ಬುಧವಾರ, ಮೇ 25, 2022
29 °C
ಭಾರತದಿಂದ 50 ಲಕ್ಷ ಬ್ಯಾರಲ್‌ l ಅಮೆರಿಕದಿಂದ 5 ಕೋಟಿ ಬ್ಯಾರಲ್‌

ಬೆಲೆ ಇಳಿಕೆಗೆ ಸಂಗ್ರಹಾಗಾರದ ತೈಲ ಮಾರುಕಟ್ಟೆಗೆ ಬಿಡುಗಡೆ ಮಾಡಲಿರುವ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ತಗ್ಗಿಸುವ ಉದ್ದೇಶದಿಂದ ಅಮೆರಿಕ, ಚೀನಾ, ಜಪಾನ್ ಜೊತೆಗೂಡಿ ಭಾರತ ಕೂಡ ತನ್ನ ತೈಲ ಸಂಗ್ರಹಾಗಾರಗಳಲ್ಲಿ ಇರುವ ಕಚ್ಚಾ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಭಾರತವು ಒಟ್ಟು 50 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

ಭಾರತವು ಒಟ್ಟು 3.8 ಕೋಟಿ ಬ್ಯಾರೆಲ್‌ ಕಚ್ಚಾ ತೈಲವನ್ನು ಸಂಗ್ರಹಾಗಾರಗಳಲ್ಲಿ ಶೇಖರಿಸಿ ಇಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದೇ ಮೊದಲ ಬಾರಿಗೆ ದೇಶವು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಯನ್ನು ತಗ್ಗಿಸುವ ಉದ್ದೇಶದಿಂದ ಈ ಸಂಗ್ರಹವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಭಾರತವು ಮಾರುಕಟ್ಟೆಗೆ ಬಿಡುಗಡೆ ಮಾಡಲಿರುವ 50 ಲಕ್ಷ ಬ್ಯಾರೆಲ್ ಕಚ್ಚಾ ತೈಲವು ದೇಶದ ಸರಿಸುಮಾರು ಒಂದು
ದಿನದ ತೈಲ ಬೇಡಿಕೆಯನ್ನು ಪೂರೈಸಬಲ್ಲದು.

ಅಮೆರಿಕ ಕೂಡ 5 ಕೋಟಿ ಬ್ಯಾರೆಲ್ ಕಚ್ಚಾತೈಲವನ್ನು ತನ್ನ ಸಂಗ್ರಹಾಗಾರಗಳಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ‘ತೈಲ ಉತ್ಪಾದಿಸುವ ದೇಶಗಳು ತೈಲ ಉತ್ಪಾದನೆಯನ್ನು ಬೇಡಿಕೆಗಿಂತಲೂ ಕಡಿಮೆ ಮಟ್ಟದಲ್ಲಿ ಇರಿಸಿರುವ ವಿಚಾರವಾಗಿ ಭಾರತವು ಮತ್ತೆ ಮತ್ತೆ ಕಳವಳ ವ್ಯಕ್ತಪಡಿಸಿದೆ’ ಎಂದು ಕೇಂದ್ರ ಸರ್ಕಾರದ ಪ್ರಕಟಣೆಯು ಹೇಳಿದೆ. ಕಚ್ಚಾ ತೈಲವನ್ನು ಏಳರಿಂದ ಹತ್ತು ದಿನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೈಲವನ್ನು ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ (ಎಂಆರ್‌ಪಿಎಲ್‌) ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ಗೆ (ಎಚ್‌ಪಿಸಿಎಲ್‌) ಮಾರಾಟ ಮಾಡಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ತೈಲ ಬೆಲೆಯನ್ನು ತಗ್ಗಿಸುವ ಉದ್ದೇಶದಿಂದ ಅಮೆರಿಕವು, ಸಂಗ್ರಹಾಗಾರಗಳಲ್ಲಿ ಇರುವ ಕಚ್ಚಾ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆ ಭಾರತ, ಚೀನಾ, ಜಪಾನ್ ಮತ್ತು ಇತರ ಕೆಲವು ದೇಶಗಳಿಗೆ ಮನವಿ ಮಾಡಿತ್ತು. ಅಮೆರಿಕವು ಈ ರೀತಿಯ ಮನವಿಯನ್ನು ಮಾಡಿದ್ದು ತೀರಾ ಅಪರೂಪ.

ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದು ಮತ್ತೆ ಮತ್ತೆ ಮಾಡಿಕೊಂಡ ಮನವಿಯನ್ನು ಒ‍‍ಪೆಕ್ (ಪೆಟ್ರೋಲಿಯಂ ಉತ್ಪನ್ನಗಳ ರಫ್ತುದಾರ ದೇಶಗಳು) ಒಕ್ಕೂಟವು ತಿರಸ್ಕರಿಸಿದ ನಂತರದಲ್ಲಿ ಅಮೆರಿಕ, ಭಾರತ ಮತ್ತು ಇತರ ದೇಶಗಳು ಈ ಕ್ರಮಕ್ಕೆ ಮುಂದಾಗಿವೆ. ಬ್ರೆಂಟ್ ಕಚ್ಚಾ ತೈಲದ ಬೆಲೆಯು ವಾರದ ಹಿಂದೆ ಬ್ಯಾರೆಲ್‌ಗೆ 86.40 ಡಾಲರ್‌ ಇದ್ದಿದ್ದು ಈಗ 78 ಡಾಲರ್‌ಗೆ ಇಳಿದಿದೆ.

ಕಚ್ಚಾ ತೈಲವನ್ನು ಸಂಗ್ರಹಾಗಾರದಿಂದ ಹೊರಕ್ಕೆ ತರುವ ಕೆಲಸ ಆರಂಭಿಸಿರುವುದಾಗಿ ಚೀನಾ ಹೇಳಿದೆ. ಜಪಾನ್ ಕೂಡ ಇಂಥದ್ದೇ ಕ್ರಮಕ್ಕೆ ಸಿದ್ಧವಿರುವುದಾಗಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು