ಸೋಮವಾರ, ಡಿಸೆಂಬರ್ 9, 2019
20 °C
ಎಸ್‌ಬಿಐ ಸಂಶೋಧನಾ ವರದಿ

ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ 4.2ಕ್ಕೆ ಕುಸಿಯಲಿದೆ

Published:
Updated:
Prajavani

ನವದೆಹಲಿ: ಮಂದಗತಿಯ ಆರ್ಥಿಕ ಸ್ಥಿತಿಯು ಎರಡನೇ ತ್ರೈಮಾಸಿಕದಲ್ಲಿಯೂ ಮುಂದುವರಿಯುವ ಸೂಚನೆಗಳು ಕಂಡುಬರುತ್ತಿವೆ. ಮಂಗಳವಾರ ಎಸ್‌ಬಿಐ ಬಿಡುಗಡೆ ಮಾಡಿರುವ ಸಂಶೋಧನಾ ವರದಿಯು ಇದನ್ನೇ ಸೂಚಿಸುತ್ತಿದೆ.

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ವೃದ್ಧಿ ದರವು ಶೇ 4.2ಕ್ಕೆ ಕುಸಿಯಲಿದೆ ಎಂದು ಎಸ್‌ಬಿಐನ ಆರ್ಥಿಕ ಸಂಶೋಧನಾ ವಿಭಾಗವು ಹೇಳಿದೆ.

ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ವೃದ್ಧಿ ದರ ಶೇ 5ರಷ್ಟಾಗಿದ್ದು, ಆರು ವರ್ಷಗಳ ಕನಿಷ್ಠ ಮಟ್ಟದ್ದಾಗಿದೆ. 

ವಾಹನ ಮಾರಾಟ ಕುಸಿತ, ತಯಾರಿಕೆ ಮತ್ತು ಮೂಲಸೌಕರ್ಯ ವಲಯದ ಇಳಿಮುಖ ಬೆಳವಣಿಗೆ, ಮೂಲಸೌಕರ್ಯ ಮತ್ತು ನಿರ್ಮಾಣ ವಲಯಗಳಲ್ಲಿ ಹೂಡಿಕೆ ಚಟುವಟಿಕೆಯಲ್ಲಿ ಇಳಿಕೆ ಕಂಡುಬಂದಿದೆ. ಹೀಗಾಗಿ ಮೊದಲ ತ್ರೈಮಾಸಿಕದಲ್ಲಿ ಇದ್ದ ಶೇ 5ಕ್ಕಿಂತಲೂ ಕಡಿಮೆ ಅಂದರೆ ಶೇ 4.2ರಷ್ಟು ಇರಲಿದೆ ಎಂದು ತಿಳಿಸಿದೆ.

2019–20ನೇ ಹಣಕಾಸು ವರ್ಷಕ್ಕೆ ಜಿಡಿಪಿ ವೃದ್ಧಿ ದರವನ್ನು ಈ ಹಿಂದಿನ ಶೇ 6.1ರಿಂದ ಶೇ 5ಕ್ಕೆ ತಗ್ಗಿಸಿದೆ. ಆದರೆ, 2020–21ರಲ್ಲಿ ಶೇ 6.2ರಷ್ಟು ಪ್ರಗತಿ ಸಾಧ್ಯವಾಗಲಿದೆ ಎಂದು ಹೇಳಿದೆ.

ಸೆಪ್ಟೆಂಬರ್‌ನಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕವು (ಐಐಪಿ) ಶೇ 4.3ಕ್ಕೆ ಕುಸಿತ ಕಂಡಿರುವುದು ಎಚ್ಚರಿಕೆಯ ಗಂಟೆಯಾಗಿದೆ ಎಂದು ತಿಳಿಸಿದೆ.

ಆರ್ಥಿಕತೆಗೆ ಉತ್ತೇಜನ ನೀಡುವ ಭರದಲ್ಲಿ ಹಣಕಾಸು ನೀತಿಯನ್ನು ಸಡಿಲಗೊಳಿಸಿದರೆ ಆರ್ಥಿಕ ಅಸ್ಥಿರತೆ ಎದುರಾಗಲಿದೆ ಎಂದೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಬಡ್ಡಿದರ ಕಡಿತ: ಮಂದಗತಿಯ ಆರ್ಥಿಕತೆಗೆ ಉತ್ತೇಜನ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಡಿಸೆಂಬರ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಇದೆ ಎಂದೂ ಹೇಳಿದೆ. ಡಿಸೆಂಬರ್‌ 5 ರಂದು ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸಭೆ ಸೇರಲಿದ್ದು, ಬಡ್ಡಿದರಗಳ ಪರಾಮರ್ಶೆ ನಡೆಸಲಿದೆ.

ಜಾಗತಿಕ ಮಂದಗತಿಯ ಆರ್ಥಿಕತೆಯನ್ನು ಗಮನದಲ್ಲಿ ಇಟ್ಟುಕೊಂಡು 2019–20ನೇ ಹಣಕಾಸು ವರ್ಷದಲ್ಲಿ ಭಾರತದ ವೃದ್ಧಿ ದರವನ್ನು ಪರಿಗಣಿಸಬೇಕು. ಬೇಡಿಕೆ ಹೆಚ್ಚಿಸುವುದು ಮತ್ತು ವಿತ್ತೀಯ ನೀತಿಯ ಬಗ್ಗೆ ಸ್ಪಷ್ಟತೆ ದೊರೆಯುವಂತೆ ಮಾಡುವ ಅಗತ್ಯವಿದೆ ಎಂದು ಸಲಹೆ ನೀಡಿದೆ.

ರೂಪಾಯಿ ಮೇಲೆ ಪರಿಣಾಮ
ಆರ್ಥಿಕತೆಯು ಮಂದಗತಿಯಲ್ಲಿ ಇರುವ ಈ ಸಮಯದಲ್ಲಿ ಎರಡನೇ ತ್ರೈಮಾಸಿಕದ ಅಂಕಿ–ಅಂಶವು ಬಹಳ ಮಹತ್ವದ್ದಾಗಿದೆ ಎಂದು ಸಿಂಗಪುರದ ಡಿಬಿಎಸ್‌ ಬ್ಯಾಂಕ್‌ ಹೇಳಿದೆ.

ನವೆಂಬರ್‌ 29ರಂದು ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದ ಜಿಡಿಪಿ ಅಂಕಿ–ಅಂಶ ಹೊರಬೀಳಲಿದೆ.

ಜಿಡಿಪಿ ಅಂಕಿ–ಅಂಶ ನಿರಾಶಾದಾಯಕವಾಗಿದ್ದರೆ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಲಿದೆ. ಸದ್ಯ ಡಾಲರ್‌ ಎದುರು ರೂಪಾಯಿ ಮೌಲ್ಯ ₹ 70.5 ರಿಂದ ₹ 71.5ರ ಆಸುಪಾಸಿನಲ್ಲಿದೆ. ಇದು ವರ್ಷದ ಗರಿಷ್ಠ ₹ 72.5ಕ್ಕೆ ತಲುಪುವ ಸಾಧ್ಯತೆಯೂ ಇದೆ. ಸೋಮವಾರ ₹ 71.29 ರಿಂದ ₹ 71.47ಕ್ಕೆ ಇಳಿಕೆಯಾಗಿದೆ ಎಂದು ಹೇಳಿದೆ.

ನಕಾರಾತ್ಮಕ ಅಂಶಗಳು

* ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಸೆಪ್ಟೆಂಬರ್‌ನಲ್ಲಿ ಶೇ 4.3ಕ್ಕೆ ಕುಸಿತ

* ಮೂಲಸೌಕರ್ಯ, ನಿರ್ಮಾಣ ಕ್ಷೇತ್ರದಲ್ಲಿನ ಮಂದಗತಿಯ ಬೆಳವಣಿಗೆ

* ಬೃಹತ್ ಯಂತ್ರೋಪಕರಣಗಳ ತಯಾರಿಕೆ ಶೇ 20.7ರಷ್ಟು ಇಳಿಕೆ

* ಸೇವಾ ವಲಯದ ಚಟುವಟಿಕೆಯಲ್ಲಿ ಇಳಿಕೆ

* ತಯಾರಿಕಾ ವಲಯದ ಅಕ್ಟೋಬರ್‌ ತಿಂಗಳ ಬೆಳವಣಿಗೆ ಎರಡು ವರ್ಷಗಳಲ್ಲಿಯೇ ಕಡಿಮೆ

*
ಆರ್ಥಿಕತೆಗೆ ಉತ್ತೇಜನ ನೀಡುವ ಭರದಲ್ಲಿ ಹಣಕಾಸು ನೀತಿಯಲ್ಲಿ ಸಡಿಲಗೊಳಿಸಿದರೆ ಆರ್ಥಿಕ ಅಸ್ಥಿರತೆ ತಲೆದೂರಲಿದೆ.
-ಎಸ್‌ಬಿಐ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು