ಶುಕ್ರವಾರ, ಜುಲೈ 30, 2021
27 °C
2020–21ನೇ ಹಣಕಾಸು ವರ್ಷಕ್ಕೆ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಅಂದಾಜು

ಕೋವಿಡ್‌ ಪರಿಣಾಮ: ಜಿಡಿಪಿ ಶೇ 4ಕ್ಕೆ ಕುಸಿಯಲಿದೆ

ಪಿಟಿಐ Updated:

ಅಕ್ಷರ ಗಾತ್ರ : | |

ಜಿಡಿಪಿ ಇಳಿಕೆ–ಸಾಂಕೇತಿಕ ಚಿತ್ರ

ನವದೆಹಲಿ: ಕೋವಿಡ್‌ ಬಿಕ್ಕಟ್ಟಿನಿಂದಾಗಿ ಭಾರತದ ಆರ್ಥಿಕತೆಯು 2020–21ನೇ ಹಣಕಾಸು ವರ್ಷದಲ್ಲಿ ಶೇ 4ಕ್ಕೆ ಕುಸಿತ ಕಾಣಲಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಹೇಳಿದೆ. 

2021–22ರಲ್ಲಿ ಜಿಡಿಪಿಯು ಶೇ 5ರಷ್ಟು ಬೆಳವಣಿಗೆ ಕಾಣಲಿದೆ ಎಂದೂ ಹೇಳಿದೆ.

2019–20ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿಶೇ 3.1ರಷ್ಟು ಬೆಳವಣಿಗೆ ಸಾಧಿಸಿತ್ತು. ಇದು 2003ರ ನಂತರ ದಾಖಲಾಗಿರುವ ಕನಿಷ್ಠ ಮಟ್ಟವಾಗಿದೆ. 2019–20ನೇ ಹಣಕಾಸು ವರ್ಷಕ್ಕೆ ಶೇ 4.2ರಷ್ಟು ಬೆಳವಣಿಗೆ ಕಂಡಿದೆ. ಇದು 11 ವರ್ಷಗಳಲ್ಲಿನ ಅತ್ಯಂತ ನಿಧಾನ ಗತಿಯ ಪ್ರಗತಿಯಾಗಿದೆ.

ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ ಏಪ್ರಿಲ್‌ನಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಲಾಕ್‌ಡೌನ್‌ನಿಂದಾಗಿ ನಗರ ಪ್ರದೇಶಗಳಲ್ಲಿ ಉದ್ಯೋಗ ಕಳೆದುಕೊಂಡ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಲಾಕ್‌ಡೌನ್‌ ಸಂಪೂರ್ಣವಾಗಿ ಸಡಿಲಿಸಿದರೂ ವಲಸೆ ಕಾರ್ಮಿಕರು ನಗರಗಳಿಗೆ ಮರಳುವ ಸಾಧ್ಯತೆಗಳು ಕಡಿಮೆ ಇವೆ ಎಂದು ವಿವರಿಸಿದೆ.

‘ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಚೇತರಿಕೆ ಕಾಣುತ್ತಿದ್ದರೂ ಏಷ್ಯಾ ಮತ್ತು ಪೆಸಿಫಿಕ್‌ ಪ್ರದೇಶಗಳ ಆರ್ಥಿಕತೆಯ ಮೇಲೆ ಕೋವಿಡ್‌ ಪರಿಣಾಮ ಬೀರಲಿದೆ’ ಎಂದು ಎಡಿಬಿಯ ಮುಖ್ಯ ಆರ್ಥಿಕ ತಜ್ಞ ವಸುಯುಕಿ ಸವಾಡಾ ಹೇಳಿದ್ದಾರೆ.

‘2021–22ರಲ್ಲಿ ಭಾರಿ ಚೇತರಿಕೆ ಕಾಣಲಿದೆ ಎಂದು ಹೇಳಲು ಆಗುವುದಿಲ್ಲ. ಕೋವಿಡ್‌ ಪರಿಣಾಮದಿಂದ ಹೊರಬರಲು ಕೇಂದ್ರ ಸರ್ಕಾರವು ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದರೆ ಮಾತ್ರವೇ ಶೇ 5ರಷ್ಟು ಬೆಳವಣಿಗೆ ಸಾಧ್ಯವಾಗಲಿದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಜಿಡಿಪಿ ಬೆಳವಣಿಗೆಯು ನಕಾರಾತ್ಮಕ ಮಟ್ಟದಲ್ಲಿ ಇರಲಿದೆ ಎಂದು ಮೇನಲ್ಲಿಯೇ ಅಂದಾಜು ಮಾಡಿತ್ತು. ಆದರೆ ಯಾವುದೇ ಅಂಕಿ–ಅಂಶ ನೀಡಿಲ್ಲ. 

ಜಿಡಿಪಿ ಅಂದಾಜು (%)

ವಿಶ್ವಬ್ಯಾಂಕ್‌; 3.2

ಎಡಿಬಿ; 4

ಮೂಡೀಸ್‌ ಇನ್‌ವೆಸ್ಟರ್ಸ್‌; 4

ಫಿಚ್‌ ರೇಟಿಂಗ್ಸ್‌; 5

ಎಸ್‌ಆ್ಯಂಡ್‌ಪಿ; 5.2

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು