ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವೇಗದ ಬೆಳವಣಿಗೆ ದರ ವಿಶ್ವಕ್ಕೇ ಧನಾತ್ಮಕ: ಐಎಂಎಫ್ ಎಂಡಿ

Last Updated 21 ಏಪ್ರಿಲ್ 2022, 2:44 IST
ಅಕ್ಷರ ಗಾತ್ರ

ವಾಷಿಂಗ್ಟನ್: ಇತ್ತೀಚಿನ ವಿಶ್ವ ಆರ್ಥಿಕ ಮುನ್ನೋಟದಲ್ಲಿ ಭಾರತದ ಬೆಳವಣಿಗೆ ದರದಲ್ಲಿ ಹೆಚ್ಚಳ ಕಂಡುಬಂದಿರುವುದು ಆ ದೇಶಕ್ಕೆ ಆರೋಗ್ಯಕರ ಬೆಳವಣಿಗೆ ಮಾತ್ರವಲ್ಲದೆ ವಿಶ್ವಕ್ಕೇ ಧನಾತ್ಮಕ ಸುದ್ದಿಯಾಗಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ.

2022ರಲ್ಲಿ ಭಾರತವು ದೃಢವಾದ ಬೆಳವಣಿಗೆ ಹೊಂದಿರಲಿದ್ದು, ಬೆಳವಣಿಗೆ ದರ ಶೇಕಡ 8.2 ರಷ್ಟು ಇರಲಿದೆ ಎಂದು ವಾರದ ಹಿಂದಷ್ಟೆ ಐಎಂಎಫ್ ಹೇಳಿತ್ತು. ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದ್ದು, ಚೀನಾದ ಶೇಕಡ 4.4ಕ್ಕಿಂತ ಎರಡು ಪಟ್ಟು ವೇಗವಾಗಿರುತ್ತದೆ ಎಂದೂ ಹೇಳಿತ್ತು.

2022ರಲ್ಲಿ ಜಾಗತಿಕ ಬೆಳವಣಿಗೆ ದರವನ್ನು ಶೇಕಡಾ 3.6ರಷ್ಟು ಎಂದು ಅಂದಾಜಿಸಲಾಗಿದೆ.

‘ಭಾರತವು ಹೆಚ್ಚಿನ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಈ ವರ್ಷವು ಶೇಕಡ 8.2 ರಷ್ಟು ಬೆಳವಣಿಗೆ ದರ ನಿರೀಕ್ಷಿಸಲಾಗಿದೆ. ಇದು ಭಾರತದ ಆರ್ಥಿಕತೆಗೆ ಆರೋಗ್ಯಕರ ಬೆಳವಣಿಗೆ ಮಾತ್ರವಲ್ಲದೆ ಜಗತ್ತಿಗೇ ಧನಾತ್ಮಕವಾಗಿದೆ’ಎಂದು ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಜಾರ್ಜಿವಾ ತಿಳಿಸಿದರು.

ಸೋಮವಾರ ಅವರು ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿದ್ದರು..

ಭಾರತ ಈಗಾಗಲೇ ಅತ್ಯಂತ ಮಹತ್ವದ ಅಂತರರಾಷ್ಟ್ರೀಯ ಪಾತ್ರವನ್ನು ವಹಿಸುತ್ತಿದೆ ಎಂದೂ ಅವರು ಹೇಳಿದ್ದಾರೆ.

‘ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಲಸಿಕೆಗಳನ್ನು ರಫ್ತು ಮಾಡುವ ಮೂಲಕ ಜಾಗತಿಕ ಸಾರ್ವಜನಿಕ ಒಳಿತಿಗೆ ಭಾರತ ಶ್ರಮಿಸಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಜಗತ್ತಿಗೆ ಹೆಚ್ಚು ಸಂಕಲ್ಪ ಮತ್ತು ಪ್ರಗತಿಯ ಅಗತ್ಯವಿರುವ ಸೌರ ವಿದ್ಯುತ್ ಕ್ಷೇತ್ರದಲ್ಲಿ ವಿಶ್ವವನ್ನು ಮುನ್ನಡೆಸಲು ಭಾರತ ಬದ್ಧವಾಗಿದೆ’ ಎಂದು ಅವರು ಹೇಳಿದರು. ಇದೇವೇಳೆ, ಇದು(ಭಾರತ) ಡಿಜಿಟಲ್ ಕರೆನ್ಸಿಗಳ ಮುಂಚೂಣಿಯಲ್ಲಿರುವ ದೇಶವಾಗಿದೆ. ವಿಶೇಷವಾಗಿ, ರಿಸರ್ವ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಪರಿಚಯಿಸುವ ಮೂಲಕ ಭಾರತೀಯ ಜನರು ಮತ್ತು ವ್ಯವಹಾರಗಳನ್ನು ಕ್ರಿಪ್ಟೊ ಸ್ವತ್ತುಗಳ ಅಪಾಯದಿಂದ ಪಾರು ಮಾಡುತ್ತಿದೆ’ ಎಂದು ಜಾರ್ಜಿವಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT