ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪನಿಗಳ ವಿಶ್ವಾಸ ಕುಗ್ಗಿಸಿದ ಎರಡನೇ ಅಲೆ: ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ

Last Updated 31 ಮೇ 2021, 16:32 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಸಾಂಕ್ರಾಮಿಕದ ಎರಡನೇ ಅಲೆಯು ಭಾರತದ ಕಾರ್ಪೊರೇಟ್‌ ವಲಯದ ವಿಶ್ವಾಸವನ್ನು ಕುಗ್ಗಿಸಿದೆ ಎನ್ನುವುದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘವು (ಫಿಕ್ಕಿ) ಈಚೆಗೆ ನಡೆಸಿರುವ ಸಮೀಕ್ಷೆಯಿಂದ ಗೊತ್ತಾಗಿದೆ.

ವಾಣಿಜ್ಯ ವಿಶ್ವಾಸ ಸೂಚ್ಯಂಕವು ಹಿಂದಿನ ಬಾರಿ ಇದ್ದ 74.2ಕ್ಕೆ ಹೋಲಿಸಿದರೆ ಈ ಬಾರಿ 51.5ಕ್ಕೆ ಕುಸಿದಿದೆ ಎಂದು ಫಿಕ್ಕಿ ತಿಳಿಸಿದೆ. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಸೋಂಕು ಪ್ರಕರಣಗಳು ತೀವ್ರವಾಗಿ ಹೆಚ್ಚಾಗಿವೆ. ಇದನ್ನು ನಿಯಂತ್ರಿಸಲು ಹಲವು ರಾಜ್ಯಗಳಲ್ಲಿ ಮತ್ತೆ ಸೀಮಿತವಾದ ಲಾಕ್‌ಡೌನ್‌ಗಳನ್ನು ಜಾರಿಗೊಳಿಸಲಾಗಿದೆ. ಇದು ಆರ್ಥಿಕ ಬೆಳವಣಿಗೆಯ ನಿರೀಕ್ಷೆಗಳನ್ನು ತಗ್ಗಿಸಿದೆ.

ಎರಡನೇ ಅಲೆಯ ಪರಿಣಾಮವು ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ತಟ್ಟಿದೆ. ಆರ್ಥಿಕತೆಯ ಮೇಲೆ ಕೋವಿಡ್‌ನಿಂದಾಗಿ ಈಗ ಬಿದ್ದಿರುವ ಹೊಡೆತದಿಂದ ಚೇತರಿಕೆ ಕಾಣಲು ಬೇಡಿಕೆ ಹೆಚ್ಚಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಅದು ಸಲಹೆ ನೀಡಿದೆ.

ವಿವಿಧ ವಲಯಗಳಿಗೆ ಸೇರಿದ 180 ಕಂಪನಿಗಳ ಪ್ರತಿಕ್ರಿಯೆ ಪಡೆಯಲಾಗಿದೆ. ಬೇಡಿಕೆ ಸ್ಥಿತಿಯು ದುರ್ಬಲವಾಗಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಪ್ರತಿ ನಾಲ್ವರಲ್ಲಿ ಮೂವರು ಹೇಳಿದ್ದಾರೆ.

ಹಣಕಾಸು ವಿಶ್ಲೇಷಣಾ ವೇದಿಕೆ ಆಗಿರುವ ರಿಫಿನಿಟಿವ್ ಐಕಾನ್‌ ಪ್ರಕಾರ, ಮಾರ್ಚ್‌ ತ್ರೈಮಾಸಿಕ ಫಲಿತಾಂಶ ಅವಧಿಯು ಮುಕ್ತಾಯವಾಗಿದ್ದು, ನಿಫ್ಟಿ–50 ಸೂಚ್ಯಂಕದಲ್ಲಿನ 42 ಕಂಪನಿಗಳಲ್ಲಿ 18 ಕಂಪನಿಗಳು ಮಾತ್ರವೇ ಮಾರುಕಟ್ಟೆ ನಿರೀಕ್ಷೆಯನ್ನು ಮೀರಿ ಗಳಿಕೆ ಕಂಡುಕೊಂಡಿವೆ. ಆದರೆ, ರೇಟಿಂಗ್ಸ್‌ ಸಂಸ್ಥೆ ಫಿಚ್‌ ಪ್ರಕಾರ, 2020ಕ್ಕೆ ಹೋಲಿಸಿದರೆ ಎರಡನೇ ಅಲೆಯ ಪರಿಣಾಮವು ಕಾರ್ಪೊರೇಟ್‌ ವಲಯದ ಮೇಲೆ ಕಡಿಮೆ ಮಟ್ಟದಲ್ಲಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT