ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೈರಿ ಉದ್ಯಮದಲ್ಲಿ ಶೇ 11ರಷ್ಟು ಬೆಳವಣಿಗೆ: ಐಸಿಆರ್‌ಎ

Last Updated 9 ನವೆಂಬರ್ 2021, 14:44 IST
ಅಕ್ಷರ ಗಾತ್ರ

ಮುಂಬೈ: ದೇಶದ ಡೈರಿ ಉದ್ಯಮವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 9ರಿಂದ ಶೇ 11ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ ಎಂದು ದೇಶಿ ರೇಟಿಂಗ್ಸ್‌ ಸಂಸ್ಥೆ ಐಸಿಆರ್‌ಎ ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ.

ಆರ್ಥಿಕ ಚಟುವಟಿಕೆಗಳು ಚುರುಕು ಪಡೆಯುತ್ತಿರುವುದು, ಹಾಲು ಮತ್ತು ಹಾಲಿನ ಉತ್ಪನ್ನಗಳ ಬಳಕೆ ಹೆಚ್ಚುತ್ತಿರುವುದು, ನಗರೀಕರಣದ ಪರಿಣಾಮವಾಗಿ ಆಹಾರ ಬಳಕೆಯಲ್ಲಿ ಬದಲಾವಣೆಗಳು ಆಗುತ್ತಿರುವುದು ಈ ಬೆಳವಣಿಗೆಗೆ ಕಾರಣ ಎಂದು ಅದು ಹೇಳಿದೆ.

ಡೈರಿ ಉದ್ಯಮಕ್ಕೆ ಸರ್ಕಾರದ ಬೆಂಬಲವು ಮುಂದುವರಿಯಲಿರುವುದು ಕೂಡ ಈ ಉದ್ಯಮದ ಬೆಳವಣಿಗೆಗೆ ಕಾರಣ ಆಗಲಿದೆ ಎಂದು ಸಂಸ್ಥೆಯು ಹೇಳಿದೆ. ಹಾಲಿ ಹಣಕಾಸು ವರ್ಷದಲ್ಲಿ ದೇಶದಲ್ಲಿ ಹಾಲಿನ ಉತ್ಪಾದನೆಯು ಶೇಕಡ 5ರಿಂದ ಶೇ 6ರಷ್ಟು ಹೆಚ್ಚಳ ಆಗಲಿದೆ ಎಂದು ಅದು ಅಂದಾಜು ಮಾಡಿದೆ.

‘ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗಿದ್ದ ಕಾರಣದಿಂದಾಗಿ ಡೈರಿ ಉತ್ಪನ್ನಗಳ ಬೇಡಿಕೆ ಹೆಚ್ಚಾಗುವುದಕ್ಕೆ ಅಡ್ಡಿ ಉಂಟಾಗಿತ್ತು. ಸಂಸ್ಥೆಗಳಿಂದ ಬರುವ ಬೇಡಿಕೆಯು ಬಹಳ ಕಡಿಮೆ ಆಗಿತ್ತು. ಆದರೆ, ಈಚಿನ ಕೆಲವು ತಿಂಗಳುಗಳಲ್ಲಿ ಬೇಡಿಕೆಯಲ್ಲಿ ಆರೋಗ್ಯಕರ ಚೇತರಿಕೆ ಕಂಡುಬಂದಿದೆ. ಡೈರಿ ಉದ್ಯಮದ ಸಂಘಟಿತ ವಲಯದಲ್ಲಿ ತ್ವರಿತ ಬೆಳವಣಿಗೆ ದಾಖಲಾಗಿದೆ, ಇದು ಇದೇ ಉದ್ಯಮದಲ್ಲಿನ ಅಸಂಘಟಿತ ವಲಯದಲ್ಲಿನ ಬೆಳವಣಿಗೆ ಪ್ರಮಾಣಕ್ಕಿಂತ ಜಾಸ್ತಿ. ಪರಿಸ್ಥಿತಿ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ’ ಎಂದು ಐಸಿಆರ್‌ಎ ಉಪಾಧ್ಯಕ್ಷೆ ಶೀತಲ್ ಶರದ್ ಹೇಳಿದ್ದಾರೆ.

ಹಾಲಿನ ಬೇಡಿಕೆಯು ಶೇ 6ರಿಂದ ಶೇ 7ರ ಮಟ್ಟದಲ್ಲಿ ಸ್ಥಿರ ಏರಿಕೆ ಕಾಣಬಹುದು. ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳ ಬೇಡಿಕೆಯಲ್ಲಿ ಶೇ 13ರಿಂದ ಶೇ 15ರಷ್ಟು ಏರಿಕೆ ಆಗಬಹುದು. ಆದರೆ, ಮೌಲ್ಯವರ್ಧಿತ ಉತ್ಪನ್ನಗಳ ಪೈಕಿ ಐಸ್‌ಕ್ರೀಂ ಮತ್ತು ಶೀತಲೀಕರಿಸಿದ ಯೋಗರ್ಟ್‌ನಂತಹ ಉತ್ಪನ್ನಗಳ ಬೇಡಿಕೆ ಹೆಚ್ಚಳವು ದೊಡ್ಡ ಮಟ್ಟದಲ್ಲಿ ಇರಲಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT