ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಆರ್ಥಿಕತೆಯ ತ್ವರಿತ ಬೆಳವಣಿಗೆ | ನಿರ್ಮಲಾ ಸೀತಾರಾಮನ್‌ ಪ್ರತಿಪಾದನೆ

ಹಣಕಾಸು ಸಚಿವೆ
Last Updated 18 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಭಾರತದ ಆರ್ಥಿಕತೆಯು ವಿಶ್ವದಲ್ಲಿಯೇ ಅತ್ಯಂತ ತ್ವರಿತವಾಗಿ ಬೆಳವಣಿಗೆಯಾಗುತ್ತಿದ್ದು, ಅದರ ವೇಗ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

‘ವಿಶ್ವಬ್ಯಾಂಕ್‌ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌), ಪ್ರಸಕ್ತ ಹಣಕಾಸು ವರ್ಷದ ಜಾಗತಿಕ ಆರ್ಥಿಕತೆಯ ಬೆಳವಣಿಗೆಯ ದರದ ಮುನ್ನೋಟವನ್ನೇ ತಗ್ಗಿಸಿವೆ. ಜತೆಗೆ ಭಾರತದ ಮುನ್ನೋಟವನ್ನು ಗಮನಾರ್ಹವಾಗಿ ತಗ್ಗಿಸಿದ್ದರೂ, ಸದ್ಯದ ಜಾಗತಿಕ ಸಂದರ್ಭದಲ್ಲಿ ದೇಶಿ ಆರ್ಥಿಕತೆ ಅತ್ಯಂತ ವೇಗವಾಗಿ ಬೆಳವಣಿಗೆ ದಾಖಲಿಸುತ್ತಿದೆ. ಅತ್ಯಂತ ತ್ವರಿತ ಪ್ರಗತಿ ಕಾಣುತ್ತಿರುವ ವಿಶ್ವದ ಆರ್ಥಿಕತೆಯಲ್ಲಿ ಭಾರತವೂ ಒಂದಾಗಿದೆ. ಆರ್ಥಿಕತೆಗೆ ಇನ್ನಷ್ಟು ವೇಗ ನೀಡಲು ನನ್ನಿಂದ ಸಾಧ್ಯವಿರುವ ಪ್ರಯತ್ನಗಳನ್ನೆಲ್ಲ ಮಾಡುತ್ತಿರುವೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಆರ್ಥಿಕತೆಯ ಹಲವಾರು ಸಂಗತಿಗಳಿಗೆ ಭಾವನಾತ್ಮಕ ಕಾರಣಗಳು ಇರುತ್ತವೆ. ದೇಶಿ ಆರ್ಥಿಕತೆಯು ಈ ಹಿಂದೆ ದಾಖಲಿಸಿದ ವೇಗದಲ್ಲಿ ಸದ್ಯಕ್ಕೆ ಪ್ರಗತಿ ಕಾಣುತ್ತಿಲ್ಲ. ವೃದ್ಧಿ ದರವು ಶೇ 8, ಶೇ 7 ಅಥವಾ ಅದಕ್ಕಿಂತ ಕಡಿಮೆ ಮಟ್ಟವಾದ ಶೇ 6ಕ್ಕಿಂತ ಕೆಳಗೆ ಇಳಿಯುವುದು ಮಹತ್ವದ ಸಂಗತಿ ಹೌದು. ಸದ್ಯದ ಪ್ರತಿಕೂಲ ಸಂದರ್ಭದಲ್ಲಿ ಭಾರತದ ಸಾಧನೆಯನ್ನು ಕಡಿಮೆ ಮಟ್ಟಕ್ಕೆ ಅಂದಾಜು ಮಾಡಲು ನಾನು ಬಯಸುವುದಿಲ್ಲ. ಈ ಪರಿಸ್ಥಿತಿ ಇನ್ನೆಷ್ಟು ದಿನ ಇರಲಿದೆ ಎನ್ನುವುದನ್ನು ಊಹಿಸಲಿಕ್ಕಾಗದು. ಅರ್ಥ ವ್ಯವಸ್ಥೆಯ ವಿವಿಧ ವಲಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಗಮನ ಕೇಂದ್ರೀಕರಿಸಿರುವೆ.

‘ಆರ್ಥಿಕ ಬೆಳವಣಿಗೆ ದರ ಕುಂಠಿತಗೊಂಡಿರುವುದಕ್ಕೆ ಉತ್ಪಾದನಾ ಚಟುವಟಿಕೆ, ಬೇಡಿಕೆಯಲ್ಲಿನ ಏರಿಳಿತ ಮತ್ತು ವಿವಿಧ ವಲಯಗಳಲ್ಲಿನ ಮಂದ ಪ್ರಗತಿ ಕಾರಣಗಳು ಇರಬಹುದು. ಜಿಡಿಪಿಯ ಶೇ 3.3ಕ್ಕೆ ವಿತ್ತೀಯ ಕೊರತೆ ಕಾಯ್ದುಕೊಳ್ಳುವ ಗುರಿ ಬಗ್ಗೆ ಈ ಹಂತದಲ್ಲಿ ನಾನೇನೂ ಹೇಳಲಾರೆ. ಕೈಗಾರಿಕಾ ವಲಯ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಗಮನ ಕೇಂದ್ರೀಕರಿಸಿದ್ದೇನೆ’ ಎಂದು ನಿರ್ಮಲಾ ಹೇಳಿದ್ದಾರೆ.

ಆದಾಯ ತೆರಿಗೆ ಪ್ರಮಾಣ ತಗ್ಗಿಸುವ ಸಾಧ್ಯತೆ ಇದೆಯೇ? ಎಂದು ಕೇಳಿದ ಪ್ರಶ್ನೆಗೆ, ‘ಅಂತ ನಿರ್ಧಾರ ತೆಗೆದುಕೊಂಡಾಗ ನಿಮಗೇ ಗೊತ್ತಾಗುತ್ತದೆ’ ಎಂದು ಉತ್ತರಿಸಿದ್ದಾರೆ.

ಚೀನಾ ವೃದ್ಧಿ ದರ ಶೇ 6 ರಷ್ಟು
ಬೀಜಿಂಗ್‌:
ವಿಶ್ವದ 2ನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾದ ಆರ್ಥಿಕ ವೃದ್ಧಿ ದರವು ಮೂರನೇ ತ್ರೈಮಾಸಿಕದಲ್ಲಿ ಶೇ 6ರಷ್ಟಾಗಿದೆ.

ಇದು 30 ವರ್ಷಗಳಲ್ಲಿನ ಅತಿ ಕಡಿಮೆ ಮಟ್ಟದ ಬೆಳವಣಿಗೆ ದರವಾಗಿದೆ. ದೇಶಿ ಬೇಡಿಕೆ ಕುಸಿದಿರುವುದು ಮತ್ತು ಅಮೆರಿಕ ಜತೆಗಿನ ವಾಣಿಜ್ಯ ಸಮರದ ಬಿಕ್ಕಟ್ಟಿನ ಕಾರಣಕ್ಕೆ ‘ಜಿಡಿಪಿ’ ಮಂದಗತಿಯ ಪ್ರಗತಿ ದಾಖಲಿಸಿದೆ.

**

ದೇಶಿ ಆರ್ಥಿಕತೆ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳವಣಿಗೆ ದಾಖಲಿಸುತ್ತಿದೆ. ಇದು ನನ್ನಲ್ಲಿ ಸಂತೃಪ್ತ ಭಾವ ಮೂಡಿಸಿಲ್ಲ. ಇದು ಇನ್ನೂ ಹೆಚ್ಚಿನ ಮಟ್ಟದಲ್ಲಿ ಇರಬೇಕು ಎನ್ನುವುದು ನನ್ನ ಆಶಯ.
– ನಿರ್ಮಲಾ ಸೀತಾರಾಮನ್‌, ಕೇಂದ್ರ ಹಣಕಾಸು ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT