ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ಟು ತಿಂದರೂ ಪಟ್ಟು ಬಿಡದ ಅಭಿಮಾನಿಗಳು

Last Updated 30 ಜನವರಿ 2018, 9:32 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರ ಹೊರವಲಯದ ಕೆ.ವಿ.ಕ್ಯಾಂಪಸ್‌ನಲ್ಲಿ ಸೋಮವಾರ ಸಂಜೆ ದಿಢೀರ್‌ ಜಾತ್ರೆಯ ಚಿತ್ರಣ ಕಂಡುಬಂತು. ಕ್ಯಾಂಪಸ್‌ನಲ್ಲಿರುವ ಕೆ.ವಿ.ಮತ್ತು ಪಂಚಗಿರಿ ದತ್ತಿಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಅವರ ನಿವಾಸಕ್ಕೆ ಭೇಟಿ ನೀಡಿದ ತೆಲುಗು ನಟ ಮತ್ತು ಜನಸೇನಾ ಪಕ್ಷದ ಸಂಸ್ಥಾಪಕ ಕೆ. ಪವನ್‌ ಕಲ್ಯಾಣ್‌ ಅವರನ್ನು ನೋಡಲು ಧಾವಿಸಿದ ಅಭಿಮಾನಿಗಳನ್ನು ಹತೋಟಿಗೆ ತರಲು ಪೊಲೀಸರು ಅಕ್ಷರಶಃ ಹರಸಾಹಸಪಟ್ಟರು.

ಪವನ್‌ ಕಲ್ಯಾಣ್‌ ಅವರು ಸಂಜೆ 4.15ರ ಸುಮಾರಿಗೆ ಕ್ಯಾಂಪಸ್‌ಗೆ ಭೇಟಿ ನೀಡಿದರು. ಇದನ್ನು ತಿಳಿಯುತ್ತಿದ್ದಂತೆ ಕೆಲವೇ ಹೊತ್ತಿನಲ್ಲಿ ಕ್ಯಾಂಪಸ್‌ ಅಂಗಳದಲ್ಲಿ ಸುಮಾರು ಐದಾರು ಸಾವಿರಕ್ಕೂ ಅಧಿಕ ಅಭಿಮಾನಿಗಳು ನೆರೆದರು. ತಮ್ಮ ನೆಚ್ಚಿನ ನಟನ ಮೇಲೆ ಪುಷ್ಪವೃಷ್ಟಿಗೈಯುತ್ತ, ಜೈಕಾರ ಹಾಕುತ್ತ ಹತ್ತಿರದಿಂದ ನೋಡಲು ಮುಗಿಬಿದ್ದರು. ಇದರಿಂದಾಗಿ ಉತ್ಸಾಹದಲ್ಲಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಪರಿಸ್ಥಿತಿ ಕೈ ಮೀರುವುದು ಅರಿತು ಲಾಠಿ ಪ್ರಹಾರ ನಡೆಸಿ ಜನದಟ್ಟಣೆ ಹತೋಟಿಗೆ ತಂದರು.

ನವೀನ್ ಕಿರಣ್ ಅವರ ನಿವಾಸದಲ್ಲಿ ಉಪಾಹಾರ ಸೇವಿಸಿ, ಅವರ ಕುಶಲೋಪರಿ ವಿಚಾರಿಸಿದ ಪವನ್‌ ಕಲ್ಯಾಣ್‌ ಅವರು ಕ್ಯಾಂಪಸ್‌ನಲ್ಲಿ ಸಿದ್ಧಪಡಿಸಿದ್ದ ವೇದಿಕೆಯತ್ತ ತೆರೆದ ಕಾರಿನಲ್ಲಿ 100 ಮೀಟರ್‌ನಷ್ಟು ದೂರ ಮೆರವಣಿಗೆಯಲ್ಲಿ ಸಾಗಿದರು. ಈ ವೇಳೆ ವೇದಿಕೆ ಮುಂಭಾಗ ಜಮಾಯಿಸಲು ಮುಂದಾದ ಅಭಿಮಾನಿಗಳ ದಾಂಗುಡಿಗೆ ಪ್ರವೇಶ ದ್ವಾರದ ಗಾಜುಗಳು ಮಾತ್ರವಲ್ಲದೇ, ವೇದಿಕೆ ಮೇಲಿದ್ದ ಮೈಕ್ ಸ್ಟ್ಯಾಡ್‌ ಮತ್ತು ಗಾಜುಗಳು ಪುಡಿಗಟ್ಟಿದವು.

ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ, ಅಲ್ಲಿಂದ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಪ್ರಯಾಣಿಸಿದರು. ‘ಪವರ್ ಸ್ಟಾರ್’ ಕ್ಯಾಂಪಸ್‌ನಿಂದ ನಿರ್ಗಮಿಸಿದ ನಂತರವೂ ಅತ್ತ ಸಾಗುತ್ತಿದ್ದ ಜನರು ದಾರಿಯುದ್ದಕ್ಕೂ ಕಂಡುಬಂದರು. ಇನ್ನೊಂದೆಡೆ ಕ್ಯಾಂಪಸ್‌ನಿಂದ ಹಿಂದಿರುಗಿ ಏಕಕಾಲಕ್ಕೆ ನಗರದತ್ತ ನೂರಾರು ಬೈಕ್‌ಗಳು, ವಾಹನಗಳು ನುಗ್ಗುತ್ತಿದ್ದಂತೆ ಬಿ.ಬಿ.ರಸ್ತೆಯಲ್ಲಿ ವಾಹನದಟ್ಟಣೆ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT