ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget| ಹೂಡಿಕೆ ಹಿಂತೆಗೆತ ಗುರಿ ಕಡಿತ ಸಾಧ್ಯತೆ

Last Updated 1 ಫೆಬ್ರುವರಿ 2023, 4:09 IST
ಅಕ್ಷರ ಗಾತ್ರ

ಮುಂಬೈ (ರಾಯಿಟರ್ಸ್): ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿನ ಹೂಡಿಕೆಯನ್ನು ಹಿಂಪಡೆಯುವ ಮೂಲಕ ಸಂಗ್ರಹಿಸಬಹುದಾದ ವರಮಾನದ ಮೊತ್ತವನ್ನು ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ತುಸು ಕಡಿಮೆ ಮಾಡುವ ಸಾಧ್ಯತೆ ಇದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೂಡಿಕೆ ಹಿಂತೆಗೆತದಿಂದ ಸಂಗ್ರಹಿಸಿದ ಮೊತ್ತವು ಬಜೆಟ್‌ ಅಂದಾಜಿಗಿಂತ ತುಸು ಕಡಿಮೆ ಇದೆ.

‘2022–23ರಲ್ಲಿ ಹೂಡಿಕೆ ಹಿಂತೆಗೆತದಿಂದ ಬಂದ ಮೊತ್ತ ₹ 35 ಸಾವಿರ ಕೋಟಿ ಎಂಬುದು ನಮ್ಮ ಅಂದಾಜು. 2023–24ನೆಯ ಸಾಲಿನಲ್ಲಿ ಹೂಡಿಕೆ ಹಿಂತೆಗೆತದಿಂದ ₹ 50 ಸಾವಿರ ಕೋಟಿ ವರಮಾನ ಸಂಗ್ರಹವಾಗಬಹುದು’ ಎಂದು ಕೋಟಕ್‌ ಇನ್‌ಸ್ಟಿಟ್ಯೂಷನಲ್ ಸೆಕ್ಯುರಿಟೀಸ್‌ ಹೇಳಿದೆ. 2022–23ರಲ್ಲಿ ಹೂಡಿಕೆ ಹಿಂತೆಗೆತದಿಂದ ಒಟ್ಟು ₹ 65 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಕೇಂದ್ರ ಹೊಂದಿದೆ.

ಭಾರತೀಯ ಜೀವ ವಿಮಾ ನಿಗಮ, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಹಾಗೂ ಇತರ ಕೆಲವು ಕಂಪನಿಗಳ ಷೇರುಗಳನ್ನು ಇನ್ನಷ್ಟು ಮಾರಾಟ ಮಾಡುವ ಮೂಲಕ ಕೇಂದ್ರ ಸರ್ಕಾರವು ವರಮಾನ ಸಂಗ್ರಹಿಸಬಹುದು ಎಂದು ಈ ಸಂಸ್ಥೆ ಭಾವಿಸಿದೆ.

2023–24ರಲ್ಲಿ ಬಂಡವಾಳ ಹಿಂತೆಗೆತದ ಮೂಲಕ ₹ 50 ಸಾವಿರ ಕೋಟಿ ಮಾತ್ರ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಬಹುದು ಎಂದು ನೊಮುರ ಕೂಡ ಅಂದಾಜಿಸಿದೆ. ‘ಹೂಡಿಕೆ ಹಿಂತೆಗೆತ ಹಾಗೂ ಖಾಸಗೀಕರಣದ ಪ್ರಕ್ರಿಯೆಯು ವಿಳಂಬವಾಗುವುದು ಮುಂದುವರಿದಿದೆ’ ಎಂದು ಮಾರ್ಗನ್‌ ಸ್ಟ್ಯಾನ್ಲಿ ಹೇಳಿದೆ.

ಹೂಡಿಕೆ ಹಿಂತೆಗೆತದ ಗುರಿಯನ್ನು ಕೇಂದ್ರ ಸರ್ಕಾರವು ಈ ಹಿಂದೆ 32 ಸಂದರ್ಭಗಳ ಪೈಕಿ ಎಂಟು ಬಾರಿ ಮಾತ್ರ ತಲುಪಿದೆ ಎಂದು ‘ಬ್ಯಾಂಕ್‌ ಆಫ್ ಬರೋಡ’ದ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

‘ಮಾರುಕಟ್ಟೆಗಳಿಗೆ ಸ್ಪಷ್ಟ ಚಿತ್ರಣ ಸಿಗಬೇಕು ಎಂದಾದರೆ ಹೂಡಿಕೆ ಹಿಂತೆಗೆತದ ಕುರಿತು ಸ್ಪಷ್ಟತೆ ಬೇಕು’ ಎಂದು ಅವರು ಹೇಳಿದ್ದಾರೆ. ಕೇಂದ್ರವು ಈ ಬಾರಿ ₹ 40 ಸಾವಿರ ಕೋಟಿಯಿಂದ ₹ 50 ಸಾವಿರ ಕೋಟಿವರೆಗೆ ವರಮಾನವನ್ನು ಹೂಡಿಕೆ ಹಿಂತೆಗೆತದ ಮೂಲಕ ಸಂಗ್ರಹಿಸುವ ಗುರಿ ಹೊಂದಬಹುದು ಎಂದು ಅವರು ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT