ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್ ಮಧ್ಯಭಾಗದಲ್ಲಿ ಎಲ್‌ಐಸಿ ಐಪಿಒ ಸಾಧ್ಯತೆ

Last Updated 13 ಜನವರಿ 2022, 14:13 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ತನ್ನ ಆರಂಭಿಕ ಸಾರ್ವಜನಿಕ ಕೊಡುಗೆಯ (ಐಪಿಒ) ಭಾಗವಾಗಿ ಈ ತಿಂಗಳ ಅಂತ್ಯದೊಳಗೆ ‘ಸೆಬಿ’ಗೆ (ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ) ದಾಖಲೆಪತ್ರಗಳನ್ನು ಸಲ್ಲಿಸಲಿದ್ದು ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ಷೇರು ಹಂಚಿಕೆ ನಡೆಯುವ ನಿರೀಕ್ಷೆ ಇದೆ ಎಂದು ಸರ್ಕಾರಿ ಮತ್ತು ಬ್ಯಾಂಕಿಂಗ್ ಅಧಿಕಾರಿಗಳು ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಈ ಕಂಪನಿಯ ಮೌಲ್ಯಮಾಪನ ಮಾಡುವ ಕೆಲಸದಲ್ಲಿ ಅಧಿಕಾರಿಗಳು ತೊಡಗಿದ್ದಾರೆ. ಒಮ್ಮೆ ಅದು ಪೂರ್ಣಗೊಂಡ ನಂತರ ಎಲ್‌ಐಸಿಯು ಐಪಿಒಗೆ ಕರಡು ದಾಖಲೆ ಪತ್ರಗಳನ್ನು ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ.

ಕಂಪನಿಯ ಮೌಲ್ಯಮಾಪನ ನಿರ್ಧಾರ ಆದ ತಕ್ಷಣವೇ ಕರಡು ದಾಖಲೆ ಪತ್ರಗಳನ್ನು ಸಲ್ಲಿಸಲಾಗುವುದು. ಈ ತಿಂಗಳ ಅಂತ್ಯದ ಒಳಗಾಗಿ ಕರಡು ದಾಖಲೆ ಪತ್ರ ಸಲ್ಲಿಸುವ ಉದ್ದೇಶದಿಂದ ಕೆಲಸ ಮಾಡಲಾಗುತ್ತಿದೆ ಎಂದು ಬ್ಯಾಂಕಿಂಗ್ ಮೂಲವೊಂದು ತಿಳಿಸಿದೆ. ಯಾವ ಕಾಲಮಿತಿಯ ಒಳಗೆ ‘ಐಪಿಒ’ ನಡೆಯಲಿದೆ ಎನ್ನುವ ಪ್ರಶ್ನೆಗೆ ಹಣಕಾಸು ಸಚಿವಾಲಯ ಮತ್ತು ಎಲ್‌ಐಸಿಯಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ದೇಶದ ಜೀವ ವಿಮಾ ಮಾರುಕಟ್ಟೆಯಲ್ಲಿ ಎಲ್‌ಐಸಿಯು ಅತಿ ಹೆಚ್ಚಿನ ಪಾಲು ಹೊಂದಿದೆ. ಇದರ ಐಪಿಒದಿಂದ ಸಿಗುವ ಬಂಡವಾಳವು ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯ ಅಂತರವನ್ನು ಸರಿದೂಗಿಸಲು ನೆರವಾಗಲಿದೆ ಎನ್ನುವುದು ಸರ್ಕಾರದ ಭರವಸೆ ಆಗಿದೆ. ಷೇರುಪೇಟೆಗೆ ಬರುವುದರಿಂದ ಎಲ್‌ಐಸಿಯ ಕಾರ್ಯನಿರ್ವಹಣೆಯಲ್ಲಿ ಇನ್ನೂ ಹೆಚ್ಚಿನ ಪಾರದರ್ಶಕತೆ ಬರುವ ನಿರೀಕ್ಷೆ ಮಾಡಲಾಗಿದೆ.

ಐಪಿಒ ನಿರ್ವಹಣೆಗಾಗಿ ಗೋಲ್ಡ್‌ಮನ್‌ ಸ್ಯಾಚ್ಸ್‌, ಸಿಟಿಗ್ರೂಪ್ ಮತ್ತು ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್‌ ಸೇರಿದಂತೆ ಒಟ್ಟು 10 ಮರ್ಚೆಂಟ್‌ ಬ್ಯಾಂಕರ್‌ಗಳನ್ನು ಕೇಂದ್ರ ಸರ್ಕಾರವು ಕಳೆದ ವರ್ಷ ನೇಮಕ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT