ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ವರ್ಷಗಳ ಗರಿಷ್ಠ ಮಟ್ಟಕ್ಕೆ ಸೇವಾ ವಲಯದ ಚಟುವಟಿಕೆ

Published 3 ಮೇ 2023, 14:56 IST
Last Updated 3 ಮೇ 2023, 14:56 IST
ಅಕ್ಷರ ಗಾತ್ರ

ನವದೆಹಲಿ: ಸೇವೆಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಹಾಗೂ ಕಂಪನಿಗಳಿಗೆ ಹೊಸ ವಹಿವಾಟುಗಳು ಸಿಗುತ್ತಿರುವುದರಿಂದ ದೇಶದ ಸೇವಾ ವಲಯದ ಚಟುವಟಿಕೆಯು ಏಪ್ರಿಲ್‌ ತಿಂಗಳಿನಲ್ಲಿ ಸರಿಸುಮಾರು 13 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆ ಹೇಳಿದೆ.

ಮಾರುಕಟ್ಟೆ ಪರಿಸ್ಥಿತಿಯು ಅನುಕೂಲಕರವಾಗಿ ಇರುವುದರಿಂದ ಬೆಲೆ ಏರಿಕೆಯ ಒತ್ತಡದ ನಡುವೆಯೂ ಸೇವಾ ವಲಯದ ಚಟುವಟಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಅದು ತಿಳಿಸಿದೆ.

ವಲಯದ ಚಟುವಟಿಕೆಯನ್ನು ಸೂಚಿಸುವ ಸೂಚ್ಯಂಕವು ಮಾರ್ಚ್‌ನಲ್ಲಿ 57.8ರಷ್ಟು ಇದ್ದಿದ್ದು ಏಪ್ರಿಲ್‌ನಲ್ಲಿ 62ಕ್ಕೆ ಏರಿಕೆ ಕಂಡಿದೆ. 2010ರ ಮಧ್ಯಭಾಗದಿಂದ ಈಚೆಗೆ ಅತ್ಯಂತ ವೇಗದ ಬೆಳವಣಿಗೆಯನ್ನು ಇದು ಸೂಚಿಸಿದೆ.

ಹಣಕಾಸು ಮತ್ತು ವಿಮಾ ವಲಯದ ಸೇವೆಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಬೆಳವಣಿಗೆ ಪ್ರಮಾಣವು ಗರಿಷ್ಠ ಮಟ್ಟದ್ದಾಗಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಮಾರ್ಕೆಟ್‌ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ ಲಿಮಾ ಹೇಳಿದ್ದಾರೆ.

ಭಾರತದ ಸೇವೆಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಯು ಏಪ್ರಿಲ್‌ನಲ್ಲಿ ಸುಧಾರಿಸಿದೆ. ಹೊಸ ರಫ್ತು ವಹಿವಾಟು ಸತತ ಮೂರನೇ ತಿಂಗಳಿನಲ್ಲಿಯೂ ಪ್ರಗತಿ ಕಂಡಿದೆ. ಆದರೆ, ವೆಚ್ಚದ ಪ್ರಮಾಣವು ಏಪ್ರಿಲ್‌ನಲ್ಲಿ ಮೂರು ತಿಂಗಳ ವೇಗದ ಏರಿಕೆ ಕಂಡಿದೆ. ಆಹಾರ, ಇಂಧನ, ಔಷಧ, ಸಾರಿಗೆ ಮತ್ತು ವೇತನವು ವೆಚ್ಚ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ.

ಸಿಬ್ಬಂದಿ ಸಂಖ್ಯೆ ಅಲ್ಪ ಏರಿಕೆ:

ಹೊಸ ಬೇಡಿಕೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದ್ದರೂ ಕಂಪನಿಗಳಲ್ಲಿ ಸಿಬ್ಬಂದಿ ಸಂಖ್ಯೆಯು ಕಡಿಮೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸದ್ಯದ ಕೆಲಸದ ಅಗತ್ಯಕ್ಕೆ ಸಾಕಾಗುವಷ್ಟು ಕೆಲಸಗಾರರು ಇರುವುದರಿಂದ ಬಹುಪಾಲು ಕಂಪನಿಗಳು ಸಿಬ್ಬಂದಿ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಸೇವಾ ವಲಯದಲ್ಲಿ ಇರುವ ಒಟ್ಟು ಕಂಪನಿಗಳಲ್ಲಿ ಶೇ 22ರಷ್ಟು ಕಂಪನಿಗಳು ಮುಂದಿನ 12 ತಿಂಗಳಲ್ಲಿ ವಹಿವಾಟಿನಲ್ಲಿ ಬೆಳವಣಿಗೆ ಕಾಣಲಿದೆ ಎಂದು ಹೇಳಿದ್ದರೆ, ಚಟುವಟಿಕೆಯಲ್ಲಿ ಇಳಿಕೆ ಆಗಬಹುದು ಎಂದು ಶೇ 2ರಷ್ಟು ಕಂಪನಿಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

ಕಂಪೋಸಿಟ್‌ ಪಿಎಂಐ:

ತಯಾರಿಕೆ ಮತ್ತು ಸೇವಾ ವಲಯದ ಒಟ್ಟು ಚಟುವಟಿಕೆಯನ್ನು ತಿಳಿಸುವ ಕಂಪೋಸಿಟ್‌ ಪಿಎಂಐ ಔಟ್‌ಪುಟ್‌ ಇಂಡೆಕ್ಸ್‌ ಮಾರ್ಚ್‌ನಲ್ಲಿ 58.4ರಷ್ಟು ಇದ್ದಿದ್ದು ಏಪ್ರಿಲ್‌ನಲ್ಲಿ 61.6ಕ್ಕೆ ಏರಿಕೆ ಆಗಿದೆ. ಇದು ಸಹ 2010ರ ನಂತರದ ಗರಿಷ್ಠ ಪ್ರಮಾಣದ ಬೆಳವಣಿಗೆಯಾಗಿದೆ.

ವಹಿವಾಟು ಏರಿಕೆ ಕಂಡಿದ್ದರೂ ಉದ್ಯೋಗ ಸೃಷ್ಟಿಯು ಖಾಸಗಿ ವಲಯದಲ್ಲಿ ದುರ್ಬಲವಾಗಿಯೇ ಇದೆ. ಹಣದುಬ್ಬರವು ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ ಎಂದು ಸಂಸ್ಥೆಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT