ಭಾನುವಾರ, ಸೆಪ್ಟೆಂಬರ್ 19, 2021
24 °C

ಚಿನ್ನಕ್ಕೆ ಬೇಡಿಕೆ ಶೇ 19ರಷ್ಟು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತದಲ್ಲಿ ಚಿನ್ನದ ಬೇಡಿಕೆಯು ಏಪ್ರಿಲ್‌–ಜೂನ್‌ ತ್ರೈಮಾಸಿಕ ಅವಧಿಯಲ್ಲಿ ಶೇಕಡ 19.2ರಷ್ಟು ಏರಿಕೆ ಆಗಿದ್ದು, 76.1 ಟನ್‌ಗೆ ತಲುಪಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ಹೇಳಿದೆ.

ಡಬ್ಲ್ಯುಜಿಸಿ ಸಿದ್ಧಪಡಿಸಿರುವ 2021ರ ಚಿನ್ನದ ಬೇಡಿಕೆಯ ಕುರಿತ ಎರಡನೇ ತ್ರೈಮಾಸಿಕದ ವರದಿಯ ಪ್ರಕಾರ, 2020ರ ಕ್ಯಾಲೆಂಡರ್‌ ವರ್ಷದ ಎರಡನೇ ತ್ರೈಮಾಸಿಕದಲ್ಲಿ 63.8 ಟನ್‌ಗಳಷ್ಟು ಚಿನ್ನಕ್ಕೆ ಬೇಡಿಕೆ ಇತ್ತು.

ಮೌಲ್ಯದ ಲೆಕ್ಕದಲ್ಲಿ ಚಿನ್ನದ ಬೇಡಿಕೆಯು ಶೇ 23ರಷ್ಟು ಹೆಚ್ಚಾಗಿದ್ದು ₹ 26,600 ಕೋಟಿಗಳಿಂದ ₹ 32,810 ಕೋಟಿಗಳಿಗೆ ಏರಿಕೆ ಆಗಿದೆ.

2021ರ ಮೊದಲಾರ್ಧದಲ್ಲಿ ಚಿನ್ನದ ಬೇಡಿಕೆಯು 157.6 ಟನ್‌ಗಳಷ್ಟಾಗಿದೆ. 2019ರ ಮೊದಲಾರ್ಧದಲ್ಲಿ ಇದ್ದ ಬೇಡಿಕೆಗೆ ಹೋಲಿಸಿದರೆ ಶೇ 46ರಷ್ಟು ಇಳಿಕೆ ಆಗಿದೆ.

2021ರ ಎರಡನೇ ತ್ರೈಮಾಸಿಕದ ವೇಳೆಗೆ ಕೋವಿಡ್‌ ಸೋಂಕು ಹೆಚ್ಚಾಗಿದ್ದರಿಂದ ಸ್ಥಳೀಯ ಮಟ್ಟದಲ್ಲಿ ಲಾಕ್‌ಡೌನ್‌ ಜಾರಿಗೊಂಡಿತು. ಕಳೆದ ವರ್ಷ ಅನಿರೀಕ್ಷಿತವಾಗಿ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಆಗಿದ್ದ ಪರಿಣಾಮಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರಸ್ಥರು ಮೊದಲೇ ಸಿದ್ಧತೆ ನಡೆಸಿದ್ದರಿಂದ ಹೆಚ್ಚಿನ ದುಷ್ಪರಿಣಾಮ ಉಂಟಾಗಲಿಲ್ಲ.

ಎರಡನೇ ತ್ರೈಮಾಸಿಕದಲ್ಲಿ ಬೇಡಿಕೆಯು ಶೇ 19.2ರಷ್ಟು ಹೆಚ್ಚಾಗಿದೆಯಾದರೂ ಅಕ್ಷಯ ತೃತೀಯ ಮತ್ತು ಮದುವೆ ಸಮಾರಂಭಗಳ ಮೇಲೆ ಕೋವಿಡ್‌ ತೀವ್ರ ಪರಿಣಾಮ ಬೀರಿದ್ದರಿಂದ ಬೇಡಿಕೆ ಹೆಚ್ಚು ತಗ್ಗುವಂತಾಯಿತು ಎಂದು ಡಬ್ಲ್ಯುಜಿಸಿನ ಭಾರತದ ಪ್ರಾದೇಶಿಕ ಸಿಇಒ ಸೋಮಸುಂದರಂ ಪಿಆರ್‌ ತಿಳಿಸಿದ್ದಾರೆ.

ಚಿನ್ನಾಭರಣ ಬೇಡಿಕೆಯು ಶೇ 29ರಷ್ಟು ಹೆಚ್ಚಾಗಿ ₹ 18,350 ಕೋಟಿಗಳಿಂದ ₹ 23,750 ಕೋಟಿಗಳಿಗೆ ಏರಿಕೆ ಕಂಡಿದೆ.

ಒಟ್ಟಾರೆ ಚಿನ್ನದ ಮೇಲಿನ ಹೂಡಿಕೆಯು ಶೇ 6ರಷ್ಟು ಹೆಚ್ಚಾಗಿದ್ದು 21 ಟನ್‌ಗಳಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 19.8 ಟನ್‌ಗಳಷ್ಟಿತ್ತು.

ಚಿನ್ನದ ಹೂಡಿಕೆಗಳಿಗೆ ಬೇಡಿಕೆಯು ಮೌಲ್ಯದ ಲೆಕ್ಕದಲ್ಲಿ ₹ 8,250 ಕೋಟಿಗಳಿಂದ ₹ 9,060 ಕೋಟಿಗಳಿಗೆ ಹೆಚ್ಚಾಗಿದೆ.

ಅಂಕಿ–ಅಂಶ

ಚಿನ್ನ ಆಮದು

120 ಟನ್‌

2021ರ ಎರಡನೇ ತ್ರೈಮಾಸಿಕ

10.9 ಟನ್‌

2020ರ ಎರಡನೇ ತ್ರೈಮಾಸಿಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು