ಸೋಮವಾರ, ಡಿಸೆಂಬರ್ 9, 2019
17 °C

ಭಾರತದ ಆರ್ಥಿಕತೆಯ ಬೆಳವಣಿಗೆ ನಿರೀಕ್ಷೆಗಿಂತ ದುರ್ಬಲ: ಐಎಂಎಫ್‌

Published:
Updated:

ವಾಷಿಂಗ್ಟನ್‌: ಭಾರತದ ಆರ್ಥಿಕ ಬೆಳವಣಿಗೆಯು ನಿರೀಕ್ಷೆಗಿಂತ ಹೆಚ್ಚು ದುರ್ಬಲವಾಗಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ವಿಶ್ಲೇಷಿಸಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ (ಎನ್‌ಬಿಎಫ್‌ಸಿ) ನಗದು ಬಿಕ್ಕಟ್ಟು ಮತ್ತು ಅರ್ಥ ವ್ಯವಸ್ಥೆಯ ವಿವಿಧ ವಲಯಗಳಲ್ಲಿನ ಅನಿಶ್ಚಿತತೆಯಿಂದಾಗಿ ಇತ್ತೀಚಿನ ಆರ್ಥಿಕ ಬೆಳವಣಿಗೆ ದರ ನಿರೀಕ್ಷೆಗಿಂತ ಕಡಿಮೆ ಇದೆ. ವೃದ್ಧಿ ದರ ಕುರಿತ ಮುನ್ನೋಟವು ಆರ್ಥಿಕ ಕುಸಿತದತ್ತ ಹೆಚ್ಚು ವಾಲುತ್ತಿದೆ. ಭಾರತದಲ್ಲಿನ ಆರ್ಥಿಕ ಪರಿಸ್ಥಿತಿ ಮೇಲೆ ನಿರಂತರವಾಗಿ ನಿಗಾ ಇರಿಸಲಾಗಿದೆ. ಮುಂಬರುವ ದಿನಗಳಲ್ಲಿ ಪ್ರಕಟಿಸಲಿರುವ ಜಾಗತಿಕ ಆರ್ಥಿಕ ಮುನ್ನೋಟದಲ್ಲಿ ಭಾರತದ ಆರ್ಥಿಕತೆಯ ಪ್ರಗತಿ ಕುರಿತ ಅಂದಾಜು ಮಾಡಲಾಗುವುದು’ ಎಂದು ಐಎಂಎಫ್‌ ವಕ್ತಾರ ಜೆರ್ರಿ ರೈಸ್‌ ಹೇಳಿದ್ದಾರೆ.

2019 ಮತ್ತು 2020ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು ಶೇ 0.3ರಷ್ಟು ಕಡಿಮೆ ಇರಲಿದೆ ಎಂದು ಐಎಂಎಫ್‌ ಜುಲೈ ತಿಂಗಳಲ್ಲಿ ತನ್ನ ಈ ಹಿಂದಿನ ಅಂದಾಜನ್ನು ಪರಿಷ್ಕರಿಸಿತ್ತು. ಆಂತರಿಕ ಬೇಡಿಕೆಯು ನಿರೀಕ್ಷೆಗಿಂತ ಕಡಿಮೆ ಮಟ್ಟದಲ್ಲಿ ಇರುವುದರಿಂದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಕ್ರಮವಾಗಿ ಶೇ 7 ಮತ್ತು ಶೇ 7.2ರಷ್ಟು ಬೆಳವಣಿಗೆ ಕಾಣಲಿದೆ ಎಂದು ತಿಳಿಸಿದೆ.

ಆರ್ಥಿಕ ವೃದ್ಧಿ ದರವು ಸದ್ಯಕ್ಕೆ ಕಡಿಮೆ ಮಟ್ಟದಲ್ಲಿ ಇದ್ದರೂ, ಭಾರತದ ಬೆಳವಣಿಗೆ ದರವು ಈಗಲೂ ವಿಶ್ವದಲ್ಲೇ ಅತಿ ಹೆಚ್ಚಿನ ವೇಗದಲ್ಲಿ ಬೆಳವಣಿಗೆ ಕಾಣುತ್ತಿದೆ. ಚೀನಾಕ್ಕಿಂತ ಸಾಕಷ್ಟು ಮುಂಚೂಣಿಯಲ್ಲಿ ಇದೆ ಎಂದು ವಾಷಿಂಗ್ಟನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ  ಜಾಗತಿಕ ಹಣಕಾಸು ಸಂಸ್ಥೆ ಅಭಿಪ್ರಾಯಪಟ್ಟಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು