ಬುಧವಾರ, ಜೂನ್ 29, 2022
25 °C
ಷೇರು ಮಾರುಕಟ್ಟೆ ತಜ್ಞರ ಅನಿಸಿಕೆ: ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಇಳಿಕೆ

ವಾರ್ಷಿಕ ಕುಸಿತ ದಾಖಲಿಸಲಿದೆ ಷೇರುಪೇಟೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತದ ಷೇರು ಮಾರುಕಟ್ಟೆಗಳು ಪ್ರಸಕ್ತ ವರ್ಷದಲ್ಲಿ ಕುಸಿತ ದಾಖಲಿಸಲಿವೆ. ಏಳು ವರ್ಷಗಳ ನಂತರದಲ್ಲಿ ಇದೇ ಮೊದಲ ಬಾರಿಗೆ ಅವು ವಾರ್ಷಿಕ ಇಳಿಕೆ ಕಾಣಲಿವೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆಯ ಸಮೀಕ್ಷೆ ಹೇಳಿದೆ.

ಬ್ಯಾಂಕ್‌ ಬಡ್ಡಿ ದರ ಹೆಚ್ಚಾಗುತ್ತಿರುವುದು, ಆರ್ಥಿಕ ಬೆಳವಣಿಗೆಯ ಅಂದಾಜು ತಗ್ಗುತ್ತಿರುವುದು ಮಾರುಕಟ್ಟೆಗಳು ತಕ್ಷಣದಲ್ಲಿ ಚೇತರಿಕೆ ಕಾಣುವ ಸಾಧ್ಯತೆಯನ್ನು ಕಡಿಮೆ ಮಾಡಿವೆ ಎಂದು ಸಮೀಕ್ಷೆಯು ತಿಳಿಸಿದೆ.

ದೇಶದಲ್ಲಿ ಹಾಗೂ ಜಗತ್ತಿನ ಹಲವೆಡೆ ಹಣದುಬ್ಬರ ಪ್ರಮಾಣ ಜಾಸ್ತಿ ಆಗುತ್ತಿದೆ. ಅದಾಗಲೇ ತೊಂದರೆಗೆ ಸಿಲುಕಿದ್ದ ಪೂರೈಕೆ ವ್ಯವಸ್ಥೆಯು ರಷ್ಯಾ–ಉಕ್ರೇನ್ ಯುದ್ಧದ ಕಾರಣದಿಂದಾಗಿ ಮತ್ತಷ್ಟು ಹಾಳಾಗಿದೆ. ಇದರಿಂದಾಗಿ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರ ಜಾಸ್ತಿ ಮಾಡುತ್ತಿವೆ. ಹೀಗಾಗಿ, ರಿಸ್ಕ್ ಜಾಸ್ತಿ ಇರುವ ಹೂಡಿಕೆಗಳಿಂದ ಬಂಡವಾಳವು ಹಿಂದಕ್ಕೆ ಹೋಗುತ್ತಿದೆ.

ದೇಶದ ಪ್ರಮುಖ ಷೇರುಪೇಟೆ ಸೂಚ್ಯಂಕವಾದ ಸೆನ್ಸೆಕ್ಸ್ ಈ ವರ್ಷದಲ್ಲಿ ಶೇಕಡ 7ರಷ್ಟು ಕುಸಿದಿದೆ. ಈ ವರ್ಷದ ಗರಿಷ್ಠ ಮಟ್ಟವಾದ ಜನವರಿ 18ರ 61,475 ಅಂಶಗಳಿಗೆ ಹೋಲಿಸಿದರೆ ಶೇ 12ರಷ್ಟು ಇಳಿಕೆ ಕಂಡಿದೆ. ಜನವರಿಯಲ್ಲಿ ಕಂಡಿದ್ದ ಗರಿಷ್ಠ ಮಟ್ಟಕ್ಕೆ ಸೆನ್ಸೆಕ್ಸ್‌ ಸದ್ಯದಲ್ಲಿ ಮತ್ತೆ ತಲುಪುವ ನಿರೀಕ್ಷೆ ಇಲ್ಲ.

ವಿಶ್ವದ ಪ್ರಮುಖ ಷೇರುಪೇಟೆಗಳ ಸೂಚ್ಯಂಕಗಳನ್ನೆಲ್ಲ ಆಧರಿಸಿದ ಸೂಚ್ಯಂಕವಾದ ಎಂಎಸ್‌ಸಿಐ ಎಸಿಡಬ್ಲ್ಯುಐ ಸೂಚ್ಯಂಕವು ಈ ವರ್ಷದಲ್ಲಿ ಶೇ 16ಕ್ಕಿಂತ ಹೆಚ್ಚು ಕುಸಿದಿದೆ. ಇದಕ್ಕೆ ಹೋಲಿಸಿದರೆ ಸೆನ್ಸೆಕ್ಸ್‌ನ ಕುಸಿತದ ಪ್ರಮಾಣ ಕಡಿಮೆ ಇದೆ.

ರಾಯಿಟರ್ಸ್ ಸುದ್ದಿಸಂಸ್ಥೆಯು ಸಮೀಕ್ಷೆಯ ಭಾಗವಾಗಿ 30 ಜನ ಷೇರುಪೇಟೆ ತಜ್ಞರ ಅಭಿಪ್ರಾಯ ಸಂಗ್ರಹಿಸಿದೆ. ಮೇ 13ರಿಂದ 24ರ ನಡುವೆ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ವರ್ಷದ ಅಂತ್ಯದ ಹೊತ್ತಿಗೆ ಸೆನ್ಸೆಕ್ಸ್ 56 ಸಾವಿರ ಅಂಶಗಳಿಗೆ ತಲುಪಬಹುದು ಎಂದು ಅವರು ಅಂದಾಜಿಸಿದ್ದಾರೆ. ಈ ರೀತಿ ಆದಲ್ಲಿ, 2015ರ ನಂತರ ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ ವಾರ್ಷಿಕ ಕುಸಿತ ದಾಖಲಿಸಲಿದೆ.

‘ಸದ್ಯದಲ್ಲಿ ದೇಶದ ಷೇರು ಮಾರುಕಟ್ಟೆಗಳಿಂದ ಅಸ್ಥಿರತೆ ದೂರವಾಗುವ ಯಾವ ಸೂಚನೆಗಳೂ ಇಲ್ಲ’ ಎಂದು ಮಾರುಕಟ್ಟೆ ತಜ್ಞ ರಜತ್ ಅಗರ್ವಾಲ್ ಹೇಳಿದ್ದಾರೆ. 2023ರ ಕೊನೆಯ ವೇಳೆಗೆ ಸೆನ್ಸೆಕ್ಸ್ 60 ಸಾವಿರ ಅಂಶಗಳನ್ನು ತಲುಪಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಆದರೆ, ಸದ್ಯದಲ್ಲಿ ಅಸ್ಥಿರತೆಯು ತೀವ್ರವಾಗಿರಲಿದೆ ಎಂದು ಹೇಳಿದ್ದಾರೆ.

ಮುಂದಿನ ಮೂರು ತಿಂಗಳಲ್ಲಿ ಅಸ್ಥಿರತೆಯು ಹೆಚ್ಚಾಗಲಿದೆ ಎಂದು ಶೇ 70ರಷ್ಟು ತಜ್ಞರು ಅಂದಾಜು ಮಾಡಿದ್ದಾರೆ. ಷೇರುಪೇಟೆಗಳಲ್ಲಿನ ನಕಾರಾತ್ಮಕ ವಹಿವಾಟು ಇನ್ನೂ ಮೂರು ತಿಂಗಳು ಮುಂದುವರಿಯಲಿದೆ ಎಂದು ಶೇ 80ರಷ್ಟು ಮಂದಿ ಅಂದಾಜಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು