ಬುಧವಾರ, ಸೆಪ್ಟೆಂಬರ್ 30, 2020
20 °C

ಬಿಂದಿ, ಕುಂಕುಮ, ಬಳಪವೂ ಚೀನಾದಿಂದ ಆಮದು!

ಅನ್ನಪೂರ್ಣಾ ಸಿಂಗ್ Updated:

ಅಕ್ಷರ ಗಾತ್ರ : | |

ನವದೆಹಲಿ: ಚೀನಾದಿಂದ ಆಮದಾಗುತ್ತಿರುವ ಏಳೂವರೆ ಸಾವಿರಕ್ಕೂ ಹೆಚ್ಚಿನ ವಸ್ತುಗಳು ಸರ್ಕಾರದ ಗಮನವನ್ನು ಸೆಳೆದಿವೆ. ಎಲೆಕ್ಟ್ರಾನಿಕ್‌ ವಸ್ತುಗಳು, ಬೇರೆ ವಸ್ತುಗಳ ತಯಾರಿಕೆಯಲ್ಲಿ ಬಳಕೆಯಾಗುವ ಕೆಲವು ವಸ್ತುಗಳು, ಯಂತ್ರೋಪಕರಣಗಳಷ್ಟೇ ಚೀನಾದಿಂದ ಆಮದಾಗುತ್ತಿಲ್ಲ. ಸಿಂಧೂರ, ಕುಂಕುಮ, ಬಿಂದಿ, ಲಿಪ್‌ಸ್ಟಿಕ್‌ ಹಾಕಿಕೊಳ್ಳಲು ಬಳಸುವ ಬ್ರಷ್‌ಗಳು, ಪೆನ್ನಿನ ನಿಬ್‌ಗಳು ಕೂಡ ಚೀನಾದಿಂದ ಆಮದಾಗುತ್ತಿವೆ. ಅಲ್ಲಿನ ತಯಾರಿಕಾ ವೆಚ್ಚಕ್ಕಿಂತ ಶೇಕಡ 200ರಿಂದ ಶೇಕಡ 300ರಷ್ಟು ಹೆಚ್ಚಿನ ಬೆಲೆಗೆ ಅವು ಭಾರತವನ್ನು ಪ್ರವೇಶಿಸುತ್ತಿವೆ.

ಇಂತಹ ಉತ್ಪನ್ನಗಳನ್ನು ಗುರುತಿಸಿ, ಪಟ್ಟಿಮಾಡುವ ಪ್ರಕ್ರಿಯೆಯಲ್ಲಿ ಸರ್ಕಾರ ತೊಡಗಿಸಿಕೊಂಡಿದೆ. ಇವುಗಳನ್ನು ಭಾರತದಲ್ಲಿನ ಅತಿಸಣ್ಣ ಮತ್ತು ಸಣ್ಣ ಉದ್ದಿಮೆಗಳು ಸರ್ಕಾರದ ನೆರವಿನೊಂದಿಗೆ ತಯಾರಿಸುವ ನಿರೀಕ್ಷೆ ಇದೆ. ಇದು ವೆಚ್ಚ ಕಡಿತಕ್ಕೆ ನೆರವಾಗುತ್ತದೆ, ಆಮದಿನ ಪ್ರಮಾಣವನ್ನು ತಗ್ಗಿಸುತ್ತದೆ, ತಳಮಟ್ಟದಲ್ಲಿ ಉದ್ಯೋಗ ಸೃಷ್ಟಿಸುತ್ತದೆ ಎಂದು ಅಧಿಕೃತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಇಂತಹ ವಸ್ತುಗಳ ಸುದೀರ್ಘವಾದ ಪಟ್ಟಿ ನಮ್ಮ ಬಳಿ ಇದೆ. ಈ ವಸ್ತುಗಳನ್ನು ನಮ್ಮಲ್ಲಿಯೇ ತಯಾರಿಸಿದರೆ, ತಯಾರಿಕಾ ವೆಚ್ಚವು ಒಂದಕ್ಕೆ 10 ಪೈಸೆಗಿಂತಲೂ ಕಡಿಮೆ ಇರಲಿದೆ. ಆದರೆ, ಹಿಂದೆ ಅವುಗಳನ್ನು ಭಾರತದಲ್ಲಿಯೇ ತಯಾರಿಸುವ ಆಲೋಚನೆ ಯಾರಿಗೂ ಬಂದಿರಲಿಲ್ಲವಾದ ಕಾರಣ, ನಾವು ಅವುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಕಳೆದ ಮೂರರಿಂದ ನಾಲ್ಕು ವರ್ಷಗಳಲ್ಲಿ ನಾವು ಕೆಲವು ವಸ್ತುಗಳ ಆಮದನ್ನು ತಗ್ಗಿಸಿದ್ದೇವೆ, ಹಣದ ಮೌಲ್ಯದ ಲೆಕ್ಕಾಚಾರದಲ್ಲಿಯೂ ಅವುಗಳ ಆಮದು ಕಡಿಮೆಯಾಗಿದೆ’ ಎಂದು ಮೂಲಗಳು ಹೇಳಿವೆ.

‘ಸರಿಸುಮಾರು ಎಂಟು ಸಾವಿರ ವಸ್ತುಗಳು ಒಂದೇ ಕಡೆಯಿಂದ ನಮ್ಮ ದೇಶಕ್ಕೆ ಆಮದಾಗುತ್ತಿವೆ. ಇವುಗಳಲ್ಲಿ ಬಹುತೇಕ ವಸ್ತುಗಳನ್ನು ನಮ್ಮಲ್ಲೇ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಬೆಂಕಿಕಡ್ಡಿ, ಪಾಟಿಯ ಮೇಲೆ ಬರೆಯಲು ಬಳಸುವ ಬಳಪ, ಪೆನ್ನಿನ ನಿಬ್, ಬಾಲ್‌ ಪೆನ್ನುಗಳ ರಿಫಿಲ್‌ ಸೇರಿದಂತೆ ಹಲವು ವಸ್ತುಗಳು ಚೀನಾದಿಂದ ಆಮದಾಗುತ್ತಿವೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಪಟ್ಟಿಮಾಡಿದೆ. ಇವುಗಳನ್ನು ‘ಅಸಮರ್ಥನೀಯ, ಅನಗತ್ಯ ಆಮದು’ ವಸ್ತುಗಳು ಎಂದು ಸುಲಭವಾಗಿ ವರ್ಗೀಕರಿಸಬಹುದು.

‘ಭಾರತವು ಗಣಪತಿಯ ಮೂರ್ತಿಯನ್ನು, ಬಿಂದಿಯನ್ನು ಚೀನಾದಿಂದ ಏಕೆ ಆಮದು ಮಾಡಿಕೊಳ್ಳಬೇಕು? ಇವುಗಳನ್ನು ಭಾರತದ ಉದ್ದಿಮೆಗಳು ಸ್ಥಳೀಯವಾಗಿ ಸಿದ್ಧಪಡಿಸಬಹುದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಚೆಗೆ ಹೇಳಿದ್ದರು.

ಆದರೆ, ಇಂತಹ ಕ್ರಮಗಳು ಸರಿಯಲ್ಲ ಎಂದು ಅರ್ಥಶಾಸ್ತ್ರಜ್ಞ ಅರವಿಂದ್ ಪನಗರಿಯಾ ಕಳೆದ ವಾರ ಹೇಳಿದ್ದರು. ‘ಇವು ವಿಶ್ವ ವ್ಯಾಪಾರ ಸಂಘಟನೆಯ ನಿಯಮಗಳಿಗೆ ವಿರುದ್ಧ. ಇದರಿಂದಾಗಿ ಭವಿಷ್ಯದಲ್ಲಿ ಭಾರತದ ರಫ್ತು ಚಟುವಟಿಕೆಗಳಿಗೆ ತೊಂದರೆ ಆಗಬಹುದು’ ಎಂದು ಎಚ್ಚರಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು