ಬೆಂಗಳೂರು: ಆಮದು ಮೇಲಿನ ಸುಂಕ ಕಡಿತದಿಂದಾಗಿ ಮುಂಬರುವ ಹಬ್ಬದ ಋತುವಿನಲ್ಲಿ ಭಾರತದಲ್ಲಿ ಚಿನ್ನದ ಖರೀದಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವಿಶ್ವ ಚಿನ್ನ ಮಂಡಳಿಯ ಭಾರತೀಯ ಕಾರ್ಯಾಚರಣೆಯ ಸಿಇಒ ಸಚಿನ್ ಜೈನ್ ಹೇಳಿದ್ದಾರೆ.
ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಚಿನ್ನದ ಮೇಲಿನ ಆಮದು ಸುಂಕವನ್ನು ಶೇ 15 ರಿಂದ ಶೇ 6ಕ್ಕೆ ಇಳಿಸಿದೆ.
ಆಮದು ಸುಂಕದಲ್ಲಿನ ಈ ಕಡಿತವು ಗ್ರಾಹಕರನ್ನು ಆಕರ್ಷಿಸುವಂತೆ ಮಾಡಿದ್ದು, ಚಿನ್ನ ಖರೀದಿಸಲು ಉತ್ತೇಜನ ನೀಡಿದೆ. ಆದರೆ, ಚಿನ್ನದ ಹೆಚ್ಚಿನ ಆಮದು ದೇಶದ ವ್ಯಾಪಾರ ಕೊರತೆಯನ್ನು ಹೆಚ್ಚಿಸುವುದಲ್ಲದೇ, ರೂಪಾಯಿ ಮೌಲ್ಯದ ಮೇಲೆ ಒತ್ತಡ ಸೃಷ್ಟಿಸಬಹುದು ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ವರ್ಷದ ಅಂತ್ಯದ ವೇಳೆಗೆ ಮದುವೆಯ ಋತು, ದಸರಾ, ದೀಪಾವಳಿ ಸೇರಿದಂತೆ ಪ್ರಮುಖ ಹಬ್ಬದಿಂದ ದೇಶದಲ್ಲಿ ಚಿನ್ನದ ಬೇಡಿಕೆಯು ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.
‘ಸುಂಕ ಕಡಿತವು ಚಿಲ್ಲರೆ ಗ್ರಾಹಕರಲ್ಲಿ ಖರೀದಿಸುವ ಭಾವನೆಯನ್ನು ಸೃಷ್ಟಿಸಿದೆ. ಸುಂಕ ಕಡಿತ ಮಾಡದಿದ್ದರೆ, ಈ ವೇಳೆಗೆ 10 ಗ್ರಾಂ ಚಿನ್ನದ ಬೆಲೆಯು ಗರಿಷ್ಠ ₹80,000ಕ್ಕೆ ತಲುಪುತ್ತಿತ್ತು. ಆದರೆ ಈಗ ಅದಕ್ಕಿಂತ ಕಡಿಮೆ ಇದೆ’ ಎಂದು ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಆಶರ್ ಒ. ತಿಳಿಸಿದ್ದಾರೆ.