಾಗಿರುತ್ತದೆ. ಇದು ಒಂದು ಅರ್ಥದಲ್ಲಿ, ಸರ್ಕಾರದಿಂದ ಮಾನ್ಯತೆ ಪಡೆದಿರುವ ವಾಲೆಟ್ ರೀತಿಯಲ್ಲಿ ಇರುತ್ತದೆ’ ಎಂದು ಸರ್ಕಾರದ ಅಧಿಕಾರಿಯೊಬ್ಬರು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ತಿಳಿಸಿದರು.

ಮುಂದಿನ ಹಣಕಾಸು ವರ್ಷದ (2022–23) ಅಂತ್ಯದೊಳಗೆ ಡಿಜಿಟಲ್ ರೂಪಾಯಿ ಸಿದ್ಧವಾಗಿರುತ್ತದೆ ಎಂದು ಆರ್‌ಬಿಐ ಹೇಳಿದೆ ಎಂದು ಈ ಅಧಿಕಾರಿ ತಿಳಿಸಿದರು. ಆರ್‌ಬಿಐ ಅಭಿವೃದ್ಧಿಪಡಿಸುತ್ತಿರುವ ಡಿಜಿಟಲ್ ರೂಪಾಯಿ ಬ್ಲಾಕ್‌ಚೈನ್ ತಂತ್ರಜ್ಞಾನವು ಎಲ್ಲ ವಹಿವಾಟುಗಳ ಮೇಲೆ ಕಣ್ಣಿಡಲು ಅವಕಾಶ ಕಲ್ಪಿಸುತ್ತದೆ.

ಖಾಸಗಿ ಕಂಪನಿಗಳು ಒದಗಿಸುತ್ತಿರುವ ವಾಲೆಟ್ ಸೇವೆಯನ್ನು ಬಳಸುವ ವ್ಯಕ್ತಿಗಳು, ತಮ್ಮ ಹಣವನ್ನು ಆ ಖಾಸಗಿ ಕಂಪನಿಗೆ ವರ್ಗಾಯಿಸುತ್ತಾರೆ. ಆ ಕಂಪನಿಯು ವ್ಯಕ್ತಿಯ ಪರವಾಗಿ ಹಣ ಇರಿಸಿಕೊಳ್ಳುತ್ತದೆ. ವ್ಯಕ್ತಿಯ ಪರವಾಗಿ ವರ್ತಕರಿಗೆ ಹಣ ವರ್ಗಾವಣೆ ಮಾಡುತ್ತದೆ. ಡಿಜಿಟಲ್ ರೂಪಾಯಿ ಬಳಸುವವರು ರೂಪಾಯಿಯನ್ನು ನೋಟುಗಳ ರೂಪದಲ್ಲಿ ಇರಿಸಿಕೊಳ್ಳುವ ಬದಲು, ಅದನ್ನು ಆರ್‌ಬಿಐ ಬಳಿ ಡಿಜಿಟಲ್ ರೂಪದಲ್ಲಿ ಇರಿಸಿಕೊಳ್ಳುತ್ತಾರೆ. ಆರ್‌ಬಿಐನಿಂದ ಅದು ವರ್ತಕರಿಗೆ ವರ್ಗಾವಣೆ ಆಗುತ್ತದೆ. ಈ ಕರೆನ್ಸಿಗೆ ಸರ್ಕಾರದ ಮಾನ್ಯತೆ ಇರುತ್ತದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT