ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಕೇಂದ್ರ, ಆನೆ ಕಾರಿಡಾರ್ ನಿರ್ಮಾಣ

ಏಳು ವಿಧಾನಸಭಾ ಕ್ಷೇತ್ರಕ್ಕೂ ಬಿಜೆಪಿ ಪ್ರತ್ಯೇಕ ಪ್ರಣಾಳಿಕೆ
Last Updated 6 ಮೇ 2018, 10:51 IST
ಅಕ್ಷರ ಗಾತ್ರ

ಹಾಸನ: ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಸರ್ಕಾರಿ ಶಾಲೆ, ಕಾಲೇಜುಗಳು ಮೇಲ್ದರ್ಜೆಗೇರಿಸುವುದು, ಮನುಷ್ಯ–ಕಾಡಾನೆ ಸಂಘರ್ಷ ತಡೆಗೆ ಆನೆ ಕಾರಿಡಾರ್‌ ನಿರ್ಮಾಣ, ಕೈಗಾರಿಕಾ ಕೇಂದ್ರ ಸ್ಥಾಪನೆ, ಹಾಸನ ರೈಲು ನಿಲ್ದಾಣ ಆಧುನೀಕರಣಗೊಳಿಸುವುದು.

ಇದು ಬಿಜೆಪಿ ಜಿಲ್ಲೆಯ ಜನರಿಗೆ ನೀಡಿರುವ ವಾಗ್ದಾನ. ಚುನಾವಣೆಗೆ ಏಳು ದಿನ ಬಾಕಿ ಇರುವಂತೆ ‘ನಮ್ಮ ಕ್ಷೇತ್ರಕ್ಕೆ ನಮ್ಮ ವಚನ’ ಎಂಬ ಶೀರ್ಷಿಕೆಯಡಿ 12 ಪುಟಗಳ ಏಳು ವಿಧಾನಸಭಾ ಕ್ಷೇತ್ರಕ್ಕೂ ಪ್ರತ್ಯೇಕ ಪ್ರಣಾಳಿಕೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಯೋಗಾರಮೇಶ್‌ ಬಿಡುಗಡೆ ಮಾಡಿದರು.

‘ಜಿಲ್ಲೆಯ ಎಲ್ಲ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಬಿಜೆಪಿ ಪ್ರತಿಜ್ಞೆ ಮಾಡಿದೆ. ಜನರ ದೀರ್ಘಕಾಲದ ಕನಸು ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಶ್ರದ್ಧೆಯಿಂದ ಕೆಲಸ ಮಾಡಲಾಗುವುದು’ ಎಂದು ಅವರು ಭರವಸೆ ನೀಡಿದರು.

ಅರಕಲಗೂಡು ಕ್ಷೇತ್ರ: ತಾಲ್ಲೂಕಿನ ಬೋರಣ್ಣ ಗೌಡ ಮೇಲ್ದಂಡೆ ನಾಲೆ ಮತ್ತು ಹೇಮಾವತಿ ಬಲದಂಡೆ ನಾಲೆಯ ಮೂಲಕ ಕೊನೆಯ ಭಾಗದ ರೈತರಿಗೆ ನೀರು ಒದಗಿಸುವುದು, ಸೂಕ್ಷ್ಮ ನೀರಾವರಿ ಉತ್ತೇಜಿಸಲು ರೈತರ ಸಹಯೋಗದೊಂದಿಗೆ ಹೊಸ ಕೊಳಗಳ ನಿರ್ಮಾಣ, ಕಟ್ಟೆಪುರ ಏತ ನೀರಾವರಿ ಯೋಜನೆ, ರಂಗನಹಳ್ಳಿ ಏತ ನೀರಾವರಿ ಯೋಜನೆ ಮತ್ತು ಗಂಗನಾಳು ಏತ ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಪೂರೈಸಲಾಗುವುದು ಎಂದು ಭರವಸೆ ನೀಡಿದೆ.

ಹಾಸನ ಕ್ಷೇತ್ರ:  ಜಲ ಸಂವರ್ಧನೆ ಯೋಜನೆಯಡಿ ಕೆರೆಗಳ ಸಮಗ್ರ ಅಭಿವೃದ್ಧಿ, ಕುಡಿಯುವ ನೀರಿನ ಅವಶ್ಯಕತೆ ಪೂರೈಸಲು ಮಳೆ ನೀರು ಸಂಗ್ರಹಕ್ಕೆ ಆದ್ಯತೆ, ಹೇಮಾವತಿ ಉಪಕಾಲುವೆಗಳ ದುರಸ್ತಿ, ಸಹಕಾರಿ ಸಂಘಗಳ ಮೂಲಕ ‘ಬೀಜದ ಆಲೂಗಡ್ಡೆಯನ್ನು’ ರಿಯಾಯಿತಿ ದರಗಳಲ್ಲಿ ನೀಡಲಾಗುವುದು. ಬೆಳೆ ಉತ್ಪಾದನೆ, ಕೃಷಿ ಸಂಪನ್ಮೂಲಗಳು, ಮಣ್ಣು ಹಾಗೂ ಬೀಜ ಪರೀಕ್ಷೆ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಮಾಹಿತಿ ಒದಗಿಸಲು ರೈತ ಸಂಪರ್ಕ ಕೇಂದ್ರ ಸ್ಥಾಪಿಸಲಾಗುವುದು ಎಂದು ವಾಗ್ದಾನ ಮಾಡಲಾಗಿದೆ

ಬೇಲೂರು ಕ್ಷೇತ್ರ: ಅಂಬೇಡ್ಕರ್‌ ಸಮುದಾಯ ಮತ್ತು ಸ್ಮಾರಕ ಭವನ ನಿರ್ಮಾಣ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಗಳ ನಿರಂತರ ಪೂರೈಕೆ, ಪಾರಂಪರಿಕ, ಯಾತ್ರಾ ಪ್ರವಾಸೋದ್ಯಮ ಉತ್ತೇಜನ.

ಅರಸೀಕೆರೆ ಕ್ಷೇತ್ರ: ಕೊಬ್ಬರಿ ಆಧರಿತ ಉದ್ಯಮ ಸ್ಥಾಪನೆ, ತಾಂತ್ರಿಕ ಶಿಕ್ಷಣಕ್ಕೆ ಪ್ರೋತ್ಸಾಹ, ಕಣಕಟ್ಟೆ, ದೊಡ್ಡ ಮೇಟಿ ಕುರ್ಕೆಗಳಲ್ಲಿ ಬಸ್‌ ನಿಲ್ದಾಣ ನಿರ್ಮಾಣ.

ಸಕಲೇಶಪುರ ಕ್ಷೇತ್ರ : ಪ್ರಾಣಿಗಳ ಹಾವಳಿ ತಡೆಗೆ ಸೋಲಾರ್‌ ಬೇಲಿ, ಮರಳು ಮಾಫಿಯಾ ತಡಗೆ ಕಠಿಣ ಕಾನೂನು.

ಹೊಳೆನರಸೀಪುರ ಕ್ಷೇತ್ರ : ಜವಳಿ ಉದ್ಯಮ ಉತ್ತೇಜಿಸಲು ಸಿದ್ಧ ಉಡುಪು ಕಾರ್ಖಾನೆ ಸ್ಥಾಪನೆ, ಕೆರೆಗಳ ಸಮಗ್ರ ಅಭಿವೃದ್ಧಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದೆ.

ಮುಖಂಡರಾದ ಭುವನಾಕ್ಷ, ಎಚ್.ಎಂ.ಸುರೇಶ್ ಕುಮಾರ್, ವೇಣುಗೋಪಾಲ್ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT