ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಂತ ವೇಗದ ಬೆಳವಣಿಗೆ ಕಾಣುವತ್ತ ಭಾರತ: ಹಣಕಾಸು ಸಚಿವಾಲಯದ ವರದಿ

Last Updated 10 ನವೆಂಬರ್ 2021, 15:46 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳ ಪೈಕಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಅರ್ಥ ವ್ಯವಸ್ಥೆ ಆಗುವ ಹಾದಿಯಲ್ಲಿ ಭಾರತ ಇದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಬುಧವಾರ ಹೇಳಿದೆ.

ದೇಶದಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯ ಭರದಿಂದ ಸಾಗುತ್ತಿರುವುದು ಹಾಗೂ ಹಬ್ಬಗಳು ಒಂದಾದ ನಂತರ ಒಂದರಂತೆ ಬಂದಿರುವುದು ಅರ್ಥ ವ್ಯವಸ್ಥೆಯ ಚೇತರಿಕೆಗೆ ಇನ್ನಷ್ಟು ಉತ್ತೇಜನ ನೀಡಲಿವೆ. ಇದರಿಂದಾಗಿ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವು ತಗ್ಗಲಿದೆ. ಉದ್ಯೋಗ ಅವಕಾಶಗಳು ಹೆಚ್ಚಲಿವೆ ಎಂದು ಸಚಿವಾಲಯ ಸಿದ್ಧಪಡಿಸಿರುವ ಮಾಸಿಕ ವರದಿಯು ಹೇಳಿದೆ.

‘ಪ್ರಮುಖ ಸುಧಾರಣೆಗಳನ್ನು ಒಳಗೊಂಡಿರುವ ಆತ್ಮನಿರ್ಭರ ಭಾರತ ಯೋಜನೆಯು ದೇಶದ ಅರ್ಥವ್ಯವಸ್ಥೆಯ ಪುನಶ್ಚೇತನದಲ್ಲಿ ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸಲಿದೆ. ದೇಶದಲ್ಲಿ ಹೂಡಿಕೆಯ ಬಂಡಿಯ ಪಯಣ ಆರಂಭವಾಗುವುದಕ್ಕೆ ಭೂಮಿಕೆ ಸಜ್ಜುಗೊಂಡಿದೆ’ ಎಂದು ವರದಿಯು ವಿವರಿಸಿದೆ.

ಹಬ್ಬಗಳ ಋತುವಿನಲ್ಲಿ ದೇಶದ ಅರ್ಥ ವ್ಯವಸ್ಥೆಯ ಚೇತರಿಕೆಯು ಇನ್ನಷ್ಟು ಹುರುಪು ಪಡೆದುಕೊಂಡಿತು. ಅಖಿಲ ಭಾರತ ವರ್ತಕರ ಒಕ್ಕೂಟದ ನೀಡಿರುವ ಮಾಹಿತಿ ಪ್ರಕಾರ ಈ ಬಾರಿಯ ದೀಪಾವಳಿ ಸಂದರ್ಭದಲ್ಲಿನ ಮಾರಾಟದ ಪ್ರಮಾಣವು ಒಂದು ದಶಕದ ಗರಿಷ್ಠ ಮಟ್ಟದಲ್ಲಿದೆ. ಈ ಬಾರಿ ಒಟ್ಟು ₹ 1.3 ಲಕ್ಷ ಕೋಟಿ ಮೌಲ್ಯದ ವಸ್ತುಗಳು ಬಿಕರಿಯಾಗಿವೆ ಎಂದು ಒಕ್ಕೂಟವು ಹೇಳಿದೆ.

ಈಗಿನ ಹಾಗೂ ಮುಂಬರುವ ಆರ್ಥಿಕ ವರ್ಷಗಳಲ್ಲಿ ಪ್ರಮುಖ ದೇಶಗಳ ಪೈಕಿ ಭಾರತವು ಅತ್ಯಂತ ವೇಗದ ಬೆಳವಣಿಗೆ ಸಾಧಿಸಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ಅಂದಾಜು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT