ಭಾನುವಾರ, ಸೆಪ್ಟೆಂಬರ್ 25, 2022
30 °C

ಅಕ್ಕಿ ರಫ್ತಿಗೆ ಶೇಕಡ 20ರಷ್ಟು ತೆರಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಿಂದ ರಫ್ತಾಗುವ ಅಕ್ಕಿಗೆ ಕೇಂದ್ರ ಸರ್ಕಾರವು ಶೇಕಡ 20ರಷ್ಟು ತೆರಿಗೆ ವಿಧಿಸಿದೆ. ಬಾಸ್ಮತಿ ಅಕ್ಕಿ, ಕುಚ್ಚಲು ಅಕ್ಕಿಗೆ ಈ ತೆರಿಗೆ ಇಲ್ಲ. ದೇಶಿ ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ ಹೆಚ್ಚು ಇರುವಂತೆ ನೋಡಿಕೊಳ್ಳಲು ಕೇಂದ್ರವು ಈ ಕ್ರಮ ಕೈಗೊಂಡಿದೆ.

ಮುಂಗಾರು ಹಂಗಾಮಿನಲ್ಲಿ ಭತ್ತ ಬಿತ್ತನೆಯ ಪ್ರದೇಶ ಇಳಿಕೆಯಾಗಿದೆ. ತೆರಿಗೆ ವಿಧಿಸುವ ಬಗ್ಗೆ ಕೇಂದ್ರ ರೆವಿನ್ಯು ಇಲಾಖೆಯು ಅಧಿಸೂಚನೆ ಹೊರಡಿಸಿದೆ.

ರಫ್ತು ತೆರಿಗೆಯು ಶುಕ್ರವಾರದಿಂದ ಜಾರಿಗೆ ಬರಲಿದೆ ಎಂದು ಅಧಿಸೂಚನೆ ಹೇಳಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಭತ್ತ ಬಿತ್ತನೆ ಆಗಿರುವ ಪ್ರದೇಶದ ಪ್ರಮಾಣವು ಶೇಕಡ 5.62ರಷ್ಟು ಕಡಿಮೆ ಆಗಿದೆ. ಕೆಲವು ರಾಜ್ಯಗಳಲ್ಲಿ ಮಳೆ ಸರಿಯಾಗಿ ಆಗಿಲ್ಲದಿರುವುದು ಇದಕ್ಕೆ ಕಾರಣ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ.

ಜಾಗತಿಕ ಅಕ್ಕಿ ವ್ಯಾಪಾರದಲ್ಲಿ ಭಾರತದ ಪಾಲು ಶೇಕಡ 40ರಷ್ಟು ಇದೆ. ಚೀನಾ ನಂತರ ಅತಿಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯುವುದು ಭಾರತದಲ್ಲಿ. ಭಾರತವು 2021–22ರಲ್ಲಿ ಒಟ್ಟು 150ಕ್ಕೂ ಹೆಚ್ಚು ದೇಶಗಳಿಗೆ ಅಕ್ಕಿ (ಬಾಸ್ಮತಿ ಹೊರತುಪಡಿಸಿ) ರಫ್ತು ಮಾಡಿದೆ.

ಕೇಂದ್ರದ ಕ್ರಮವನ್ನು ಸ್ವಾಗತಿಸಿರುವ ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘದ ಮಾಜಿ ಅಧ್ಯಕ್ಷ ವಿಜಯ್ ಸೇತಿಯಾ, ‘ಭಾರತದ ಅಕ್ಕಿಯನ್ನು ಬಹಳ ಕಡಿಮೆ ಬೆಲೆಗೆ ರಫ್ತು ಮಾಡಲಾಗುತ್ತಿತ್ತು. ಭತ್ತ ಬೆಳೆಯುವ ಪ್ರದೇಶ ಕಡಿಮೆಯಾಗಿರುವ ಕಾರಣ ಈ ತೀರ್ಮಾನ ಒಳ್ಳೆಯದು’ ಎಂದು ಹೇಳಿದ್ದಾರೆ.

ಈ ತೀರ್ಮಾನದಿಂದಾಗಿ ಕುಚ್ಚಲು ಅಕ್ಕಿಯ ರಫ್ತು ಹೆಚ್ಚಾಗಬಹುದು ಎಂದು ಸಂಘದ ಹಾಲಿ ಅಧ್ಯಕ್ಷ ನಾತಿರಾಮ್ ಗುಪ್ತ ಹೇಳಿದ್ದಾರೆ. ಕೇಂದ್ರ ಸರ್ಕಾರವು ಗೋಧಿಯ ರಫ್ತಿನ ಮೇಲೆ ಈಗಾಗಲೇ ನಿರ್ಬಂಧ ಹೇರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು