ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ 29 ಸರಕಿಗೆ ಪ್ರತೀಕಾರ ಸುಂಕ

ಇದೇ 16 ರಿಂದ ಜಾರಿಗೆ ಹಣಕಾಸು ಸಚಿವಾಲಯ ನಿರ್ಧಾರ
Last Updated 14 ಜೂನ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದ 29 ಸರಕುಗಳ ಮೇಲೆ ಹೆಚ್ಚುವರಿ ಕಸ್ಟಮ್ಸ್‌ ಸುಂಕ ವಿಧಿಸಲು ಭಾರತ ಕೊನೆಗೂ ನಿರ್ಧಾರ ಕೈಗೊಂಡಿದ್ದು, ಇದೇ 16ರಿಂದ ಜಾರಿಗೆ ಬರಲಿದೆ.

ಅಮೆರಿಕದ ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದನ್ನು ಭಾರತ ಸಾಕಷ್ಟು ಬಾರಿ ಮುಂದೂಡಿತ್ತು. ಬದಾಮಿ, ಬೇಳೆಕಾಳು ಸೇರಿದಂತೆ ಈ ಸರಕುಗಳ ಮೇಲಿನ ಹೆಚ್ಚುವರಿ ಕಸ್ಟಮ್ಸ್‌ ಸುಂಕ ವಿಧಿಸುವ ಸಂಬಂಧ ಹಣಕಾಸು ಸಚಿವಾಲಯವು ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಲಿದೆ. ಇದರಿಂದ ದೇಶಿ ಗ್ರಾಹಕರಿಗೆ ಈ ಸರಕುಗಳು ದುಬಾರಿಯಾಗಲಿವೆ. ಈ ನಿರ್ಧಾರವನ್ನು ಡೊನಾಲ್ಡ್‌ ಟ್ರಂಪ್‌ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕ ಮತ್ತು ಭಾರತ ನಡುವಣ ಸಂಧಾನ ಮಾತುಕತೆಗಳಲ್ಲಿ ಈ ಬಿಕ್ಕಟ್ಟಿಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಿಂದ ಭಾರತವು ಸುಂಕ ವಿಧಿಸುವ ಗಡುವನ್ನು ವಿಸ್ತರಿಸುತ್ತಲೇ ಬಂದಿತ್ತು.

ಆದರೆ, ಅಮೆರಿಕವು ಆದ್ಯತಾ ವ್ಯಾಪಾರ ಒಪ್ಪಂದದಡಿ (ಜಿಎಸ್‌ಪಿ) ಭಾರತಕ್ಕೆ ನೀಡಿದ್ದ ರಫ್ತು ಉತ್ತೇಜನಾ ಕೊಡುಗೆ ರದ್ದು ಮಾಡಲು ನಿರ್ಧರಿಸಿದ್ದರಿಂದ ಸಂಧಾನ ಮಾತುಕತೆ ಮುರಿದು ಬಿದ್ದಿದ್ದವು. ಉತ್ತೇಜನಾ ಕ್ರಮಗಳು ಇದೇ 5ರಿಂದ ರದ್ದಾಗಿದ್ದವು. ಭಾರತದಿಂದ ಅಮೆರಿಕೆಗೆ ರಫ್ತಾಗುವ ₹ 38,500 ಕೋಟಿ ಮೊತ್ತದ ಸರಕುಗಳ ಮೇಲೆ ಇದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.

ಅಕ್ರೋಡ್‌ ಮೇಲಿನ ಆಮದು ಸುಂಕ ಶೇ 30 ರಿಂದ ಶೇ 120, ಕಡಲೆಬೇಳೆ ಸುಂಕ ಶೇ 30 ರಿಂದ ಶೇ 70, ಬೋರಿಕ್‌ ಆಸಿಡ್‌ ಶೇ 7.5 ರಷ್ಟು ಹೆಚ್ಚಿಸಲಾಗಿದೆ. ಕಬ್ಬಿಣ ಮತ್ತು ಉಕ್ಕು, ಸೇಬು, ಸ್ಟೇನ್‌ಲೆಸ್‌ ಸ್ಟೀಲ್‌, ಮಿಶ್ರ ಲೋಹ, ಟ್ಯೂಬ್‌, ಪೈಪ್‌ ಫಿಟ್ಟಿಂಗ್ಸ್‌, ಬೋಲ್ಟ್‌ ಮುಂತಾದವುಗಳ ಮೇಲಿನ ಸುಂಕವೂ ಹೆಚ್ಚಳಗೊಳ್ಳಲಿದೆ.

ಇದರಿಂದ ಅಮೆರಿಕದ ರಫ್ತುದಾರರು ಈ ಸರಕುಗಳನ್ನು ಭಾರತಕ್ಕೆ ರಫ್ತು ಮಾಡಲು ಹೆಚ್ಚಿನ ಸುಂಕ ಪಾವತಿಸಬೇಕಾಗುತ್ತದೆ. ಭಾರತವು ಹೆಚ್ಚುವರಿಯಾಗಿ ₹ 1,519 ಕೋಟಿ ಹೆಚ್ಚುವರಿ ವರಮಾನ ಗಳಿಸಲಿದೆ.

ಉಕ್ಕು ಮತ್ತು ಅಲ್ಯುಮಿನಿಯಂನ ಕೆಲ ಉತ್ಪನ್ನಗಳ ಆಮದಿನ ಮೇಲೆ ಅಮೆರಿಕವು ಕ್ರಮವಾಗಿ ಶೇ 25 ಮತ್ತು ಶೇ 10ರಷ್ಟು ಸುಂಕ ಹೆಚ್ಚಿಸಿದ್ದರಿಂದ ಭಾರತದ ರಫ್ತು ವಹಿವಾಟಿನ ಮೇಲೆ ₹ 1,614 ಕೋಟಿಗಳಷ್ಟು ನಷ್ಟ ಉಂಟಾಗಲಿದೆ. ಅಮೆರಿಕದಿಂದ ಆಮದು ಮಾಡಿಕೊಳ್ಳುವ ಬದಾಮಿ, ಸೇಬು ಮತ್ತು ಕೆಲ ನಿರ್ದಿಷ್ಟ ಮಾದರಿಯ ಮೋಟರ್‌ ಬೈಕ್‌ಗಳೂ ಸೇರಿದಂತೆ ಹಲವು ಸರಕುಗಳ ಮೇಲೆ ಸುಂಕ ಹೆಚ್ಚಿಸುವುದಾಗಿ ಭಾರತವು 2018ರ ಜೂನ್‌ ತಿಂಗಳಿನಲ್ಲಿ ಪ್ರಕಟಿಸಿತ್ತು.

ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಆಮದು ಸುಂಕ ವಿಧಿಸಿದ ಅಮೆರಿಕದ ನಿರ್ಧಾರದ ವಿರುದ್ಧ ಭಾರತವು ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲ್ಯುಟಿಒ) ದೂರು ದಾಖಲಿಸಿದೆ.

* ಅಮೆರಿಕೆಗೆ ಭಾರತದ ಉಕ್ಕು ಮತ್ತು ಅಲ್ಯುಮಿನಿಯಂ ರಫ್ತು ಪ್ರಮಾಣ ₹10,500 ಕೋಟಿ

* ಅಮೆರಿಕದ ಸುಂಕ ಹೆಚ್ಚಳದಿಂದ ದೇಶಿ ರಫ್ತು ವಹಿವಾಟಿಗೆ ₹1,614 ಕೋಟಿ ನಷ್ಟ

* ಅಮೆರಿಕದ ಸರಕು ಮೇಲಿನ ಸುಂಕ ಹೆಚ್ಚಳ: ಭಾರತಕ್ಕೆ ₹1,519 ಕೋಟಿ ಲಾಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT